ಹೊಸದಿಲ್ಲಿ: ಈ ಬಾರಿಯ ಐಪಿಎಲ್ ಗುಜರಾತ್ ಪಾಲಿಗೆ ಹೆಚ್ಚು ಸಂಭ್ರಮ ತರಲಿದೆ. ನೂತನ ಫ್ರಾಂಚೈಸಿ “ಗುಜರಾತ್ ಟೈಟಾನ್ಸ್’ ಸೇರ್ಪಡೆ ಮೊದಲ ಕಾರಣ. ಇದರ ಬೆನ್ನಲ್ಲೇ ಐಪಿಎಲ್ ಬ್ರಾಡ್‌ಕಾಸ್ಟರ್ “ಸ್ಟಾರ್ ಸೋರ್ಟ್ಸ್ ‘ ಮೊದಲ ಸಲ ಗುಜರಾತಿ ಭಾಷೆಯಲ್ಲಿ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಲು ಮುಂದಾಗಿದೆ.
“ಕಳೆದ 14 ಐಪಿಎಲ್‌ಗಿಂತ ಈ ಬಾರಿಯ ಪಂದ್ಯಾವಳಿ ಅದೆಷ್ಟು ಭಿನ್ನ ಎಂಬುದನ್ನು ನಾವು ತೋರಿಸಿಕೊಡಲಿದ್ದೇವೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ಮೂಡಿಬರಲಿದೆ. ಮೊದಲ ಸಲ ಗುಜರಾತಿಯಲ್ಲಿ ಕಮೆಂಟ್ರಿ ನೀಡಲಾಗುವುದು. ಹಾಗೆಯೇ ಪ್ರತೀ ಶನಿವಾರ ಮತ್ತು ರವಿವಾರ ಬಂಗಾಲಿ ಹಾಗೂ ಮಲಯಾಳಂ ಭಾಷೆಯಲ್ಲಿ ಕಮೆಂಟ್ರಿ ಕೇಳಿಬರಲಿದೆ. ಜತೆಗೆ ಈ ಪಂದ್ಯಾವಳಿಯ ಲೀಗ್ ಪಂದ್ಯಗಳೆಲ್ಲ ಮಹಾರಾಷ್ಟ್ರದಲ್ಲಿ ನಡೆಯುವುದರಿಂದ ಇವೆಲ್ಲದರ ವೀಕ್ಷಕ ವಿವರಣೆ ಮರಾಠಿಯಲ್ಲೂ ಮೂಡಿಬರಲಿದೆ’ ಎಂದು ಸ್ಟಾರ್ ಸೋರ್ಟ್ಸ್ ಮುಖ್ಯಸ್ಥ ಸಂಜೋಗ್ ಗುಪ್ತಾ ಹೇಳಿದರು.
ಕಮೆಂಟ್ರಿ ಟೀಮ್ :
ಎಲ್ಲ ಗುಜರಾತ್ ಟೈಟಾನ್ಸ್ ಪಂದ್ಯಗಳ, ವಾರಾಂತ್ಯದ ಹಾಗೂ ಪ್ಲೇ-ಆಫ್ ಪಂದ್ಯಗಳ ವೀಕ್ಷಕ ವಿವರಣೆ ಗುಜರಾತಿ ಭಾಷೆಯಲ್ಲಿ ಬಿತ್ತರಗೊಳ್ಳಲಿದೆ. ಮಾಜಿ ಕ್ರಿಕೆಟಿಗರಾದ ಕಿರಣ್ ಮೋರೆ, ನಯನ್ ಮೊಂಗಿಯ, ಇರ್ಫಾನ್ ಪಠಾಣ್ ಜತೆಗೆ ಗುಜರಾತ್‌ನ ಓರ್ವ ಖ್ಯಾತ ರೇಡಿಯೋ ಜಾಕಿ ಕಮೆಂಟ್ರಿ ಟೀಮ್‌ನಲ್ಲಿರುತ್ತಾರೆ.
ಸ್ಟಾರ್ ಸೋರ್ಟ್ಸ್ ಈಗಾಗಲೇ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಐಪಿಎಲ್ ವೀಕ್ಷಕ ವಿವರಣೆ ನೀಡುತ್ತಿದ್ದು, ಬಹಳ ಜನಪ್ರಿಯಗೊಂಡಿದೆ.