Advertisement
ಐಪಿಎಲ್‌ನ ದ್ವಿತೀಯ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಹಗ್ಗದ ಮೇಲಲ್ಲ, ನೂಲಿನ ಮೇಲೆ ಸರ್ಕಸ್ ಮಾಡುತ್ತಿದೆ. ಒಂದು ಪಂದ್ಯದಲ್ಲಿ ಎಡವಿದರೂ ಅಧಿಕೃತವಾಗಿ ನಿರ್ಗಮಿಸಲಿದೆ. ಸದ್ಯ ಧೋನಿ ಪಡೆಯ ಭವಿಷ್ಯ ಮುಂಬೈ ಕೈಯಲ್ಲಿದೆ. ಇತ್ತಂಡಗಳು ಗುರುವಾರ ದ್ವಿತೀಯ ಸುತ್ತಿನ ಸೆಣಸಾಟಕ್ಕೆ ಇಳಿಯಲಿವೆ.
Related Articles
ಮುಂಬೈ ಎದುರಿನ ಮೊದಲ ಸುತ್ತಿನ ಪಂದ್ಯದಲ್ಲಿ ಧೋನಿ ಬೆಸ್ಟ್ ಫಿನಿಶರ್ ಪಾತ್ರ ವಹಿಸಿ ಚೆನ್ನೈಗೆ 3 ವಿಕೆಟ್‌ಗಳ ರೋಮಾಂಚಕಾರಿ ಗೆಲುವನ್ನು ತಂದಿತ್ತಿದ್ದರು. ಮನಸ್ಸು ಮಾಡಿದರೆ ಮುಂಬೈ ಇದಕ್ಕೆ ಸೇಡು ತೀರಿಸಿಕೊಂಡು ಧೋನಿ ಪಡೆಯನ್ನು ತನ್ನ ಕೈಯಿಂದಲೇ ಕೂಟದಿಂದ ಹೊರದಬ್ಬಬಹುದು. ಆದರೆ ಮುಂಬೈ ಅವಸ್ಥೆ ಹೇಳತೀರದು. ಹೇಗೋ ಮಾಡಿ ಉಳಿದ 3 ಪಂದ್ಯಗಳನ್ನು ಆಡಿ ಮುಗಿಸಿದರೆ ಸಾಕು ಎಂಬಂತಿದೆ ರೋಹಿತ್ ಬಳಗದ ಸ್ಥಿತಿ!
Advertisement
ಗಂಭೀರವಾಗಿ ಆಡಿದ್ದೇ ಆದಲ್ಲಿ ಕಳೆದ ಪಂದ್ಯದಲ್ಲಿ ಕೋಲ್ಕತಾವನ್ನು ಹೊರದಬ್ಬುವ ಅವಕಾಶ ಮುಂಬೈ ಮುಂದಿತ್ತು. ತಾನು ಬೇಗ ನಿರ್ಗಮಿಸಿದ್ದಕ್ಕೆ ಪ್ರತಿಫಲವಾಗಿ ಉಳಿದ ತಂಡಗಳ ಪಾಲಿಗೆ ಕಂಟಕವಾಗಿ ಕಾಡುವ ಮೂಲಕ ಸುದ್ದಿಯಲ್ಲಿರಬಹುದಿತ್ತು. ಆದರೆ ಮುಂಬೈ 113ಕ್ಕೆ ಆಲೌಟಾಗಿ ತಾನೇ ಹಳ್ಳಕ್ಕೆ ಬಿತ್ತು. ಕೋಲ್ಕತಾಕ್ಕೆ ಲೈಫ್ ಕೊಟ್ಟಿತು. ವಿಳಂಬವಾಗಿ ಫಾರ್ಮ್ ಗೆ ಮರಳಿ 5 ವಿಕೆಟ್ ಉಡಾಯಿಸಿದ ಬುಮ್ರಾ ಸಾಧನೆ ವ್ಯರ್ಥಗೊಂಡಿತು. ಇನ್ನೀಗ ಚೆನ್ನೈಯನ್ನು ಹೊರದಬ್ಬಲು ಮುಂಬೈಯಿಂದ ಸಾಧ್ಯವೇ ಎಂಬ ಪ್ರಶ್ನೆ ಕಾಡದೇ ಇರದು.
ಜೋಶ್ ತೋರೀತೇ ಚೆನ್ನೈ?ಚೆನ್ನೈ ಕೊನೆಯ ಪಂದ್ಯದಲ್ಲಿ ಡೆಲ್ಲಿಯನ್ನು 91 ರನ್ನುಗಳ ಭಾರೀ ಅಂತರದಿಂದ ಪರಾಭವಗೊಳಿಸಿ ಪರಾಕ್ರಮವೊಂದನ್ನು ತೋರ್ಪಡಿಸಿದೆ. ಧೋನಿ ವರ್ಸಸ್ ಪಂತ್ ಮುಖಾಮುಖಿ ಇದಾಗಿತ್ತು. ಚೆನ್ನೈ 6ಕ್ಕೆ 208 ರನ್ ಪೇರಿಸಿದರೆ, ಡೆಲ್ಲಿ 117ಕ್ಕೆ ಗಂಟುಮೂಟೆ ಕಟ್ಟಿತ್ತು. ಚೆನ್ನೈ ಇದೇ ಜೋಶ್‌ನಲ್ಲಿದ್ದರೆ ಮುಂಬೈಗೆ ಅಪಾಯ ತಪ್ಪಿದ್ದಲ್ಲ. ಆಗ ಧೋನಿ ಪಡೆ ಇನ್ನೂ ಕೆಲವು ದಿನ ರೇಸ್‌ನಲ್ಲಿರಬಹುದು. ಆಲ್‌ರೌಂಡರ್ ರವೀಂದ್ರ ಜಡೇಜ ಗಾಯಾಳಾಗಿ ಕೂಟದಿಂದ ಹೊರಬಿದ್ದಿರುವುದರಿಂದ ಚೆನ್ನೈಗೆ ನಷ್ಟವೇನೂ ಇಲ್ಲ. ಅವರು ಈ ಕೂಟದಲ್ಲಿ ಸಾಧಿಸಿದ್ದು ಅಷ್ಟರಲ್ಲೇ ಇದೆ. ಸದ್ಯ ಚಾಲ್ತಿಯಲ್ಲಿರುವ ಆಟಗಾರನೆಂದರೆ ಕಿವೀಸ್ ಆರಂಭಕಾರ ಡೇವನ್ ಕಾನ್ವೆ. ಅವರು ಸತತ 3 ಅರ್ಧ ಶತಕ ಬಾರಿಸಿ ತಂಡಕ್ಕೆ ಹೊಸ ದಾರಿಯೊಂದನ್ನು ಕಲ್ಪಿಸಿದ್ದಾರೆ. ಮೊಯಿನ್ ಅಲಿ ಕೂಡ ಫಾರ್ಮ್ ಗೆ ಮರಳಿದ್ದಾರೆ. ಯುವ ಬೌಲರ್‌ಗಳಾದ ಮುಕೇಶ್ ಚೌಧರಿ, ಸಿಮ್ರನ್‌ಜಿತ್ ಸಿಂಗ್, ಲಂಕೆಯ ಮಹೀಶ್ ತೀಕ್ಷಣ ಮತ್ತೆ ಹರಿತವಾದ ದಾಳಿ ಸಂಘಟಿಸಿದರೆ ಚೆನ್ನೈ ಮೇಲುಗೈಯನ್ನು ನಿರೀಕ್ಷಿಸಬಹುದು. ಧೋನಿ ಸಾಹಸದಲ್ಲಿ ಗೆದ್ದ ಚೆನ್ನೈ
ಇತ್ತಂಡಗಳ ಮೊದಲ ಸುತ್ತಿನ ಪಂದ್ಯ ಅತ್ಯಂತ ರೋಚಕವಾಗಿ ಸಾಗಿತ್ತು. ಜೈದೇವ್ ಉನಾದ್ಕತ್ ಅವರ ಅಂತಿಮ ಓವರ್‌ನಲ್ಲಿ 17 ರನ್ ತೆಗೆಯುವ ಸವಾಲನ್ನು ಧೋನಿ ದಿಟ್ಟ ರೀತಿಯಲ್ಲಿ ಸ್ವೀಕರಿಸಿ, ಲಾಸ್ಟ್ ಬಾಲ್ ಫೋರ್ ಮೂಲಕ ಚೆನ್ನೈಗೆ 3 ವಿಕೆಟ್‌ಗಳ ಅಮೋಘ ಗೆಲುವನ್ನು ತಂದಿತ್ತಿದ್ದರು. ಮುಂಬೈ ಸೋಲು ಸತತ 7 ಪಂದ್ಯಗಳಿಗೆ ವಿಸ್ತರಿಸಲ್ಪಟ್ಟಿತ್ತು. ಡ್ವೇನ್ ಪ್ರಿಟೋರಿಯಸ್ ಮೊದಲ ಎಸೆತಕ್ಕೆ ಔಟಾಗಿದ್ದರು. ಬ್ರಾವೊಗೆ ಗಳಿಸಲು ಸಾಧ್ಯವಾದದ್ದು ಒಂದು ರನ್ ಮಾತ್ರ. ಉಳಿದ 4 ಎಸೆತಗಳಿಂದ 16 ರನ್ ಬಾರಿಸುವ ಸವಾಲು ಚೆನ್ನೈ ಮುಂದಿತ್ತು. ಧೋನಿ 6, 4, 2, 4 ರನ್ ಸಿಡಿಸುವ ಮೂಲಕ ಮುಂಬೈಗೆ ಮರ್ಮಾಘಾತವಿಕ್ಕಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರೂ ತಾನಿನ್ನೂ ಬೆಸ್ಟ್ ಫಿನಿಶರ್ ಆಗಿಯೇ ಉಳಿದಿದ್ದೇನೆ ಎಂಬುದನ್ನು ಧೋನಿ ಸಾಧಿಸಿ ತೋರಿಸಿದ್ದರು!