ಬೆಂಗಳೂರು: ಕೊನೆಯ ಲೀಗ್ ಪಂದ್ಯದ ತನಕ ಪ್ಲೇ ಆಫ್ ಕೌತುಕವನ್ನು ಕಾದಿರಿಸುವ ಐಪಿಎಲ್ “ತಂತ್ರಗಾರಿಕೆ’ ಈ ವರ್ಷವೂ ಮುಂದು ವರಿದಿದೆ. ರವಿವಾರ 2023ನೇ ಐಪಿಎ ಲ್‌ನ ಅಂತಿಮ “ಲೀಗ್ ದಿನ”ವಾಗಿದ್ದು, ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ.
ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಡು ಪ್ಲೆಸಿಸ್ ಪಡೆಗೆ ಗೆಲುವು ಅನಿವಾರ್ಯ. ಹೀಗಾಗಿ ಬೆಂಗಳೂರು ತಂಡದ ಭವಿಷ್ಯ ಗುಜರಾತ್ ಕೈಯಲ್ಲಿ ಅಡ ಗಿದೆ ಎನ್ನಲಡ್ಡಿಯಿಲ್ಲ. ಗುಜರಾತ್ ಈಗಾಗಲೇ ಮುಂದಿನ ಸುತ್ತು ಪ್ರವೇ ಶಿಸಿರುವು ದರಿಂದ ನಿರಾಳವಾಗಿದೆ. ಅಲ್ಲದೇ ಅಗ್ರಸ್ಥಾನವನ್ನೂ ಕಾಯ್ದುಕೊಂಡಿದೆ. ಅಕಸ್ಮಾತ್ ಆರ್‌ಸಿಬಿ ವಿರುದ್ಧ ಸೋತರೂ, ಬೇರೆ ಯಾವುದೇ ತಂಡ ಗೆದ್ದು ಪ್ಲೇ ಆಫ್ ಪ್ರವೇಶಿಸಿದರೂ ಹಾರ್ದಿಕ್ ಪಾಂಡ್ಯ ಪಡೆಯನ್ನು ಮೀರಿಸಲು ಸಾಧ್ಯವಿಲ್ಲ ಎಂಬುದು ಈ ಸಲದ ವಿಶೇಷ.
ಇದು ಆರ್‌ಸಿಬಿ-ಗುಜರಾತ್ ನಡುವಿನ 3ನೇ ಮುಖಾಮುಖೀ.
ಈ ಸೀಸನ್‌ನ ಪ್ರಥಮ ಪಂದ್ಯವೂ ಹೌದು. ಕಳೆದ ವರ್ಷ ಇತ್ತಂಡಗಳು 2 ಸಲ ಮುಖಾಮುಖೀ ಆಗಿದ್ದವು. ಒಂದನ್ನು ಆರ್‌ಸಿಬಿ, ಇನ್ನೊಂದನ್ನು ಗುಜರಾತ್ ಗೆದ್ದಿತ್ತು.
ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಜಯ ಸಾಧಿಸಿರುವುದು ವಿಶೇಷ. ಗುಜರಾತ್ 34 ರನ್ನುಗಳಿಂದ, ಆರ್‌ಸಿಬಿ 8 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ವಿಜೇತ ತಂಡಗಳೆರಡರ ಪರವೂ ಶತಕ ದಾಖಲಾಗಿತ್ತು. ಅಲ್ಲಿ ಶುಭಮನ್ ಗಿಲ್, ಇಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿ ಮೆರೆದಿದ್ದರು. ಇಬ್ಬರೂ ಆರಂಭಿಕರಾಗಿದ್ದುದು ಕಾಕತಾ ಳೀಯ. ರವಿವಾರ ರಾತ್ರಿ ಇಬ್ಬರೂ ಮುಖಾಮುಖೀ ಆಗುವುದನ್ನು ಕುತೂ ಹಲದಿಂದ ನಿರೀಕ್ಷಿಸಲಾಗಿದೆ.
ತವರಿನ ಲಾಭ
ಈ ಪಂದ್ಯ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯುವುದು ಆರ್‌ಸಿಬಿ ಪಾಲಿಗೆ ಲಾಭವಾಗಿ ಪರಿಣಮಿಸ ಬಹುದು ಎಂಬುದೊಂದು ಲೆಕ್ಕಾಚಾರ. ಹಾಗೆಯೇ ಡು ಪ್ಲೆಸಿಸ್ ಪಡೆಯ ರನ್‌ರೇಟ್ ಪ್ಲಸ್‌ನಲ್ಲಿರುವುದೂ ಗಮನಾರ್ಹ.
Related Articles
ಹೈದರಾಬಾದ್ ಪಡೆಯನ್ನು ಅವ ರದೇ ಅಂಗಳದಲ್ಲಿ ಮಗುಚಿದ ಪರಿ ನೋಡಿದರೆ ಆರ್‌ಸಿಬಿ ಭರ್ಜರಿ ಜೋಶ್‌ನಲ್ಲಿರುವುದು ಸ್ಪಷ್ಟ. ನಾಯಕ ಫಾ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿಯ ಕೀ ಪ್ಲೇಯರ್. ಈ ಮೂವರೇ ಇಡೀ ತಂಡದ ಬ್ಯಾಟಿಂಗ್ ಭಾರವನ್ನು ಹೊರುತ್ತ ಬಂದಿದ್ದಾರೆ. ಡು ಪ್ಲೆಸಿಸ್ 13 ಪಂದ್ಯಗಳಿಂದ 732 ರನ್ ಬಾರಿಸುವ ಜತೆಗೆ ಅತ್ಯಧಿಕ 36 ಸಿಕ್ಸರ್ ಸಿಡಿಸಿದ ಸಾಹಸಿಯೂ ಆಗಿದ್ದಾರೆ. ಕೊಹ್ಲಿ ಅವರದು 538 ರನ್ ಸಾಧನೆ. ಮ್ಯಾಕ್ಸ್‌ವೆಲ್ ಸತತ ಅರ್ಧ ಶತಕ ಬಾರಿಸುತ್ತ ಬಂದಿದ್ದಾರೆ. ಈ ಮೂವರು ಒಟ್ಟಿಗೇ ವಿಫಲರಾದ ನಿದರ್ಶನ ಇಲ್ಲದಿರುವುದು ಆರ್‌ಸಿಬಿ ಪಾಲಿನ ಅದೃಷ್ಟ ಎನ್ನಲಡ್ಡಿಯಿಲ್ಲ. ಹಾಗೆಯೇ ಈ ಮೂವರನ್ನು ಬಿಟ್ಟು ಮತ್ತೂಬ್ಬ ಕ್ರಿಕೆಟಿಗ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಿದೆಯೇ ಎಂಬುದಂತೂ ನೆನಪಾಗುತ್ತಿಲ್ಲ!
ಆರ್‌ಸಿಬಿಯ ಈವರೆಗಿನ ಪಯಣ ದಲ್ಲಿ ದಿನೇಶ್ ಕಾರ್ತಿಕ್, ಅನುಜ್ ರಾವತ್, ಮಹಿಪಾಲ್ ಲೊನ್ರೋರ್, ಪ್ರಭುದೇಸಾಯಿ, ಶಾಬಾಲ್ ಅಹ್ಮದ್ ಕೊಡುಗೆ ಏನೂ ಇಲ್ಲ. ಲೊನ್ರೋರ್ ಎಲ್ಲೋ ಒಂದು ಅರ್ಧ ಶತಕ ಹೊಡೆದಿದ್ದಾರೆ, ಅಷ್ಟೇ.
ಆರ್‌ಸಿಬಿ ಬೌಲಿಂಗ್ ಈಗೀಗ ಹರಿತ ಗೊಳ್ಳತೊಡಗಿದೆ. ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಜುಜುಬಿ 59 ರನ್ನಿಗೆ ಉದುರಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ ಹೈದರಾಬಾದ್‌ಗೆ 186 ರನ್ ಬಿಟ್ಟುಕೊಟ್ಟಿತು. ಹೆನ್ರಿಚ್ ಕ್ಲಾಸೆನ್ ಶತಕ ಕೂಡ ಬಾರಿಸಿದರು. ಮೊಹಮ್ಮದ್ ಸಿರಾಜ್, ವೇಯ್ನ ಪಾರ್ನೆಲ್, ಆಲ್‌ರೌಂಡರ್ ಮೈಕಲ್ ಬ್ರೇಸ್‌ವೆಲ್ ಎಸೆತ ಗಳು ಇನ್ನಷ್ಟು ಮೊನಚಾಗಬೇಕಿದೆ. ಗುಜರಾತ್ ಬ್ಯಾಟಿಂಗ್ ಸರದಿ ಅತ್ಯಂತ ಬಲಿಷ್ಠ ಇರುವುದರಿಂದ ಆರ್‌ಸಿಬಿ ಬೌಲರ್ ಅಗ್ನಿಪರೀಕ್ಷೆ ಎದುರಿಸ ಬೇಕಾದುದು ನಿಶ್ಚಿತ.
ಶುಭಮನ್ ಗಿಲ್, ಸಾಹಾ, ಸಾಯಿ ಸುದರ್ಶನ್, ಪಾಂಡ್ಯ, ಮಿಲ್ಲರ್, ತೆವಾ ಟಿಯಾ ಜತೆಗೆ ರಶೀದ್ ಖಾನ್ ಕೂಡ ಸಿಡಿದು ನಿಲ್ಲಬಲ್ಲರು. ಇವರಿಗೆ ಕಡಿವಾಣ ಹಾಕುವುದು ಅಷ್ಟು ಸುಲಭವಲ್ಲ.
ಶಮಿ, ರಶೀದ್ ಖಾನ್, ನೂರ್ ಅಹ್ಮದ್, ಮೋಹಿತ್ ಶರ್ಮ, ಯಶ್ ದಯಾಳ್, ಅಲ್ಜಾರಿ ಜೋಸೆಫ್, ಜೋಶುವ ಲಿಟ್ಲ ಅವರನ್ನು ಒಳಗೊಂಡ ಗುಜರಾತ್ ಬೌಲಿಂಗ್ ಇನ್ನಷ್ಟು ಹರಿತ ಹಾಗೂ ವೈವಿಧ್ಯಮಯ.