Advertisement

ಗುಜರಾತ್‌ಗೆ ಪಂಚ್‌ ಕೊಟ್ಟೀತೇ ಪಂಜಾಬ್‌? ; ಗೆದ್ದರೆ ಗುಜರಾತ್‌ ಪ್ಲೇ ಆಫ್ ಖಾತ್ರಿ

12:12 AM May 03, 2022 | Team Udayavani |

ನವೀ ಮುಂಬಯಿ: ಐಪಿಎಲ್‌ ಪದಾರ್ಪಣೆಯಲ್ಲೇ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಗುಜರಾತ್‌ ಟೈಟಾನ್ಸ್‌ ಮಂಗಳವಾರ ಹೊಸ ಎತ್ತರಕ್ಕೆ ಏರುವ ಸಾಧ್ಯತೆಯೊಂದರ ನಿರೀಕ್ಷೆಯಲ್ಲಿದೆ.

Advertisement

ಪಂಜಾಬ್‌ ಕಿಂಗ್ಸ್‌ ವಿರುದ್ಧ ಆಡಲಾಗುವ ಈ ಪಂದ್ಯವನ್ನು ಗೆದ್ದರೆ ಹಾರ್ದಿಕ್‌ ಪಾಂಡ್ಯ ಬಳಗ ಪ್ಲೇ ಆಫ್ಗೆ ಇನ್ನಷ್ಟು ಹತ್ತಿರವಾಗಲಿದೆ.

ಇನ್ನೊಂದೆಡೆ ಪಂಜಾಬ್‌ ಹಾದಿ ಕಠಿನಗೊಳ್ಳಲಿದೆ. ಎಂಥದೇ ಕಠಿನ ಸನ್ನಿವೇಶದಲ್ಲೂ ಎದುರಾಳಿಗೆ ತಿರುಗೇಟು ನೀಡಿ ಗೆದ್ದು ಬರುವ ಅಥವಾ ಎದುರಾಳಿ ಗೆಲುವನ್ನು ಕಸಿಯುವ ಅದೃಷ್ಟಶಾಲಿ ತಂಡ ಈ ಗುಜರಾತ್‌ ಟೈಟಾನ್ಸ್‌. ಆಡಿದ 9 ಪಂದ್ಯಗಳಲ್ಲಿ ಸೋತದ್ದು ಒಂದರಲ್ಲಿ ಮಾತ್ರ. ಹೊಂದಿರುವ ಅಂಕ 16. ರನ್‌ರೇಟ್‌ +0.377. ಇನ್ನೂ 5 ಪಂದ್ಯಗಳನ್ನು ಆಡಲಿಕ್ಕಿದೆ. ಹೀಗಾಗಿ ಗುಜರಾತ್‌ ಒತ್ತಡ ಮುಕ್ತ ತಂಡ. ಇದೇ ಖುಷಿ ಹಾಗೂ ಜೋಶ್‌ನಲ್ಲಿ ಪಂಜಾಬ್‌ ಮೇಲೆ ಸವಾರಿ ಮಾಡುವ ಸಿದ್ಧತೆಯಲ್ಲಿದೆ.

ಪಂಜಾಬ್‌ಗ ಜಯ ಅನಿವಾರ್ಯ
ಇನ್ನೊಂದೆಡೆ ಪಂಜಾಬ್‌ ಕಿಂಗ್ಸ್‌ 9 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ಜಯಿಸಿದೆ. ಗುಜರಾತ್‌ ಎದುರಿನ ಮೊದಲ ಸುತ್ತಿನ ಪಂದ್ಯವನ್ನು ಅಂತಿಮ ಎಸೆತದಲ್ಲಿ ಕಳೆದುಕೊಂಡಿದೆ. ಮತ್ತೆ ಸೋತರೆ ಮಾಯಾಂಕ್‌ ಅಗರ್ವಾಲ್‌ ಪಡೆಯ ಪ್ಲೇ ಆಫ್ ಪ್ರವೇಶಕ್ಕೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಪಂಜಾಬ್‌ಗ ಇಲ್ಲಿ ಗೆಲುವು ಅನಿವಾರ್ಯ. ಅಷ್ಟೇ ಅಲ್ಲ, ಮುಂದಿನೆಲ್ಲ ಪಂದ್ಯಗಳಲ್ಲೂ ಜಯ ಸಾಧಿಸುತ್ತ ಹೋಗಬೇಕಿದೆ.

ನಾಯಕ ಮಾಯಾಂಕ್‌ ಅಗರ್ವಾಲ್‌, ಶಿಖರ್‌ ಧವನ್‌, ಜಾನಿ ಬೇರ್‌ಸ್ಟೊ, ಲಿಯಮ್‌ ಲಿವಿಂಗ್‌ಸ್ಟೋನ್‌ ಅವರಂಥ ಸ್ಟಾರ್‌ ಆಟಗಾರರನ್ನು ಹೊಂದಿಯೂ ಪಂಜಾಬ್‌ ಇನ್ನೂ ನಿರೀಕ್ಷಿತ ಎತ್ತರ ತಲುಪಿಲ್ಲ. ಕಳೆದ ಪಂದ್ಯದಲ್ಲಿ ಲಕ್ನೋವನ್ನು 153ಕ್ಕೆ ನಿಯಂತ್ರಿಸಿದರೂ ಇದನ್ನು ಬೆನ್ನಟ್ಟಿ ಗೆಲ್ಲಲಾಗದಿದ್ದುದು ಪಂಜಾಬ್‌ ಅವಸ್ಥೆಗೆ ಸಾಕ್ಷಿ.
ರಬಾಡ, ಆರ್ಷದೀಪ್‌, ಸಂದೀಪ್‌, ರಿಷಿ ಧವನ್‌, ರಾಹುಲ್‌ ಚಹರ್‌ ಅವರನ್ನೊಳಗೊಂಡ ಪಂಜಾಬ್‌ ಬೌಲಿಂಗ್‌ ಪರವಾಗಿಲ್ಲ ಎಂಬ ಮಟ್ಟದಲ್ಲಿದೆ. ಆದರೆ ಬಲಿಷ್ಠ ಬ್ಯಾಟಿಂಗ್‌ ಲೈನ್‌ಅಪ್‌ ಹೊಂದಿರುವ ಹಾಗೂ ಉತ್ತಮ ಲಯದಲ್ಲಿರುವ ಗುಜರಾತ್‌ಗೆ ನಿಯಂತ್ರಣ ಹೇರುವುದು ಸುಲಭವಲ್ಲ. ಆರ್‌ಸಿಬಿ ಎದುರಿನ ಕಳೆದ ಪಂದ್ಯದ 171 ರನ್‌ ಗುರಿಯನ್ನು ಗುಜರಾತ್‌ ನಾಲ್ಕೇ ವಿಕೆಟ್‌ ನಷ್ಟದಲ್ಲಿ ಸಾಧಿಸಿತ್ತು.

Advertisement

ಗುಜರಾತ್‌ ವೈಭವ: ಸಾಹಾ, ಗಿಲ್‌, ಪಾಂಡ್ಯ, ಮಿಲ್ಲರ್‌, ತೆವಾಟಿಯಾ, ರಶೀದ್‌ ಖಾನ್‌ ಅವರೆಲ್ಲ ಒತ್ತಡವನ್ನು ಮೀರಿ ನಿಂತ ಆಟಗಾರರೆಂಬುದನ್ನು ಸಾಬೀತುಪಡಿಸಿದ್ದಾರೆ. ಇವರಲ್ಲಿ ಮ್ಯಾಥ್ಯೂ ವೇಡ್‌ ಬದಲು ಬಂದ ಸಾಹಾ ಅವಕಾಶವನ್ನು ಬಾಚಿಕೊಳ್ಳುತ್ತಿದ್ದಾರೆ. ನಾಯಕ ಪಾಂಡ್ಯ ಯಾವ ಕ್ರಮಾಂಕದಲ್ಲೂ ಬ್ಯಾಟ್‌ ಬೀಸಲು ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೂಟದ ಬೆಸ್ಟ್‌ ಫಿನಿಶರ್‌ಗಳಾದ ಮಿಲ್ಲರ್‌, ತೆವಾಟಿಯಾ, ರಶೀದ್‌ ಒಂದೇ ತಂಡದಲ್ಲಿರುವುದು ಗುಜರಾತ್‌ ವೈಭವವನ್ನು ತೆರೆದಿಟ್ಟಿದೆ.

ಗುಜರಾತ್‌ ಬೌಲಿಂಗ್‌ ತೀರಾ ಘಾತಕವೇನಲ್ಲ. ಶಮಿ, ಫ‌ರ್ಗ್ಯುಸನ್‌, ಸಂಗ್ವಾನ್‌, ಜೋಸೆಫ್, ಆರೋನ್‌ ಇಲ್ಲಿನ ಪ್ರಮುಖರು. ಇವರಲ್ಲಿ ರಶೀದ್‌ ಖಾನ್‌ ಮೊದಲಿನ ಚಾರ್ಮ್ ಹೊಂದಿಲ್ಲ. ಇದರ ಲಾಭವೆತ್ತಿದರೆ ಪಂಜಾಬ್‌ಗ ಮೇಲುಗೈ ಸಾಧ್ಯ ಎನ್ನಬಹುದೋ ಏನೋ.

Advertisement

Udayavani is now on Telegram. Click here to join our channel and stay updated with the latest news.

Next