Advertisement

IPL 2023: ಪಂಜಾಬ್‌ ಕಿಂಗ್ಸ್‌ ವಿರುದ್ಧ ಗುಜರಾತ್‌ಗೆ ರೋಚಕ ಗೆಲುವು

12:35 AM Apr 14, 2023 | Team Udayavani |

ಮೊಹಾಲಿ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಗುರುವಾರದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.

Advertisement

ನಿಖರ ದಾಳಿಯ ಮೂಲಕ ಪಂಜಾಬ್‌ ಮೊತ್ತವನ್ನು 8 ವಿಕೆಟಿಗೆ 153 ರನ್ನಿಗೆ ನಿಯಂತ್ರಿಸಿದ್ದ ಗುಜರಾತ್‌ ತಂಡವು ಆಬಳಿಕ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿ 19.5 ಓವರ್‌ಗಳಲ್ಲಿ 4 ವಿಕೆಟಿಗೆ 154 ರನ್‌ ಪೇರಿಸಿ ಜಯಭೇರಿ ಬಾರಿಸಿತು.

ಸಾಹಾ, ಶುಭ್‌ಮನ್‌ ಗಿಲ್‌ ಉತ್ತಮ ಆಟ
ವೃದ್ಧಿಮಾನ್‌ ಸಾಹಾ, ಶುಭ್‌ಮನ್‌ ಗಿಲ್‌ ಅವರ ಉತ್ತಮ ಆಟದಿಂದಾಗಿ ಗುಜರಾತ್‌ ಸುಲಭವಾಗಿ ಗೆಲುವಿನ ಗುರಿ ತಲುಪಿತು. ಸಾಹಾ ಮತ್ತು ಗಿಲ್‌ ಮೊದಲ ವಿಕೆಟಿಗೆ 48 ರನ್‌ ಪೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸಾಹಾ 30 ರನ್ನಿಗೆ ಔಟಾದರೆ ಗಿಲ್‌ 67 ರನ್‌ ಗಳಿಸಿ ಅಂತಿಮ ಓವರಿನಲ್ಲಿ ಔಟಾದರು. 49 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

ನಿಖರ ದಾಳಿ ಸಂಘಟಿಸಿದ ಹರ್‌ಪ್ರೀತ್‌ ಬ್ರಾರ್‌ ತನ್ನ 4 ಓವರ್‌ಗಳಲ್ಲಿ 20 ರನ್‌ ಬಿಟ್ಟುಕೊಟ್ಟು ಒಂದು ವಿಕೆಟ್‌ ಪಡೆದರು.

153 ರನ್ನಿಗೆ ನಿಯಂತ್ರಣ
ಈ ಮೊದಲು ಮಧ್ಯಮ ವೇಗಿ ಮೋಹಿತ್‌ ಶರ್ಮ ಅವರ ಬಿಗು ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಪಂಜಾಬ್‌ ಕಿಂಗ್ಸ್‌ ತಂಡದ ಮೊತ್ತವನ್ನು 8 ವಿಕೆಟಿಗೆ 153 ರನ್ನಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.

Advertisement

2022ರ ಬಳಿಕ ಐಪಿಎಲ್‌ನಲ್ಲಿ ಮೊದಲ ಬಾರಿ ಆಡಿದ ಮೋಹಿತ್‌ ಈ ಪಂದ್ಯದಲ್ಲಿ ನಿಖರ ದಾಳಿ ಸಂಘಟಸಿ ಪಂಜಾಬ್‌ನ ರನ್‌ವೇಗಕ್ಕೆ ಕಡಿವಾಣ ಹಾಕಿದರು. 19ನೇ ಓವರ್‌ ಎಸೆದ ಅವರು ಕೇವಲ ಆರು ರನ್‌ ಬಿಟ್ಟುಕೊಟ್ಟಿದ್ದರು. ಒಟ್ಟಾರೆ 4 ಓವರ್‌ ಎಸೆದ ಅವರು ಎರಡು ವಿಕೆಟ್‌ ಉರುಳಿಸಿದರಲ್ಲದೇ ಕೇವಲ 18 ರನ್‌ ಕೊಟ್ಟಿದ್ದರು.

ರನ್‌ ಖಾತೆ ತೆರೆಯುವ ಮೊದಲೇ ಪ್ರಭ್‌ಸಿಮ್ರಾನ್‌ ಸಿಂಗ್‌ ಅವರನ್ನು ಕಳೆದುಕೊಂಡು ಆಘಾತ ಅನುಭವಿಸಿತ್ತು. ಅನುಭವಿ ಶಿಖರ್‌ ಧವನ್‌ ಹೆಚ್ಚು ಹೊತ್ತು ನಿಲ್ಲಲು ವಿಫ‌ಲರಾದರು. 8 ರನ್‌ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್‌, ಶಾರೂಖ್‌ ಖಾನ್‌, ಭಾನುಕ ರಾಜಪಕ್ಷ, ಜಿತೇಶ್‌ ಶರ್ಮ ಉತ್ತಮವಾಗಿ ಆಡಿದ್ದರಿಂದ ತಂಡ ಚೇತರಿಸಿಕೊಂಡಿತು. ಆದರೆ ಇವರೆಲ್ಲರೂ ನಿಧಾನವಾಗಿ ಆಡಿದ್ದರಿಂದ ತಂಡ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಿಲ್ಲ.
24 ಎಸೆತಗಳಿಂದ 36 ರನ್‌ ಗಳಿಸಿದ ಮ್ಯಾಥ್ಯೂ ಶಾರ್ಟ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಶಾರೂಖ್‌ ಖಾನ್‌ 9 ಎಸೆತಗಳಿಂದ 22 ರನ್‌ ಗಳಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟಿತು. ಸ್ಯಾಮ್‌ ಕರನ್‌ 22, ಜಿತೇಶ್‌ ಶರ್ಮ 25 ಮತ್ತು ರಾಜಪಕ್ಷ 20 ರನ್‌ ಹೊಡೆದರು.

ಗುಜರಾತ್‌ ಪರ ದಾಳಿಗಿಳಿದ ಐವರು ಬೌಲರ್‌ಗಳು ವಿಕೆಟ್‌ ಪಡೆಯಲು ಯಶಸ್ವಿಯಾಗಿದ್ದರು. ಅದರಲ್ಲಿಯೂ ಮೋಹಿತ್‌ ಶರ್ಮ ಅವರ ದಾಳಿ ಉತ್ಕೃಷ್ಟವಾಗಿತ್ತು. ಅವರು 18 ರನ್ನಿಗೆ 2 ವಿಕೆಟ್‌ ಹಾರಿಸಿದ್ದರೆ ರಶೀದ್‌ ಖಾನ್‌, ಅಲ್ಜಾರಿ ಜೊಸೆಫ್, ಲಿಟಲ್‌, ಶಮಿ ತಲಾ ಒಂದು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next