Advertisement

ರಾಹುಲ್‌ vs ಅಗರ್ವಾಲ್‌: ಕರ್ನಾಟಕ ನಾಯಕರ ಕದನ  ಕುತೂಹಲ

10:27 PM Apr 28, 2022 | Team Udayavani |

ಪುಣೆ: ಶುಕ್ರವಾರದ ಐಪಿಎಲ್‌ ಕನ್ನಡಿಗರಿಬ್ಬರ ನಾಯಕತ್ವಕ್ಕೆ ಸವಾಲಾಗಿರುವ ಪಂದ್ಯ. ಕೆ.ಎಲ್‌. ರಾಹುಲ್‌ ಕ್ಯಾಪ್ಟನ್ಸಿಯ ಲಕ್ನೋ ಸೂಪರ್‌ಜೈಂಟ್ಸ್‌ ಮತ್ತು ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ಪುಣೆಯಲ್ಲಿ ಪರಸ್ಪರ ಎದುರಾಗಲಿವೆ. ಇದು ಇತ್ತಂಡಗಳ ನಡುವಿನ ಮೊದಲ ಮುಖಾಮುಖೀ. ಹೀಗಾಗಿ ಎಲ್ಲರೂ ಈ ಕದನ ಕೌತುಕಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಇತ್ತಂಡಗಳಲ್ಲಿ ಲಕ್ನೋ ಉತ್ತಮ ಸ್ಥಿತಿಯಲ್ಲಿದೆ. ಆಡಿದ 8 ಪಂದ್ಯಗಳಲ್ಲಿ ಐದನ್ನು ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಗಿದೆ. ಪಂಜಾಬ್‌ ಇಷ್ಟೇ ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು 6ನೇ ಸ್ಥಾನಿಯಾಗಿದೆ. ಹೀಗಾಗಿ ಇನ್ನೂ “ಕಿಂಗ್‌’ ಎನಿಸಿಕೊಳ್ಳದ ಪಂಜಾಬ್‌ ಪಾಲಿಗೆ ಇದೊಂದು ಮಹತ್ವದ ಪಂದ್ಯ. ಸೋತರೆ ತಂಡದ ಸ್ಥಿತಿ, ಮುಂದಿನ ಹಾದಿ ಇನ್ನಷ್ಟು ಹದಗೆಡಲಿದೆ.

ರಾಹುಲ್‌ಗೆ ಬೇಕಿದೆ ಸೂಕ್ತ ಬೆಂಬಲ :

ಲಕ್ನೋ ಪಡೆಯನ್ನು ಸ್ವತಃ ನಾಯಕ ಕೆ.ಎಲ್‌. ರಾಹುಲ್‌ ಅವರೇ ಮುಂಚೂಣಿಯಲ್ಲಿ ನಿಂತು ಯಶಸ್ಸಿನ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಮುಂಬೈ ವಿರುದ್ಧ ಎರಡು ಶತಕ ಬಾರಿಸಿದ ಸಾಧನೆ ಅವರಲ್ಲಿ ಅಪಾರ ಆತ್ಮವಿಶ್ವಾಸ ತುಂಬಿದೆ. ಜತೆಗೆ ಒಂದು ಅರ್ಧ ಶತಕವನ್ನೂ ಹೊಡೆದಿದ್ದಾರೆ. 368 ರನ್‌ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಇನ್ನೂ ಒಂದು ವಿಷಯವನ್ನು ಉಲ್ಲೇಖೀಸುವುದಾದರೆ, ರಾಹುಲ್‌ ಶುಕ್ರವಾರ ಎದುರಿಸಲಿರುವುದು ತಮ್ಮದೇ ಸಾರಥ್ಯ ಹೊಂದಿದ್ದ ಮಾಜಿ ತಂಡವನ್ನು!

ಆದರೆ ತಂಡ ಕೇವಲ ರಾಹುಲ್‌ ಒಬ್ಬರನ್ನೇ ಹೆಚ್ಚು ಅವಲಂಬಿಸಿರುವುದು ಗೋಚರಕ್ಕೆ ಬರುತ್ತದೆ. ಕ್ವಿಂಟನ್‌ ಡಿ ಕಾಕ್‌ (225 ರನ್‌), ಕರ್ನಾಟಕದ ಮತ್ತೋರ್ವ ಕ್ರಿಕೆಟಿಗ ಮನೀಷ್‌ ಪಾಂಡೆ, ಸ್ಟೋಯಿನಿಸ್‌, ಕೃಣಾಲ್‌ ಪಾಂಡ್ಯ, ಹೂಡಾ ಇನ್ನೂ ದೊಡ್ಡ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಆಯುಷ್‌ ಬದೋನಿ ಮೊದಲ ಕೆಲವು ಪಂದ್ಯಗಳ ಬಳಿಕ ಮಂಕಾಗಿದ್ದಾರೆ.

Advertisement

ಬೌಲಿಂಗ್‌ ವಿಭಾಗದಲ್ಲಿ ಲಕ್ನೋ ಭಾರೀ ಘಾತಕವೇನಲ್ಲ. ಚಮೀರ, ಮೊಹ್ಸಿನ್‌ ಖಾನ್‌, ಹೋಲ್ಡರ್‌, ಬಿಷ್ಣೋಯಿ ದೊಡ್ಡ ಮಟ್ಟದಲ್ಲಿ ಕೈಚಳಕ ತೋರಬೇಕಿದೆ. ಪಾಂಡ್ಯ ಓಕೆ. ಮುಂಬೈ ವಿರುದ್ಧ 3 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದಾರೆ. ಪಂಜಾಬ್‌ ಆಕರ್ಷಕ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವುದರಿಂದ ಚಮೀರ-ಹೋಲ್ಡರ್‌ ಪಾತ್ರ ನಿರ್ಣಾಯಕವಾಗಲಿದೆ. ಇವರಿಬ್ಬರೂ ಸೇರಿ ಈವರೆಗೆ 14 ವಿಕೆಟ್‌ ಉರುಳಿಸಿದ್ದಾರೆ. ಹಾಗೆಯೇ ಸ್ಪಿನ್‌ ವಿಭಾಗದಲ್ಲಿ ಪಾಂಡ್ಯ-ಬಿಷ್ಣೋಯಿ ಹೆಚ್ಚು ಬಿರುಸುಗೊಳ್ಳಬೇಕಿದೆ.

ಪಂಜಾಬ್‌ ಬೌಲಿಂಗ್‌ ಬಲಿಷ್ಠ:

ಪಂಜಾಬ್‌ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ಹೆಚ್ಚು ಬಲಿಷ್ಠ. ಅಗರ್ವಾಲ್‌, ಧವನ್‌, ರಾಜಪಕ್ಸ, ಲಿವಿಂಗ್‌ಸ್ಟೋನ್‌, ಬೇರ್‌ಸ್ಟೊ ಬ್ಯಾಟಿಂಗ್‌ ಡಿಪಾರ್ಟ್‌ ಮೆಂಟ್‌ನ ಪ್ರಮುಖರು. ಇವರಲ್ಲಿ ಅನುಮಾನವಿರುವುದು ಬೇರ್‌ಸ್ಟೊ ಫಾರ್ಮ್ ಬಗ್ಗೆ ಮಾತ್ರ. ಬೌಲಿಂಗ್‌ನಲ್ಲಿ ರಿಷಿ ಧವನ್‌ ಟ್ರಂಪ್‌ಕಾರ್ಡ್‌ ಆಗಿದ್ದಾರೆ. ಜತೆಗೆ ರಬಾಡ, ಸಂದೀಪ್‌ ಶರ್ಮ, ಆರ್ಷದೀಪ್‌, ರಾಹುಲ್‌ ಚಹರ್‌ ಉತ್ತಮ ನಿಯಂತ್ರಣ ಸಾಧಿಸಬಲ್ಲರು. ಒಟ್ಟಾರೆಯಾಗಿ ಹೇಳುವುದಾದರೆ, ಇಂಥ ಸ್ಟಾರ್‌ ಆಟಗಾರರನ್ನು ಹೊಂದಿಯೂ ಪಂಜಾಬ್‌ ಕಿಂಗ್ಸ್‌ ಇನ್ನೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next