Advertisement

ಐಪಿಎಲ್‌ 2022: ಮುಂಬೈ ಇಂಡಿಯನ್ಸ್‌ಗೆ ಸತತ ಐದನೇ ಸೋಲು

12:21 AM Apr 14, 2022 | Team Udayavani |

ಪುಣೆ: ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸತತ ಐದನೇ ಸೋಲು ಕಂಡಿದೆ.

Advertisement

ಬುಧವಾರ ನಡೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವು 12 ರನ್ನುಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿದೆ.

ಗೆಲ್ಲಲು 199 ರನ್‌ ತೆಗೆಯುವ ಸವಾಲು ಪಡೆದ ಮುಂಬೈ ತಂಡವು ರೋಹಿತ್‌ ಸಹಿತ ಡಿವಾಲ್ಡ್‌ ಬ್ರೇವಿಸ್‌, ತಿಲಕ್‌ ವರ್ಮ ಮತ್ತು ಸೂರ್ಯಕುಮಾರ್‌ ಯಾದವ್‌ ಅವರ ಉತ್ತಮ ಆಟದಿಂದಾಗಿ ಗೆಲುವಿನತ್ತ ಹೊರಟಿತ್ತು. ಬ್ರೇವಿಸ್‌ ಮತ್ತು ತಿಲಕ್‌ ವರ್ಮ ಕ್ರೀಸ್‌ನಲ್ಲಿದ್ದಾಗ ತಂಡ 10 ಓವರ್‌ಗಳಲ್ಲಿ ನೂರು ರನ್‌ ಗಳಿಸಿತ್ತು. ಆದರೆ ಈ ಜೋಡಿ ಮುರಿದ ಬಳಿಕ ತಂಡ ಕುಸಿಯಿತು. ಅಂತಿಮವಾಗಿ 9 ವಿಕೆಟಿಗೆ 186 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ರೋಹಿತ್‌ ಬಿರುಸಿನ ಆಟ
ನಾಯಕ ರೋಹಿತ್‌ ಶರ್ಮ ಬಿರುಸಿನ ಆಟವಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ ಅವರು ಕಿಶನ್‌ ಜತೆಗೂಡಿ 31 ರನ್‌ ಪೇರಿಸಿದರು. ಅದರಲ್ಲಿ 28 ರನ್‌ ರೋಹಿತ್‌ ಶರ್ಮ ಹೊಡೆದಿದ್ದರು. ಈ ನಡುವೆ ಅವರು ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಎರಡನೇ ಮತ್ತು ವಿಶ್ವದ 7ನೇ ಆಟಗಾರ ಎಂದೆನಿಸಿಕೊಂಡರು. ಈ ಮೊದಲು ವಿರಾಟ್‌ ಕೊಹ್ಲಿ ಈ ಸಾಧನೆ ಮಾಡಿದ್ದರು. ರೋಹಿತ್‌ ಔಟಾದ ಸ್ವಲ್ಪ ಹೊತ್ತಿನಲ್ಲಿ ಕಿಶನ್‌ ಕೂಡ ಔಟಾದರು.

ಡಿವಾಲ್ಡ್‌ ಬ್ರೇವಿಸ್‌ ಮತ್ತು ತಿಲಕ್‌ ವರ್ಮ ಭರ್ಜರಿಯಾಗಿ ಆಡುವ ಮೂಲಕ ತಂಡವನ್ನು ಆರಂಭದ ಆಘಾತದಿಂದ ಪಾರು ಮಾಡಿದರು. ಅಮೋಘ ಆಟದ ಪ್ರದರ್ಶನ ನೀಡಿದ ಅವರಿಬ್ಬರು 84 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಸಿಕ್ಸರ್‌ ಬಾರಿಸುವ ಮೂಲಕ ತಂಡದ ಮೊತ್ತ 9.5 ಓವರ್‌ಗಳಲ್ಲಿ ನೂರು ದಾಟಿತ್ತು. ರಾಹುಲ್‌ ಚಹರ್‌ ಅವರ ಒಂದು ಓವರಿನಲ್ಲಿ ಬ್ರೇವಿಸ್‌ ನಾಲ್ಕು ಸಿಕ್ಸರ್‌ ಸಹಿತ 29 ರನ್‌ ಹೊಡೆದರು. ಈ ಜೋಡಿಯನ್ನು ಸ್ಮಿತ್‌ ಮುರಿದರು. ಬ್ರೇವಿಸ್‌ 25 ಎಸೆತಗಳಿಂದ 4 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 49 ರನ್‌ ಹೊಡೆದರೆ ತಿಲಕ್‌ ವರ್ಮ 20 ಎಸೆತಗಳಿಂದ 36 ರನ್‌ ಹೊಡೆದು ರನೌಟಾದರು. 3 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

Advertisement

ಆಬಳಿಕ ಸೂರ್ಯಕುಮಾರ್‌ ಯಾದವ್‌ ತಂಡದ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದರೂ ಫ‌ಲಪ್ರದವಾಗಿಲ್ಲ. ಅವರು 30 ಎಸೆತಗಳಿಂದ 4 ಸಿಕ್ಸರ್‌ ನೆರವಿನಿಂದ 43 ರನ್‌ ಹೊಡೆದಿದ್ದರು.

ಈ ಮೊದಲು ನಾಯಕ ಮಾಯಾಂಕ್‌ ಅಗರ್ವಾಲ್‌ ಮತ್ತು ಶಿಖರ್‌ ಧವನ್‌ ಅವರ ಅರ್ಧ ಶತಕ ಪಂಜಾಬ್‌ ಸರದಿಯ ಆಕರ್ಷಣೆಯಾಗಿತ್ತು. ಕೊನೆಯಲ್ಲಿ ಜಿತೇಶ್‌ ಶರ್ಮ ಬಿರುಸಿನ ಆಟವಾಡಿದರು. ಪಂಜಾಬ್‌ 5 ವಿಕೆಟಿಗೆ 198 ರನ್‌ ರಾಶಿ ಹಾಕಿತು.

ಬಾಸಿಲ್‌ ಥಂಪಿ ಎಸೆದ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟುವ ಮೂಲಕ ಮಾಯಾಂಕ್‌ ಅಗರ್ವಾಲ್‌ ಪಂಜಾಬ್‌ಗ ಶುಭಾರಂಭ ಒದಗಿಸಿದರು. ಶಿಖರ್‌ ಧವನ್‌ ಸಿಕ್ಸರ್‌ ಮೂಲಕ ಖಾತೆ ತೆರೆದರು. ಪವರ್‌ ಪ್ಲೇಯಲ್ಲಿ ಈ ಜೋಡಿ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸಿತು. ಆಗ ಸ್ಕೋರ್‌ ನೋಲಾಸ್‌ 65ಕ್ಕೆ ಏರಿತ್ತು. ಇನ್ನೊಂದೆಡೆ ಇದು ಈ ಋತುವಿನಲ್ಲಿ ಮುಂಬೈ ದಾಖಲಿಸಿದ ಅತ್ಯಂತ ಕಳಪೆ ಪವರ್‌ ಪ್ಲೇ ಬೌಲಿಂಗ್‌ ಎನಿಸಿತು. ಡೆಲ್ಲಿ ವಿರುದ್ಧ 46 ರನ್‌ ಬಿಟ್ಟುಕೊಟ್ಟದ್ದು ಗರಿಷ್ಠ ಮೊತ್ತವಾಗಿತ್ತು.

ಅಗರ್ವಾಲ್‌-ಧವನ್‌ ಜೋಡಿಯನ್ನು ಬೇರ್ಪಡಿಸಲು ಮುಂಬೈ 10ನೇ ಓವರ್‌ ತನಕ ಕಾಯಬೇಕಾಯಿತು. ಆಗ 52 ರನ್‌ ಮಾಡಿದ ಅಗರ್ವಾಲ್‌ ವಿಕೆಟ್‌ ಬಿತ್ತು. ಮುರುಗನ್‌ ಅಶ್ವಿ‌ನ್‌ ಮುಂಬೈಗೆ ಮೊದಲ ಯಶಸ್ಸು ತಂದಿತ್ತರು. ಅಗರ್ವಾಲ್‌ 32 ಎಸೆತ ನಿಭಾಯಿಸಿ 6 ಫೋರ್‌ ಹಾಗೂ 2 ಸಿಕ್ಸರ್‌ ಸಿಡಿಸಿದರು. ಈ ನಡುವೆ ಟಿ20 ಮಾದರಿಯಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಿದ ಹಿರಿಮೆಗೂ ಪಾತ್ರರಾದರು.

ಪಂಜಾಬ್‌ ಮೊದಲ ವಿಕೆಟಿಗೆ 9.3 ಓವರ್‌ಗಳಿಂದ 97 ರನ್‌ ಪೇರಿಸಿತು. ಇದು ಪ್ರಸಕ್ತ ಋತುವಿನಲ್ಲಿ ಪಂಜಾಬ್‌ನ ಮೊದಲ ವಿಕೆಟಿಗೆ ದಾಖಲಾದ ಅತ್ಯಧಿಕ ಮೊತ್ತ. ಆರ್‌ಸಿಬಿ ವಿರುದ್ಧ 71 ರನ್‌ ಪೇರಿಸಿದ್ದು ಈವರೆಗಿನ ದೊಡ್ಡ ಜತೆಯಾಟವಾಗಿತ್ತು. ಅರ್ಧ ಹಾದಿಯ ಬ್ಯಾಟಿಂಗ್‌ ಕೊನೆಗೊಂಡಾಗ ಪಂಜಾಬ್‌ ಒಂದು ವಿಕೆಟಿಗೆ 99 ರನ್‌ ಗಳಿಸಿತ್ತು. ಈ ನಡುವೆ ಧವನ್‌ ಅವರಿಂದಲೂ ಅರ್ಧ ಶತಕ ಪೂರ್ತಿಗೊಂಡಿತು.

ಅಗರ್ವಾಲ್‌ ನಿರ್ಗಮನದ ಬಳಿಕ ಕ್ರೀಸ್‌ ಇಳಿದ ಜಾನಿ ಬೇರ್‌ಸ್ಟೊ ಹೆಚ್ಚು ಹೊತ್ತು ಉಳಿಯಲಿಲ್ಲ. 13 ಎಸೆತಗಳಿಂದ 12 ರನ್‌ ಮಾಡಿ ಉನಾದ್ಕತ್‌ ಎಸೆತದಲ್ಲಿ ಬೌಲ್ಡ್‌ ಆದರು. ದ್ವಿತೀಯ ವಿಕೆಟಿಗೆ 30 ರನ್‌ ಒಟ್ಟುಗೂಡಿತು.

ಮತ್ತೋರ್ವ ಬಿಗ್‌ ಹಿಟ್ಟರ್‌ ಲಿವಿಂಗ್‌ಸ್ಟೋನ್‌ ಆಟ ಕೂಡ ಇಲ್ಲಿ ನಡೆಯಲಿಲ್ಲ. ಅವರು ಕೇವಲ 2 ರನ್‌ ಮಾಡಿ ಬುಮ್ರಾ ಬುಟ್ಟಿಗೆ ಬಿದ್ದರು. 15 ಓವರ್‌ ಮುಕ್ತಾಯಕ್ಕೆ ಪಂಜಾಬ್‌ 3 ವಿಕೆಟ್‌ ನಷ್ಟದಲ್ಲಿ 132 ರನ್‌ ಗಳಿಸಿತ್ತು.

ಡೆತ್‌ ಓವರ್‌ಗಳಲ್ಲಿ ಶಿಖರ್‌ ಧವನ್‌ ವಿಕೆಟ್‌ ಉರುಳಿಸುವಲ್ಲಿ ಥಂಪಿ ಯಶಸ್ವಿಯಾದರು. ಧವನ್‌ ಗಳಿಕೆ 50 ಎಸೆತಗಳಿಂದ 70 ರನ್‌. ಸಿಡಿಸಿದ್ದು 5 ಫೋರ್‌, 3 ಸಿಕ್ಸರ್‌. ಆದರೆ ಜಿತೇಶ್‌ ಶರ್ಮ ಸಿಡಿದು ನಿಂತರು. 15 ಎಸೆತಗಳಿಂದ ಅಜೇಯ 30 ರನ್‌ ಹೊಡೆದರು. ಇದು 2 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಶಾರೂಖ್‌ ಖಾನ್‌ 6 ಎಸೆತ ಎದುರಿಸಿ 15 ರನ್‌ ಹೊಡೆದರು.

ಒಂದೇ ಪರಿವರ್ತನೆ
ಈ ಪಂದ್ಯಕ್ಕಾಗಿ ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಮುಂಬೈ ಇಂಡಿಯನ್ಸ್‌ ಒಂದು ಪರಿವರ್ತನೆ ಮಾಡಿಕೊಂಡಿತು. ರಮಣದೀಪ್‌ ಬದಲು ಟೈಮಲ್‌ ಮಿಲ್ಸ್‌ ತಂಡಕ್ಕೆ ಮರಳಿದರು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಅಗರ್ವಾಲ್‌ ಸಿ ಯಾದವ್‌ ಬಿ ಅಶ್ವಿ‌ನ್‌ 52
ಶಿಖರ್‌ ಧವನ್‌ ಸಿ ಪೊಲಾರ್ಡ್‌ ಬಿ ಥಂಪಿ 70
ಜಾನಿ ಬೇರ್‌ಸ್ಟೊ ಬಿ ಉನಾದ್ಕತ್‌ 12
ಲಿವಿಂಗ್‌ಸ್ಟೋನ್‌ ಬಿ ಬುಮ್ರಾ 2
ಜಿತೇಶ್‌ ಶರ್ಮ ಔಟಾಗದೆ 30
ಶಾರೂಖ್‌ ಖಾನ್‌ ಬಿ ಥಂಪಿ 15
ಒಡೀನ್‌ ಸ್ಮಿತ್‌ ಔಟಾಗದೆ 1
ಇತರ 16
ಒಟ್ಟು (5 ವಿಕೆಟಿಗೆ) 198
ವಿಕೆಟ್‌ ಪತನ: 1-97, 2-127, 3-130, 4-151, 5-197.
ಬೌಲಿಂಗ್‌:
ಬಾಸಿಲ್‌ ಥಂಪಿ 4-0-47-2
ಜೈದೇವ್‌ ಉನಾದ್ಕತ್‌ 4-0-44-1
ಜಸ್‌ಪ್ರೀತ್‌ ಬುಮ್ರಾ 4-0-28-1
ಮುರುಗನ್‌ ಅಶ್ವಿ‌ನ್‌ 4-0-34-1
ಟೈಮಲ್‌ ಮಿಲ್ಸ್‌ 4-0-37-0
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ವೈಭವ್‌ ಬಿ ರಬಾಡ 28
ಇಶಾನ್‌ ಕಿಶನ್‌ ಸಿ ಜಿತೇಶ್‌ ಬಿ ವೈಭವ್‌ 3
ಡಿವಾಲ್ಡ್‌ ಬ್ರೇವಿಸ್‌ ಸಿ ಅರ್ಷದೀಪ್‌ ಬಿ ಸ್ಮಿತ್‌ 49
ತಿಲಕ್‌ ವರ್ಮ ರನೌಟ್‌ 36
ಸೂರ್ಯಕುಮಾರ್‌ ಸಿ ಸ್ಮಿತ್‌ ಬಿ ರಬಾಡ 43
ಕೈರನ್‌ ಪೋಲಾರ್ಡ್‌ ರನೌಟ್‌ 10
ಜೈದೇವ್‌ ಉನಾದ್ಕತ್‌ ಸಿ ಅಗರ್ವಾಲ್‌ ಬಿ ಸ್ಮಿತ್‌ 12
ಮುರುಗನ್‌ ಅಶ್ವಿ‌ನ್‌ ಔಟಾಗದೆ 0
ಜಸ್‌ಪ್ರೀತ್‌ ಬುಮ್ರಾ ಸಿ ಧವನ್‌ ಬಿ ಸ್ಮಿತ್‌ 0
ಟೈಮಲ್‌ ಮಿಲ್ಸ್‌ ಸಿ ಅಗರ್ವಾಲ್‌ ಬಿ ಸ್ಮಿತ್‌ 0
ಇತರ: 5
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ)
ವಿಕೆಟ್‌ ಪತನ: 1-31, , 2-32, 3-116, 4-131, 5-152, 6-177, 7-185, 8-186, 9-186
ಬೌಲಿಂಗ್‌:
ವೈಭವ್‌ ಅರೋರಾ 4-0-43-1
ಕಾಗಿಸೊ ರಬಾಡ 4-0-29-2
ಅರ್ಷದೀಪ್‌ ಸಿಂಗ್‌ 4-0-29-0
ಒಡೀನ್‌ ಸ್ಮಿತ್‌ 3-0-30-4
ಲಿಯಮ್‌ ಲಿವಿಂಗ್‌ಸ್ಟೋನ್‌ 1-0-11-0
ರಾಹುಲ್‌ ಚಹರ್‌ 4-0-44-0
ಪಂದ್ಯಶ್ರೇಷ್ಠ: ಮಾಯಾಂಕ್‌ ಅಗರ್ವಾಲ್‌

Advertisement

Udayavani is now on Telegram. Click here to join our channel and stay updated with the latest news.

Next