Advertisement

ಐಪಿಎಲ್‌ ಪಂದ್ಯ: ಆರ್‌ಸಿಬಿ ಮಣಿಸಿದ ಪಂಜಾಬ್; ಬೆಂಗಳೂರು ಪ್ಲೇಆಫ್ ಹಾದಿ ಕಠಿಣ

12:31 AM May 14, 2022 | Team Udayavani |

ಮುಂಬೈ: ಶುಕ್ರವಾರ ನಡೆದ ಪ್ಲೇಆಫ್ ಮಹತ್ವದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೋತುಹೋಗಿದೆ. ಅಲ್ಲಿಗೆ ತಂಡದ ಪ್ಲೇಆಫ್ ಹಾದಿ ಕಠಿಣಗೊಂಡಿದೆ.

Advertisement

ಅದು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಭಾರೀ ಅಂತರದಲ್ಲಿ ಗೆಲ್ಲಬೇಕು. ಹಾಗೆಯೇ ಡೆಲ್ಲಿ, ಹೈದರಾಬಾದ್‌ನಂತಹ ತಂಡಗಳು ಸೋಲಲಿ ಎಂದು ಹಾರೈಸಬೇಕಾದ ಪರಿಸ್ಥಿತಿ ಎದುರಾಗಿದೆ.

ಶುಕ್ರವಾರ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 9 ವಿಕೆಟಿಗೆ 209 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಬೆಂಗಳೂರು ಕೂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 155 ರನ್‌ ಗಳಿಸಿತು.

ಆರ್‌ಸಿಬಿ ಪರ ಗ್ಲೆನ್‌ ಮ್ಯಾಕ್ಸ್‌ವೆಲ್‌ 35 ರನ್‌ ಗಳಿಸಿದ್ದೇ ಗರಿಷ್ಠ. ಈಗ ತಂಡದ ಬ್ಯಾಟಿಂಗ್‌ ಪರಿಸ್ಥಿತಿಯನ್ನು ಊಹೆ ಮಾಡಿ!

ಕೊಹ್ಲಿ, ನಾಯಕ ಡು ಪ್ಲೆಸಿಸ್‌ ವೈಫ‌ಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಪಂಜಾಬ್‌ ಪರ ಕ್ಯಾಗಿಸೊ ರಬಾಡ (3), ರಿಷಿ ಧವನ್‌ (2), ರಾಹುಲ್‌ ಚಹರ್‌ (2) ಉತ್ತಮ ಬೌಲಿಂಗ್‌ ಮಾಡಿದರು.

Advertisement

ಸಿಡಿದ ಬೇರ್‌ಸ್ಟೊ, ಲಿವಿಂಗ್‌ಸ್ಟೋನ್‌: ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ಪರ ಜಾನಿ ಬೇರ್‌ಸ್ಟೊ, ಲಿಯಮ್‌ ಲಿವಿಂಗ್‌ಸ್ಟೋನ್‌ ಅರ್ಧಶತಕ ಬಾರಿಸಿ ಮೆರೆದಾಡಿದರು. ಲಿವಿಂಗ್‌ಸ್ಟೋನ್‌ 42 ಎಸೆತಗಳಿಂದ 70 ರನ್‌ ಬಾರಿಸಿದರೆ (5 ಬೌಂಡರಿ, 4 ಸಿಕ್ಸರ್‌), ಬೇರ್‌ಸ್ಟೊ ಕೇವಲ 29 ಎಸೆತ ಎದುರಿಸಿ 66 ರನ್‌ ಸಿಡಿಸಿದರು (4 ಬೌಂಡರಿ, 7 ಸಿಕ್ಸರ್‌).

ಬೇರ್‌ಸ್ಟೊ ಅವರ ಸ್ಫೋಟಕ ಆರಂಭದಿಂದ ಪಂಜಾಬ್‌ ರನ್‌ಗತಿ ಪ್ರವಾಹದ ರೀತಿಯಲ್ಲಿ ಏರತೊಡಗಿತು. 8.5 ಓವರ್‌ಗಳಲ್ಲಿ ತಂಡದ ಮೊತ್ತ 100 ರನ್‌ ಪೂರ್ತಿಗೊಂಡಿತು. ಆರ್‌ಸಿಬಿಯ ಯಾವ ಬೌಲರ್‌ಗಳಿಗೂ ರಿಯಾಯಿತಿ ತೋರದ ಬೇರ್‌ಸ್ಟೊ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಕೇವಲ 21 ಎಸೆತಗಳಲ್ಲಿ ಅವರ ಅರ್ಧಶತಕ ಪೂರ್ತಿಗೊಂಡಿತು. ಇದು ಐಪಿಎಲ್‌ನಲ್ಲಿ ಅವರ ಅತೀ ವೇಗದ 50 ರನ್‌ ಸಾಧನೆಯಾಗಿದೆ. ಆರ್‌ಸಿಬಿ ವಿರುದ್ಧವೇ 2019ರಲ್ಲಿ 28 ಎಸೆತಗಳಿಂದ ಅರ್ಧಶತಕ ಹೊಡೆದಿದ್ದರು. ಇದೂ ಸೇರಿದಂತೆ ಒಟ್ಟು 3 ಸಲ 28 ಎಸೆತಗಳಲ್ಲಿ ಫಿಫ್ಟಿ ದಾಖಲಿಸಿದ್ದಾರೆ.

ಬೇರ್‌ಸ್ಟೊ ಬಹುಮೂಲ್ಯ ವಿಕೆಟ್‌ ಶಹಬಾಜ್‌ ಅಹ್ಮದ್‌ ಪಾಲಾಯಿತು. 10ನೇ ಓವರ್‌ನ ಮೊದಲ ಎಸೆತದಲ್ಲಿ ಬೇರ್‌ಸ್ಟೊ ಔಟಾದೊಡನೆ ಮತ್ತೋರ್ವ ಬ್ಯಾಟಿಂಗ್‌ ದೈತ್ಯ ಲಿಯಮ್‌ ಲಿವಿಂಗ್‌ಸ್ಟೋನ್‌ ಅವರ ಅಬ್ಬರ ಮೊದಲ್ಗೊಂಡಿತು. ಅವರು ಇನ್ನಷ್ಟು ಆಕ್ರಮಣಕಾರಿಯಾಗಿ ಗೋಚರಿಸಿದರು.

ಶಿಖರ್‌ ಧವನ್‌ ಅವರನ್ನು ಬೌಲ್ಡ್‌ ಮಾಡುವ ಮೂಲಕ ಮ್ಯಾಕ್ಸ್‌ವೆಲ್‌ ಆರ್‌ಸಿಬಿಗೆ ಮೊದಲ ಬ್ರೇಕ್‌ ಒದಗಿಸಿದರು. ಆಗಲೇ ಪಂಜಾಬ್‌ 5 ಓವರ್‌ಗಳಲ್ಲಿ 60 ರನ್‌ ಪೇರಿಸಿತ್ತು. ಧವನ್‌ ಗಳಿಕೆ 15 ಎಸೆತಗಳಿಂದ 21 ರನ್‌. ಇದರಲ್ಲಿ 2 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು.

ಕಳೆದ ಪಂದ್ಯದ ಬೌಲಿಂಗ್‌ ಹೀರೋ ವನಿಂದು ಹಸರಂಗ ಮೊದಲ ಓವರ್‌ನಲ್ಲೇ ವಿಕೆಟ್‌ ಉರುಳಿಸಿದರು. ಅವರದೇ ನಾಡಿನ ಭಾನುಕ ರಾಜಪಕ್ಸೆ ಅವರನ್ನು ಒಂದೇ ರನ್ನಿಗೆ ವಾಪಸ್‌ ಕಳುಹಿಸಿದರು. ಆರಂಭಿಕನ ಸ್ಥಾನದಿಂದ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದ ನಾಯಕ ಮಾಯಾಂಕ್‌ ಅಗರ್ವಾಲ್‌ ಗಳಿಕೆ 19 ರನ್‌. ಅಲ್ಲಿಗೆ 15 ಓವರ್‌ಗಳ ಆಟ ಪೂರ್ತಿಗೊಂಡಿತು. ಪಂಜಾಬ್‌ ಸ್ಕೋರ್‌ 4ಕ್ಕೆ 152 ರನ್‌ ಆಗಿತ್ತು. ಅಂತಿಮ 5 ಓವರ್‌ಗಳಲ್ಲಿ 57 ರನ್‌ ಒಟ್ಟುಗೂಡಿತು.

ಜಿತೇಶ್‌ ಶರ್ಮ ಅವರನ್ನು ಔಟ್‌ ಮಾಡುವ ಮೂಲಕ ಹಸರಂಗ ತಮ್ಮ ವಿಕೆಟ್‌ ಗಳಿಕೆಯನ್ನು 23ಕ್ಕೆ ಏರಿಸಿಕೊಂಡರು. ಚಹಲ್‌ ಜತೆ ಅಗ್ರಸ್ಥಾನ ಹಂಚಿಕೊಂಡರು. 34 ರನ್ನಿಗೆ 4 ವಿಕೆಟ್‌ ಕಿತ್ತ ಹರ್ಷಲ್‌ ಪಟೇಲ್‌ ಆರ್‌ಸಿಬಿಯ ಯಶಸ್ವಿ ಬೌಲರ್‌. ಹೇಝಲ್‌ವುಡ್‌, ಸಿರಾಜ್‌ ಚೆನ್ನಾಗಿ ದಂಡಿಸಿಕೊಂಡರು.

ಒಂದೇ ಬದಲಾವಣೆ: ಪಂಜಾಬ್‌ ಕಿಂಗ್ಸ್‌ ಸಂದೀಪ್‌ ಶರ್ಮ ಅವರನ್ನು ಕೈಬಿಟ್ಟು ಹರ್‌ಪ್ರೀತ್‌ ಬ್ರಾರ್‌ ಅವರನ್ನು ಸೇರಿಸಿಕೊಂಡಿದ್ದೊಂದೇ ಈ ಪಂದ್ಯದಲ್ಲಿ ಸಂಭವಿಸಿದ ಬದಲಾವಣೆ. ಆರ್‌ಸಿಬಿ ಆಡುವ ಬಳಗದಲ್ಲಿ ಯಾವುದೇ ಪರಿವರ್ತನೆ ಮಾಡಿಕೊಳ್ಳಲಿಲ್ಲ. ಹೈದರಾಬಾದ್‌ ಎದುರಿನ ವಿಜೇತ ತಂಡವನ್ನೇ ನೆಚ್ಚಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌ 20 ಓವರ್‌, 209/9 (ಲಿಯಮ್‌ ಲಿವಿಂಗ್‌ಸ್ಟೋನ್‌ 70, ಜಾನಿ ಬೇರ್‌ಸ್ಟೊ 66, ಹರ್ಷಲ್‌ ಪಟೇಲ್‌ 34ಕ್ಕೆ 4). ಬೆಂಗಳೂರು 20 ಓವರ್‌, 155/9 (ಮ್ಯಾಕ್ಸ್‌ವೆಲ್‌ 35, ಕ್ಯಾಗಿಸೊ ರಬಾಡ 21ಕ್ಕೆ 3, ರಿಷಿ ಧವನ್‌ 36ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next