Advertisement

ರಾಜಸ್ಥಾನ್‌ ರಾಯಲ್ಸ್‌ -ಗುಜರಾತ್‌ ಟೈಟಾನ್ಸ್‌ ಸಮಬಲರ ಸೆಣಸಾಟ

12:15 AM Apr 14, 2022 | Team Udayavani |

ನವೀ ಮುಂಬಯಿ: ಸಮಬಲ ತಂಡಗಳಾದ ರಾಜಸ್ಥಾನ್‌ ರಾಯಲ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ಗುರುವಾರದ ಐಪಿಎಲ್‌ ಸ್ಪರ್ಧೆಯಲ್ಲಿ ಮುಖಾಮುಖಿ ಆಗಲಿವೆ. ಸಂಜು ಸ್ಯಾಮ್ಸನ್‌ ಮತ್ತು ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮೇಲಾಟದಲ್ಲಿ ಯಾರು ಜಯ ಸಾಧಿಸಿಯಾರು ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳದ್ದು.

Advertisement

ಎರಡೂ ತಂಡಗಳು 4 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಜಯ ಸಾಧಿಸಿವೆ. ಆದರೆ ರನ್‌ರೇಟ್‌ ಆಧಾರದಲ್ಲಿ ರಾಜಸ್ಥಾನ್‌ ಅಗ್ರಸ್ಥಾನ ಅಲಂಕರಿಸಿದೆ. ಗುಜರಾತ್‌ 4ನೇ ಸ್ಥಾನದಲ್ಲಿದೆ.

ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಹ್ಯಾಟ್ರಿಕ್‌ ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಮೊದಲ ಸೋಲನುಭವಿಸಿತ್ತು. ಸನ್‌ರೈಸರ್ ಹೈದರಾಬಾದ್‌ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ನಿಚ್ಚಳ ಮೇಲುಗೈ ಸಾಧಿಸಿ ಗುಜರಾತ್‌ಗೆ 8 ವಿಕೆಟ್‌ಗಳಿಂದ ಆಘಾತವಿಕ್ಕಿತ್ತು. ಇದು ಪಾಂಡ್ಯ ಪಡೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಈ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಅಭಿನವ್‌ ಮನೋಹರ್‌ ಹೊರತುಪಡಿಸಿ ಬೇರೆ ಯಾರೂ ಬ್ಯಾಟಿಂಗ್‌ನಲ್ಲಿ ಕ್ಲಿಕ್‌ ಆಗಿರಲಿಲ್ಲ. ಮ್ಯಾಥ್ಯೂ ವೇಡ್‌, ಶುಭಮನ್‌ ಗಿಲ್‌, ಸಾಯಿಸುದರ್ಶನ್‌, ಡೇವಿಡ್‌ ಮಿಲ್ಲರ್‌ ವೈಫ‌ಲ್ಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಬಲಿಷ್ಠ ರಾಜಸ್ಥಾನ್‌ ವಿರುದ್ಧ ಮೇಲುಗೈ ಸಾಧಿಸಬೇಕಾದರೆ ಇವರೆಲ್ಲರ ಬ್ಯಾಟ್‌ಗಳೂ ಮಾತಾಡಬೇಕಿವೆ. ಬಿಗ್‌ ಹಿಟ್ಟರ್‌ ರಾಹುಲ್‌ ತೆವಾಟಿಯ ಅವರಿಗೆ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಭಡ್ತಿ ನೀಡುವ ಬಗ್ಗೆಯೂ ಆಲೋಚಿಸಬೇಕಿದೆ.

ಮೊಹಮ್ಮದ್‌ ಶಮಿ, ಲಾಕಿ ಫ‌ರ್ಗ್ಯುಸನ್‌, ರಶೀದ್‌ ಖಾನ್‌ ಅವರಂಥ ಅಂತಾರಾಷ್ಟ್ರೀಯ ಖ್ಯಾತಿಯ ಬೌಲರ್‌ಗಳಿದ್ದರೂ ಒಟ್ಟಾರೆಯಾಗಿ ಗುಜರಾತ್‌ ಬೌಲಿಂಗ್‌ ತೀರಾ ಸಾಮಾನ್ಯವಾಗಿ ಗೋಚರಿಸುತ್ತಿದೆ. ಬೇರೆ ಘಾತಕ ಬೌಲರ್‌ಗಳೂ ತಂಡದಲ್ಲಿ ಗೋಚರಿಸುತ್ತಿಲ್ಲ.

Advertisement

ಹೀಗಾಗಿ ರಾಜಸ್ಥಾನದ ಸಾಲು ಸಾಲು ಬಿಗ್‌ ಹಿಟ್ಟರ್‌ಗಳನ್ನು ತಡೆಯುವುದು ಗುಜರಾತ್‌ಗೆ ಭಾರೀ ಸವಾಲಾಗಿ ಪರಿಣಮಿಸಬಹುದು.

ರಾಯಲ್ಸ್‌ ರಾಜಸ್ಥಾನ್‌: ರಾಜಸ್ಥಾನ್‌ ಹೆಸರಿಗೆ ತಕ್ಕಂತೆ ರಾಯಲ್ಸ್‌ ತಂಡವೇ ಆಗಿದೆ. ಬ್ಯಾಟಿಂಗ್‌, ಬೌಲಿಂಗ್‌ ಎಲ್ಲವೂ ಡೇಂಜರಸ್‌. ಸಣ್ಣ ಉದಾಹರಣೆ ಕೊಡುವುದಾದರೆ, ಲಕ್ನೋ ಎದುರಿನ ಕಳೆದ ಪಂದ್ಯದಲ್ಲಿ ಟ್ರೆಂಟ್‌ ಬೌಲ್ಟ್ ಎಸೆದ ಫ‌ಸ್ಟ್‌ ಓವರ್‌. ಮೊದಲ ಎಸೆತದಲ್ಲೇ ಕೆ.ಎಲ್‌. ರಾಹುಲ್‌, ದ್ವಿತೀಯ ಎಸೆತದಲ್ಲಿ ಕೆ. ಗೌತಮ್‌ ವಿಕೆಟ್‌ ಉಡಾಯಿಸುವ ಮೂಲಕ ಎದುರಾಳಿಗೆ ಬಲವಾದ ಆಘಾತವಿಕ್ಕಿದರು. ಹೀಗಾಗಿ 165 ರನ್ನುಗಳ ಸಾಮಾನ್ಯ ಮೊತ್ತವನ್ನೂ ಉಳಿಸಿಕೊಳ್ಳಲು ರಾಜಸ್ಥಾನ್‌ಗೆ ಸಾಧ್ಯವಾಗಿತ್ತು.

ಪ್ರಸಿದ್ಧ್ ಕೃಷ್ಣ, ಆರ್‌. ಅಶ್ವಿ‌ನ್‌, ಚಹಲ್‌ ಜತೆಗೆ ನೂತನ ಬೌಲರ್‌ ಕುಲದೀಪ್‌ ಸೇನ್‌ ಕೂಡ ಪರಿಣಾಮಕಾರಿ ದಾಳಿ ಸಂಘಟಿಸಿದ್ದರು. ಗುಜರಾತ್‌ ಮೇಲುಗೈ ಸಾಧಿಸಬೇಕಾದರೆ ಈ ಘಾತಕ ದಾಳಿಯನ್ನು ಮೆಟ್ಟಿನಿಂತು ದೊಡ್ಡ ಮೊತ್ತ ಪೇರಿಸುವುದು ಅಗತ್ಯ.

ರಾಜಸ್ಥಾನ್‌ ಬ್ಯಾಟಿಂಗ್‌ ಲೈನಪ್‌ ಕೂಟದಲ್ಲೇ ಹೆಚ್ಚು ಬಲಿಷ್ಠ ಎಂಬುದನ್ನು ಒಪ್ಪಲೇಬೇಕು. ಬಟ್ಲರ್‌, ಪಡಿಕ್ಕಲ್‌, ಸ್ಯಾಮ್ಸನ್‌, ಡುಸೆನ್‌, ಹೆಟ್‌ಮೈರ್‌, ಜೈಸ್ವಾಲ್‌… ಹೀಗೆ ಸಾಲು ಸಾಲು ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿದೆ. ಗುಜರಾತ್‌ ಬೌಲಿಂಗ್‌ ಯೂನಿಟ್‌ ಕ್ಲಿಕ್‌ ಆದರಷ್ಟೇ ಇವರನ್ನೆಲ್ಲ ಒಂದು ಕೈ ನೋಡಿ ಕೊಳ್ಳ ಬಹುದು.

Advertisement

Udayavani is now on Telegram. Click here to join our channel and stay updated with the latest news.

Next