ಮುಂಬೈ: ಕಳೆದ ಎರಡು ವಾರಗಳಿಂದ ಈ ಜ್ವರದಿಂದ ಬಳಲುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ತಂಡದ ಕೊನೆಯ ಎರಡು ಲೀಗ್ ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆಯಿಲ್ಲ ಎಂದು ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಗುರುವಾರ ಹೇಳಿದ್ದಾರೆ.
ಪೃಥ್ವಿ ಶಾ ಕಳೆದ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಶಾ ಟೈಫಾಯಿಡ್ ನಿಂದ ಬಳಲುತ್ತಿದ್ದಾರೆ ಎಂದು ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಡಿಸಿ ನಾಯಕ ರಿಷಬ್ ಪಂತ್ ಹೇಳಿದ್ದಾರೆ. ಶಾ ಕೊನೆಯದಾಗಿ ಮೇ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿದ್ದರು.
ಇದನ್ನೂ ಓದಿ:ಪಂಜಾಬ್‌ಗ ಪಂಚ್ ಕೊಟ್ಟರೆ ಆರ್‌ಸಿಬಿ ಪ್ಲೇ ಆಫ್ಗೆ ಹತ್ತಿರ
“ಕೊನೆಯ ಎರಡು ಪಂದ್ಯಗಳಿಗೆ ಅವರು ಲಭ್ಯವಾಗುವ ಲಕ್ಷಣ ಕಾಣುತ್ತಿಲ್ಲ, ಇದು ನಮಗೆ ದೊಡ್ಡ ನಷ್ಟ. ಅವರು ಶೀಘ್ರದಲ್ಲೇ ಪೂರ್ಣ ಆರೋಗ್ಯಕ್ಕೆ ಮರಳುತ್ತಾರೆ ಎಂದು ಭಾವಿಸುತ್ತೇವೆ” ಎಂದು ಶೇನ್ ವಾಟ್ಸನ್ ಹೇಳಿದರು.
12 ಪಂದ್ಯವಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರು ಪಂದ್ಯಗಳಲ್ಲಿ ಗೆದ್ದು ಆರರಲ್ಲಿ ಸೋಲನುಭವಿಸಿದೆ. ಅಂಕಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.