Advertisement

ಬ್ಯಾಟಿಂಗ್‌ ಮರೆತ ಆರ್‌ಸಿಬಿಗೆ; ಗುಜರಾತ್‌ ಟೈಟಾನ್ಸ್‌  ಸವಾಲು

11:39 PM Apr 29, 2022 | Team Udayavani |

ಮುಂಬಯಿ: ಕಳೆದೆರಡು ಪಂದ್ಯಗಳಲ್ಲಿ ಆರ್‌ಸಿಬಿ ಅಬ್ಬರ ತಣ್ಣಗಾಗಿದೆ. ಸತತ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ಕೈಕೊಟ್ಟ ಪರಿಣಾಮ ತಂಡ ಹೀನಾಯ ಸೋಲು ಕಂಡಿದೆ.

Advertisement

ಇನ್ನೊಂದೆಡೆ ಈ ವರ್ಷದ ನೂತನ ತಂಡವಾದ ಗುಜರಾತ್‌ ಟೈಟಾನ್ಸ್‌ ಅದೃಷ್ಟದ ಗಟ್ಟಿ ಬೆಂಬಲ ಪಡೆದಿದೆ. ಗೆಲುವಿನ ಮೇಲೆ ಗೆಲುವು ಸಾಧಿಸುತ್ತ ಟೇಬಲ್‌ ಟಾಪರ್‌ ಎನಿಸಿದೆ. ಹೀಗಾಗಿ ಇತ್ತಂಡಗಳ ಶನಿವಾರದ ಮುಖಾಮುಖಿ ಭಾರೀ ನಿರೀಕ್ಷೆ ಮೂಡಿಸಿದೆ.

ಫಾರ್‌ ಎ ಚೇಂಜ್‌ ಎಂಬಂತೆ ಇದು ಆರ್‌ಸಿಗೆ ಎದುರಾಗಿರುವ ಮೊದಲ ಹಗಲು ಪಂದ್ಯ. ಹಾಗೆಯೇ ಐಪಿಎಲ್‌ನಲ್ಲಿ ಬೆಂಗಳೂರು-ಗುಜರಾತ್‌ ತಂಡಗಳ ಮೊದಲ ಮುಖಾಮುಖಿಯೂ ಹೌದು.

ದಿನದ ಇನ್ನೊಂದು ಮುಖಾಮುಖೀಯಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ಮುಖಾಮುಖಿ ಯಾಗಲಿವೆ. ಮುಂಬೈ ಇನ್ನಾದರೂ ಗೆಲುವಿನ ಖಾತೆ ತೆರೆದೀತೇ ಅಥವಾ 9ನೇ ಪಂದ್ಯದಲ್ಲೂ ಹಳ್ಳಕ್ಕೆ ಬಿದ್ದೀತೇ ಎಂಬುದೊಂದು ಕುತೂಹಲ.

ಬಲಿಷ್ಠ ತಂಡದ ಪರದಾಟ
ಮೇಲ್ನೋಟಕ್ಕೆ ಹಾಗೂ ಬಲಾಬಲದ ಲೆಕ್ಕಾಚಾರದಲ್ಲಿ ಆರ್‌ಸಿಬಿಯೇ ಬಲಿಷ್ಠ. ವಿಶ್ವ ದರ್ಜೆಯ ಸ್ಟಾರ್‌ ಆಟಗಾರರೆಲ್ಲ ಇದರಲ್ಲಿ ತುಂಬಿಕೊಂಡಿದ್ದಾರೆ. ಆದರೂ ತಂಡದ ಪರದಾಟ ತಪ್ಪಿಲ್ಲ. ವೆಸ್ಟ್‌ ಇಂಡೀಸ್‌ ತಂಡದಂತೆ ಒಮ್ಮೆ ಪ್ರಚಂಡ ಪ್ರದರ್ಶನ ನೀಡುವುದು, ಇನ್ನೊಮ್ಮೆ ಪಾತಾಳಕ್ಕೆ ಕುಸಿಯುವುದು ಹವ್ಯಾಸವಾಗಿ ಬಿಟ್ಟಿದೆ.

Advertisement

ಡು ಪ್ಲೆಸಿಸ್‌, ರಾವತ್‌, ಕೊಹ್ಲಿ, ಮ್ಯಾಕ್ಸ್‌ವೆಲ್‌, ಕಾರ್ತಿಕ್‌, ಶಬಾಜ್‌, ಪ್ರಭುದೇಸಾಯಿ ಅವರನ್ನೊಳಗೊಂಡ ಆರ್‌ಸಿಬಿಯ “ಬ್ಯಾಟಿಂಗ್‌ ಡೆಪ್ತ್’ ಅಮೋಘವಾಗಿಯೇ ಇದೆ. ಆದರೆ ಯಾರೂ ಸರಿಯಾಗಿ ಸಿಡಿದು ನಿಲ್ಲುತ್ತಿಲ್ಲ, ದೊಡ್ಡ ಜತೆಯಾಟವನ್ನೂ ದಾಖಲಿಸುತ್ತಿಲ್ಲ. ಇಲ್ಲವಾದರೆ ಹೈದರಾಬಾದ್‌ ವಿರುದ್ಧ 68ಕ್ಕೆ, ರಾಜಸ್ಥಾನ್‌ ವಿರುದ್ಧ 115 ಕುಸಿಯುತ್ತಿರಲಿಲ್ಲ. ಸತತ ಪಂದ್ಯಗಳಲ್ಲಿ ತಲೆದೋರಿದ ಈ ಬ್ಯಾಟಿಂಗ್‌ ವೈಫ‌ಲ್ಯದಿಂದ ಆರ್‌ಸಿಬಿ ಒಮ್ಮೆಲೇ ಸಿಡಿದು ನಿಲ್ಲುತ್ತದೆ, ಸ್ಫೋಟಕ ಆಟವಾಡುತ್ತದೆ ಎಂದು ನಂಬಿ ಕೂರುವುದು ಮೂರ್ಖತನವಾದೀತು.

ಆರ್‌ಸಿಬಿಯ ಓಪನಿಂಗ್‌ ಹಾಗೂ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಡು ಪ್ಲೆಸಿಸ್‌ ಅವರ ಚೆನ್ನೈ ಫಾರ್ಮ್ ಇಲ್ಲಿ ಕಂಡುಬಂದಿಲ್ಲ. ಇವರಿಗಿನ್ನೂ ಸೂಕ್ತ ಜತೆಗಾರನೇ ಲಭಿಸಿಲ್ಲ. ಬ್ಯಾಟಿಂಗೇ ಮರೆತಿರುವ ಕೊಹ್ಲಿ ಓಪನಿಂಗ್‌ ಬಂದುದನ್ನೂ ಕಂಡಾಯಿತು. ಯಾವುದೇ ಪ್ರಯೋಜನವಾಗಿಲ್ಲ.

ಗೆಲುವನ್ನು ಅಪ್ಪುವ ಗುಜರಾತ್‌
ಗುಜರಾತ್‌ ಟೈಟಾನ್ಸ್‌ ಎಷ್ಟೇ ಕಠಿನ ಪರಿಸ್ಥಿತಿಯಿಂದಲೂ ಮೇಲೆದ್ದು ಬಂದು ಗೆಲುವನ್ನು ಅಪ್ಪುವ ತಂಡ ಎಂಬುದನ್ನು ಸಾಬೀತುಪಡಿಸಿದೆ. ಇದಕ್ಕೆ ಹೈದರಾಬಾದ್‌ ಎದುರಿನ ಕಳೆದ ಪಂದ್ಯಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ಅಂತಿಮ ಓವರ್‌ನಲ್ಲಿ 22 ರನ್‌, ಅಂತಿಮ 2 ಎಸೆತಗಳಲ್ಲಿ 2 ಸಿಕ್ಸರ್‌ ಬಾರಿಸಿ ಗೆದ್ದು ಬಂದ ಸಾಹಸ ಗುಜರಾತ್‌ನದ್ದು. ಐಪಿಎಲ್‌ ಚರಿತ್ರೆಯ ಅಸಾಮಾನ್ಯ ಗೆಲುವುಗಳಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ.

ಸಾಹಾ, ಗಿಲ್‌, ಭಡ್ತಿ ಪಡೆದು ಬರುವ ನಾಯಕ ಪಾಂಡ್ಯ, ಮಿಲ್ಲರ್‌, ಕರ್ನಾಟಕದ ಅಭಿನವ್‌ ಮನೋಹರ್‌, ಮತ್ತೆ ಮ್ಯಾಚ್‌ ವಿನ್ನರ್‌ ಆಗಿ ಮಾರ್ಪಟ್ಟಿರುವ ತೆವಾಟಿಯಾ ಅವರೆಲ್ಲ ಗುಜರಾತ್‌ ಬ್ಯಾಟಿಂಗ್‌ ಸರದಿಯ ಬೆನ್ನೆಲುಬಾಗಿದ್ದಾರೆ. ರಶೀದ್‌ ಖಾನ್‌ ಬ್ಯಾಟಿಂಗ್‌ ಸ್ಟಾರ್‌ ಆಗಿ ಪರಿವರ್ತನೆಗೊಂಡಿದ್ದಾರೆ. ಆದರೆ ಬೌಲಿಂಗ್‌ ನಿರೀಕ್ಷಿಸಿಸಷ್ಟು ಘಾತಕವಾಗಿಲ್ಲ. ಶಮಿ ಮಾತ್ರ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ರಶೀದ್‌, ಫ‌ರ್ಗ್ಯುಸನ್‌ ಮ್ಯಾಜಿಕ್‌ ನಡೆಯುತ್ತಿಲ್ಲ. ಆದರೆ ಆರ್‌ಸಿಬಿಯ ಈಗಿನ ಬ್ಯಾಟಿಂಗ್‌ ಸ್ಥಿತಿಯನ್ನು ಕಾಣುವಾಗ ಎದುರಾಳಿಗೆ ಘಾತಕ ಬೌಲರ್‌ಗಳ ಅಗತ್ಯವೇನೂ ಕಂಡುಬರದು!

ಗೋಲ್ಡನ್‌ ಡಕ್‌ ನಂಟು
“ಗೋಲ್ಡನ್‌ ಡಕ್‌’ಗೂ ಆರ್‌ಸಿಬಿಗೂ ಭಾರೀ ನಂಟು. ಪಂದ್ಯವೊಂದರಲ್ಲಿ ಯಾರಾದರೊಬ್ಬರಿಗೆ ಈ ಕಂಟಕ ತಪ್ಪಿದ್ದಲ್ಲ. ಕೊಹ್ಲಿ, ಮ್ಯಾಕ್ಸಿ ಇಲ್ಲಿ ರೇಸ್‌ನಲ್ಲಿದ್ದಾರೆ. ಬೆಸ್ಟ್‌ ಫಿನಿಶರ್‌ ಎಂದು ಭಾರೀ ಎತ್ತರಕ್ಕೆ ಏರಿದ ಕಾರ್ತಿಕ್‌ ಈಗ ಕೆಳಮುಖವಾಗಿ ಸಾಗುತ್ತಿದ್ದಾರೆ. ಒಟ್ಟಾರೆ ಬೆಂಗಳೂರಿನ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ಯಾವುದೂ ಸರಿ ಇಲ್ಲ. ಬೌಲಿಂಗ್‌ ಪರವಾಗಿಲ್ಲ. ಆದರೆ, ಸ್ಕೋರ್‌ಬೋರ್ಡ್‌ನಲ್ಲಿ ದೊಡ್ಡ ಮೊತ್ತ ದಾಖಲಾಗದೇ ಇರುವಾಗ ಬೌಲರ್‌ಗಳಾದರೂ ಏನು ಮಾಡಬಲ್ಲರು?

Advertisement

Udayavani is now on Telegram. Click here to join our channel and stay updated with the latest news.

Next