Advertisement

ರಾಜಸ್ಥಾನಕ್ಕೆ ಆರೆಂಜ್‌ಆರ್ಮಿ ಸವಾಲು; ಸ್ಯಾಮ್ಸನ್‌-ವಿಲಿಯಮ್ಸನ್‌ ಪಡೆಗಳ ಮುಖಾಮುಖಿ

11:29 PM Mar 28, 2022 | Team Udayavani |

ಪುಣೆ: ಪ್ರಪ್ರಥಮ ಐಪಿಎಲ್‌ ಚಾಂಪಿಯನ್‌ ರಾಜಸ್ಥಾನ್‌ ರಾಯಲ್ಸ್‌ ಮಂಗಳವಾರ ಹೊಸ ಶಕ್ತಿಯೊಂದಿಗೆ 2022ನೇ ಸಾಲಿನ ಹೋರಾಟಕ್ಕೆ ಇಳಿಯಲಿದೆ.

Advertisement

ಎದುರಾಳಿ, ಕೇನ್‌ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ ಹೈದರಾಬಾದ್‌. ಇದು ಪ್ರಸಕ್ತ ಸಾಲಿನಲ್ಲಿ ಪುಣೆಯಲ್ಲಿ ನಡೆಯುವ ಮೊದಲ ಪಂದ್ಯ.

ಕೇರಳದ ಸ್ಟಂಪರ್‌ ಸಂಜು ಸ್ಯಾಮ್ಸನ್‌ ಅವರ ಸಾರಥ್ಯ ಹೊಂದಿರುವ ರಾಜಸ್ಥಾನ್‌ ಮೇಲ್ನೋಟಕ್ಕೆ ಅತ್ಯಂತ ಬಲಿಷ್ಠವಾಗಿ ಕಾಣುತ್ತಿದೆ. ಬ್ಯಾಟಿಂಗ್‌, ಬೌಲಿಂಗ್‌, ಆಲ್‌ರೌಂಡರ್‌ಗಳನ್ನು ಸಮಪ್ರಮಾಣದಲ್ಲಿ ಹೊಂದಿರುವುದು ರಾಜಸ್ಥಾನ್‌ ವೈಶಿಷ್ಟ್ಯ.

ಇಂಗ್ಲೆಂಡಿನ ಡ್ಯಾಶಿಂಗ್‌ ಬ್ಯಾಟರ್‌ ಜಾಸ್‌ ಬಟ್ಲರ್‌ ಮತ್ತು ಆರ್‌ಸಿಬಿಯಿಂದ ಆಗಮಿಸಿದ ದೇವದತ್ತ ಪಡಿಕ್ಕಲ್‌ ಅವರಿಂದ ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಮೊದಲ್ಗೊಳ್ಳುತ್ತದೆ. ಯಶಸ್ವಿ ಜೈಸ್ವಾಲ್‌ ಕೂಡ ಓಪನಿಂಗ್‌ ರೇಸ್‌ನಲ್ಲಿದ್ದಾರೆ. ಪವರ್‌ ಹಿಟ್ಟರ್‌ಗಳಾದ ಸಂಜು ಸ್ಯಾಮ್ಸನ್‌, ಶಿಮ್ರನ್‌ ಹೆಟ್‌ಮೈರ್‌, ಡುಸೆನ್‌, ಜಿಮ್ಮಿ ನೀಶಮ್‌, ರಿಯಾನ್‌ ಪರಾಗ್‌, ಕರುಣ್‌ ನಾಯರ್‌ ಅವರೆಲ್ಲ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.

ರಾಜಸ್ಥಾನದ ಬೌಲಿಂಗ್‌ ವಿಭಾಗ ಟೀಮ್‌ ಇಂಡಿಯಾದ ಅವಳಿ ಸ್ಪಿನ್ನರ್‌ಗಳಿಂದ ಬಲಿಷ್ಠಗೊಂಡಿದೆ. ಈ ಸ್ಪಿನ್‌ ಶಕ್ತಿಗಳೆಂದರೆ ಆರ್‌. ಅಶ್ವಿ‌ನ್‌ ಮತ್ತು ಯಜುವೇಂದ್ರ ಚಹಲ್‌. ಇವರ 8 ಓವರ್‌ ನಿರ್ಣಾಯಕ ಪಾತ್ರ ವಹಿಸಲಿದೆ. ವೇಗಕ್ಕೆ ಟ್ರೆಂಟ್‌ ಬೌಲ್ಟ್, ಪ್ರಸಿದ್ಧ್ ಕೃಷ್ಣ, ನವದೀಪ್‌ ಸೈನಿ, ನಥನ್‌ ಕೋಲ್ಟರ್‌ ನೈಲ್‌, ಕೆ.ಸಿ. ಕಾರ್ಯಪ್ಪ, ಕುಲ್ದೀಪ್‌ ಯಾದವ್‌ ಇದ್ದಾರೆ. ಇಷ್ಟು ವರ್ಷಗಳಿಗೆ ಹೋಲಿಸಿದರೆ ರಾಜಸ್ಥಾನ್‌ ಬೌಲಿಂಗ್‌ ಹೆಚ್ಚು ಘಾತಕ ಎಂಬುದರಲ್ಲಿ ಅನುಮಾನವಿಲ್ಲ.

Advertisement

ಇದನ್ನೂ ಓದಿ:ಪೋಲಿಶ್‌ ಓಪನ್‌ ಬ್ಯಾಡ್ಮಿಂಟನ್‌: ಕಿರಣ್‌, ಅನುಪಮಾ ಚಾಂಪಿಯನ್ಸ್‌

ವಿಲಿಯಮ್ಸನ್‌ ಮಾರ್ಗದರ್ಶನ
ಹೈದರಾಬಾದ್‌ ಅನುಭವಿ ನಾಯಕ ಕೇನ್‌ ವಿಲಿಯಮ್ಸನ್‌ ಅವರ ಮಾರ್ಗದರ್ಶನದಲ್ಲಿ ಸಾಗಬೇಕಿದೆ. ತಂಡದಲ್ಲಿ ಸ್ಟಾರ್‌ ಆಟಗಾರರ ತೀವ್ರ ಕೊರತೆ ಇದೆ. ರಶೀದ್‌ ಖಾನ್‌, ಜೇಸನ್‌ ಹೋಲ್ಡರ್‌, ಜಾನಿ ಬೇರ್‌ಸ್ಟೊ ಗೈರು ತಂಡಕ್ಕೆ ದೊಡ್ಡ ಹಿನ್ನಡೆಯೇ ಆಗಿದೆ. ಆದರೂ ಮೆಗಾ ಹರಾಜಿನ ವೇಳೆ ಟಿ20 ಸ್ಪೆಷಲಿಸ್‌ ಗಳನ್ನು ಖರೀದಿಸುವಲ್ಲಿ ಹೈದರಾಬಾದ್‌ ಯಶಸ್ವಿಯಾಗಿದೆ.

ನಿಕೋಲಸ್‌ ಪೂರಣ್‌, ಗ್ಲೆನ್‌ ಫಿಲಿಪ್ಸ್‌, ಸೌರಭ್‌ ತಿವಾರಿ, ಅಬ್ದುಲ್‌ ಸಮದ್‌, ಮಾರ್ಕ್‌ರಮ್‌, ರಾಹುಲ್‌ ತ್ರಿಪಾಠಿ, ಭುವನೇಶ್ವರ್‌ ಕುಮಾರ್‌, ಉಮ್ರಾನ್‌ ಮಲಿಕ್‌, ವಾಷಿಂಗ್ಟನ್‌ ಸುಂದರ್‌, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌ ಹೆಗಲ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಎಡಗೈ ಪೇಸರ್‌ ಟಿ. ನಟರಾಜನ್‌ ಮರಳಿರುವುದರಿಂದ ತಂಡದಲ್ಲಿ ಹೊಸ ಉತ್ಸಾಹ ಕಂಡುಬಂದಿದೆ.

ಬಹಳಷ್ಟು ಆಯ್ಕೆಗಳಿವೆ: ಸ್ಯಾಮ್ಸನ್‌
“ಒಂದು ಬಲಿಷ್ಠ ತಂಡವಾಗಿ ರೂಪುಗೊಂಡು ಹೋರಾಟ ನಡೆಸುವುದಕ್ಕೆ ನಾವು ಮೊದಲ ಆದ್ಯತೆ ನೀಡಬೇಕಿದೆ. ಈ ಬಾರಿ ನಮ್ಮ ತಂಡ ಸಾಕಷ್ಟು ವಿಭಿನ್ನವಾಗಿದೆ. ಬಹಳಷ್ಟು ಹೊಸಬರ ಆಗಮನವಾಗಿದೆ. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದು ಬಹಳ ಮುಖ್ಯ’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಹೇಳಿದ್ದಾರೆ.

“ಕಳೆದ 2-3 ಋತುಗಳ ವೈಫ‌ಲ್ಯದ ಪಾಠವನ್ನು ನಾವು ಕಲಿತು ತಿದ್ದಿಕೊಳ್ಳಬೇಕಿದೆ. ಸಾಕಷ್ಟು ಆಯ್ಕೆಗಳ ಕುರಿತು ಚರ್ಚಿಸಲಾಗಿದೆ. ಹರಾಜಿನಲ್ಲಿ ಅತ್ಯುತ್ತಮ ತಂಡವನ್ನು ಖರೀದಿಸಲಾಗಿದೆ. ಭಾರತದ ಮತ್ತು ವಿದೇಶದ ಪ್ರತಿಭಾನ್ವಿತ ಆಟಗಾರರಿದ್ದಾರೆ. ಇದೊಂದು ಸುದೀರ್ಘ‌ ಪಂದ್ಯಾವಳಿ. ಆಟಗಾರರೆಲ್ಲ ಫಿಟ್‌ನೆಸ್‌ ಕಾಯ್ದುಕೊಳ್ಳಬೇಕಾದುದು ಮುಖ್ಯ’ ಎಂದು ಸ್ಯಾಮ್ಸನ್‌ ಹೇಳಿದರು.

“ಕುಮಾರ ಸಂಗಕ್ಕರ, ಲಸಿತ ಮಾಲಿಂಗ ಅವರಂಥ ಶ್ರೇಷ್ಠ ಕ್ರಿಕೆಟಿಗರು ನಮ್ಮ ಕೋಚಿಂಗ್‌ ತಂಡದಲ್ಲಿರುವುದು ಸೌಭಾಗ್ಯ. ನಾವೆಲ್ಲ ಇವರ ಆಟವನ್ನೇ ನೋಡಿ ಬೆಳೆದವರು. ಈಗ ಅವರ ಮಾರ್ಗದರ್ಶನಲ್ಲಿ ಆಡುವ ಅದೃಷ್ಟ ನಮ್ಮದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next