ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ 3ನೇ ಮುಖಾಮುಖೀಯಲ್ಲಿ ಗೆಲುವಿನ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಮಂಗಳವಾರದ ರೋಚಕ ಪಂದ್ಯದಲ್ಲಿ ರೋಹಿತ್ ಪಡೆ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲುಣಿಸಿತು. ಇದು ವಾರ್ನರ್ ಪಡೆಗೆ ಎದುರಾದ ಸತತ 4ನೇ ಸೋಲು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ 19.4 ಓವರ್‌ಗಳಲ್ಲಿ 172 ರನ್ ಗಳಿಸಿದರೆ, ಮುಂಬೈ 20 ಓವರ್‌ಗಳಲ್ಲಿ 4 ವಿಕೆಟಿಗೆ 173 ರನ್ ಬಾರಿಸಿತು. ಅಂತಿಮ ಎಸೆತದಲ್ಲಿ ಮುಂಬೈ ಗೆಲುವಿಗೆ ಅಗತ್ಯವಿದ್ದ 2 ರನ್ ಹೊಡೆಯಿತು.
ರೋಹಿತ್ ಶರ್ಮ-ಇಶಾನ್ ಕಿಶನ್ ಮುಂಬೈಗೆ ಭರ್ಜರಿ ಆರಂಭ ಒದಗಿಸಿದರು. ಹತ್ತರ ಸರಾಸರಿಯಲ್ಲಿ ರನ್ ಹರಿದು ಬಂತು. 7.3 ಓವರ್‌ಗಳಲ್ಲಿ 71 ರನ್ ಒಟ್ಟುಗೂಡಿತು. ಆಗ ಇಶಾನ್ ಕಿಶನ್ ರನೌಟಾದರು (31). ರೋಹಿತ್-ತಿಲಕ್ ವರ್ಮ ಸೇರಿಕೊಂಡು 50 ಎಸೆತಗಳಿಂದ 68 ರನ್ ಸೇರಿಸಿದರು. ತಿಲಕ್ ಗಳಿಕೆ 41 ರನ್ (29 ಎಸೆತ, 1 ಬೌಂಡರಿ, 4 ಸಿಕ್ಸರ್). ಸೂರ್ಯಕುಮಾರ್ ಅವರ ಗೋಲ್ಡನ್ ಡಕ್ ಸಂಕಟ ಇಲ್ಲಿಯೂ ಮುಂದುವರಿಯಿತು. ರೋಹಿತ್ 45 ಎಸೆತಗಳಿಂದ 65 ರನ್ (6 ಫೋರ್, 4 ಸಿಕ್ಸರ್) ಹೊಡೆದರು.
ವಾರ್ನರ್, ಅಕ್ಷರ್ ಫಿಫ್ಟಿ
ಸತತ 4ನೇ ಪಂದ್ಯದಲ್ಲೂ ನಾಯಕ ಡೇವಿಡ್ ವಾರ್ನರ್ ಅವರೇ ಡೆಲ್ಲಿ ಇನ್ನಿಂಗ್ಸ್‌ಗೆ ಆಸರೆ ಒದಗಿಸಬೇಕಾಯಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ 19ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ನಿಂತ ವಾರ್ನರ್ 51 ರನ್ ಕೊಡುಗೆ ಸಲ್ಲಿಸಿದರು. ಹಿಂದಿನ 3 ಪಂದ್ಯಗಳಲ್ಲೂ ವಾರ್ನರ್ ಕಪ್ತಾನನ ಆಟದ ಮೂಲಕ ಕ್ರಮವಾಗಿ 56, 37 ಮತ್ತು 65 ರನ್ ಬಾರಿಸಿದ್ದರು.
9ನೇ ಓವರ್ ತನಕ ಡೆಲ್ಲಿ ಬ್ಯಾಟಿಂಗ್ ಚೇತೋಹಾರಿಯಾಗಿತ್ತು. ಆಗ ಒಂದೇ ವಿಕೆಟಿಗೆ 76 ರನ್ ಸಂಗ್ರಹಗೊಂಡಿತ್ತು. ಪೃಥ್ವಿ ಶಾ (15) ಮತ್ತು ಮನೀಷ್ ಪಾಂಡೆ (26) ಒಂದಿಷ್ಟು ಭರವಸೆ ಮೂಡಿಸಿದ್ದರು. ಈ ಹಂತದಲ್ಲಿ ಲೆಗ್‌ಸ್ಪಿನ್ನರ್ ಪೀಯೂಷ್ ಚಾವ್ಲಾ ಮ್ಯಾಜಿಕ್ ಮಾಡಿ 3 ವಿಕೆಟ್ ಕೆಡವಿದರು. ಮನೀಷ್ ಪಾಂಡೆ ಬೆನ್ನಲ್ಲೇ ಯಶ್ ಧುಲ್ (2), ಲಲಿತ್ ಯಾದವ್ (2) ಪೆವಿಲಿಯನ್ ಸೇರಿಕೊಂಡರು. ಡೆಲ್ಲಿ ಮತ್ತೂಮ್ಮೆ ಸಾಮಾನ್ಯ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು. ಈ ಹಂತದಲ್ಲಿ ಅಕ್ಷರ್ ಪಟೇಲ್ ಕಪ್ತಾನನಿಗೆ ಉತ್ತಮ ಬೆಂಬಲವಿತ್ತರು. 6ನೇ ವಿಕೆಟಿಗೆ 35 ಎಸೆತಗಳಿಂದ 67 ರನ್ ಬಂತು.
ಡೇವಿಡ್ ವಾರ್ನರ್ ಆಟ ನಿಧಾನ ಗತಿಯಿಂದ ಕೂಡಿತ್ತು. 51 ರನ್ನಿಗೆ 47 ಎಸೆತ ತೆಗೆದುಕೊಂಡರು (6 ಬೌಂಡರಿ). ಅಕ್ಷರ್ ಪಟೇಲ್ ಬರೀ 25 ಎಸೆತಗಳಿಂದ 54 ರನ್ ಬಾರಿಸಿದರು. 4 ಬೌಂಡರಿ ಜತೆಗೆ ಡೆಲ್ಲಿ ಸರದಿಯ ಐದೂ ಸಿಕ್ಸರ್ ಅಕ್ಷರ್ ಬ್ಯಾಟ್‌ನಿಂದ ಸಿಡಿಯಿತು.
ಆದರೆ ಅಕ್ಷರ್ ಪಟೇಲ್ ನಿರ್ಗಮನ ಎನ್ನುವುದು ಡೆಲ್ಲಿ ಪಾಲಿಗೆ ಕಂಟಕವಾಗಿ ಕಾಡಿತು. 5ಕ್ಕೆ 165 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಡೆಲ್ಲಿ ಕೇವಲ 7 ರನ್ ಅಂತರದಲ್ಲಿ 5 ವಿಕೆಟ್ ಉರುಳಿಸಿಕೊಂಡಿತು. ಬೆಹ್ರೆಂಡಾರ್ಫ್ ಎಸೆದ 19ನೇ ಓವರ್‌ನಲ್ಲೇ 4 ವಿಕೆಟ್ ಬಿತ್ತು.