Advertisement

ಟೈಟಾನ್ಸ್‌-ರಾಯಲ್ಸ್‌; ಐಪಿಎಲ್‌ ಟೈಟಲ್‌ಗೆ ಬಿಗ್‌ ಫೈಟ್‌

10:33 PM May 28, 2022 | Team Udayavani |

ಅಹ್ಮದಾಬಾದ್‌: ಕಳೆದ ಕೆಲವು ವರ್ಷಗಳಿಂದ ಮುಂಬೈ, ಚೆನ್ನೈ ಸುತ್ತವೇ ಗಿರಕಿ ಹೊಡೆಯುತ್ತಿದ್ದ ಐಪಿಎಲ್‌, ಈ ಬಾರಿ ಯಾರೂ ನಿರೀಕ್ಷಿಸಿರದ ತಂಡಗಳೆರಡನ್ನು ಫೈನಲ್‌ಗೆ ತಂದು ನಿಲ್ಲಿಸಿದೆ. ಹೊಸತಾಗಿ ಪ್ರವೇಶ ಪಡೆದ ಗುಜರಾತ್‌ ಟೈಟಾನ್ಸ್‌ ಒಂದು ತಂಡವಾದರೆ, 2008ರ ಚೊಚ್ಚಲ ಐಪಿಎಲ್‌ನಲ್ಲಿ ಪ್ರಶಸ್ತಿಯನ್ನೆತ್ತಿದ ರಾಜಸ್ಥಾನ್‌ ರಾಯಲ್ಸ್‌ ಇನ್ನೊಂದು.

Advertisement

ಐಪಿಎಲ್‌ ಆರಂಭಕ್ಕೂ ಮುನ್ನ ಇದು 10 ತಂಡಗಳನ್ನೊಳಗೊಂಡ ದೊಡ್ಡ ಕೂಟವಾಗಲಿದೆ ಎಂಬ ಕಾರಣಕ್ಕಾಗಿ ಸುದ್ದಿಯಾಗಿತ್ತೇ ಹೊರತು, ನೂತನ ಗುಜರಾತ್‌ ಅಥವಾ ಅಷ್ಟೇನೂ ಸ್ಥಿರ ಪ್ರದರ್ಶನ ನೀಡದ ರಾಜಸ್ಥಾನ್‌ನಂಥ ತಂಡಗಳು ಪ್ರಶಸ್ತಿ ಸುತ್ತಿಗೆ ನೆಗೆಯಲಿವೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಯಾವ ರೀತಿ ಹಾಲಿ ಚಾಂಪಿಯನ್‌ ಚೆನ್ನೈ, ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಹೇಳಹೆಸರಿಲ್ಲದೆ ಬಹಳ ಬೇಗ ನಿರ್ಗಮಿಸಿ ಅಚ್ಚರಿ ಹುಟ್ಟಿಸಿದ್ದವೋ, ಅದೇ ರೀತಿ ಈ ಎರಡು ತಂಡಗಳ ಫೈನಲ್‌ ಪ್ರವೇಶ ಕೂಡ!

ಇದು ಅಂಡರ್‌ ಡಾಗ್‌ ತಂಡಗಳ ಯಶಸ್ವಿ ಪಯಣದ ಕಥನ. 2000ದಲ್ಲಿ ತೆರೆಗೆ ಬಂದ ಡೆಂಜೆಲ್‌ ವಾಷಿಂಗ್ಟನ್‌ ಅವರ “ರಿಮೆಂಬರ್‌ ದ ಟೈಟಾನ್ಸ್‌’ ಹಾಲಿವುಡ್‌ ಚಿತ್ರದ ಛಾಯೆ ಈ ಎರಡು ತಂಡಗಳ ಮೇಲಿದೆ ಎನ್ನಬಹುದು. ಇದು “ಅಂಡರ್‌ ಡಾಗ್‌’ ತಂಡಗಳ ಯಶೋಗಾಥೆಯನ್ನು ಸಾರಿದ ಚಿತ್ರವಾಗಿತ್ತು.

ಯಾರೂ ಗೆಲ್ಲಬಹುದು…
ರವಿವಾರ ರಾತ್ರಿ ಕಪ್‌ ಯಾರು ಗೆಲ್ಲಬಹುದು ಎಂಬುದು ಎಲ್ಲರ ಸಹಜ ಕುತೂಹಲ. ಒಂದೇ ಮಾತಲ್ಲಿ ಹೇಳುವುದಾದರೆ “ಯಾರೂ ಗೆಲ್ಲಬಹುದು’. ಎರಡೂ ಸಶಕ್ತ ಪಡೆಗಳೇ. ಲೀಗ್‌ ಹಂತದ ನಂ.1 ಮತ್ತು ನಂ.2 ತಂಡಗಳು. ತವರು ಅಂಗಳವಾದ್ದರಿಂದ ಗುಜರಾತ್‌ ಟೈಟಾನ್ಸ್‌ ಮೇಲೆ ನಿರೀಕ್ಷೆ ಜಾಸ್ತಿ. ಹಾಗೆಯೇ ಹೋಮ್‌ ಟೀಮ್‌ ಮೇಲೆ ಒತ್ತಡವೂ ಅಷ್ಟೇ ಇರುತ್ತದೆ ಎಂಬುದನ್ನು ಮರೆಯಬಾರದು.

ಜೋಶ್‌ ಹಾಗೂ ತಂಡದ ಶಕ್ತಿಯನ್ನು ತುಲನೆ ಮಾಡಿದರೆ ರಾಜಸ್ಥಾನಕ್ಕೆ ಅವಕಾಶ ಹೆಚ್ಚು. ಹಾಗೆಯೇ ಮೊದಲ ಪ್ರಶಸ್ತಿ ತಂದಿತ್ತ ನಾಯಕ, ಇತ್ತೀಚೆಗಷ್ಟೇ ಅಗಲಿದ ಶೇನ್‌ ವಾರ್ನ್ಗೆ ಗೌರವ ಸಲ್ಲಿಸುವ ಉದ್ದೇಶವೂ ರಾಜಸ್ಥಾನ್‌ ತಂಡದ್ದು. ಆದರೆ ಐಪಿಎಲ್‌ “ಲೆಕ್ಕಾಚಾರ’ ಮಾತ್ರ ಯಾವತ್ತೂ ಬೇರೆಯೇ ಆಗಿರುತ್ತದೆ!

Advertisement

ಪ್ರಸಕ್ತ ಸೀಸನ್‌ನಲ್ಲಿ ಈ ತಂಡಗಳು ಎರಡು ಸಲ ಮುಖಾಮುಖೀಯಾಗಿವೆ. ಒಂದು ಲೀಗ್‌ ಹಂತ, ಇನ್ನೊಂದು ಮೊದಲ ಕ್ವಾಲಿಫೈಯರ್‌ ಹಂತ. ಇವೆರಡರಲ್ಲೂ ಗುಜರಾತ್‌ ಜಯ ಸಾಧಿಸಿದೆ. ಅದು ಹ್ಯಾಟ್ರಿಕ್‌ ಸಾಧಿಸಿ ಕಪ್‌ ಎತ್ತೀತೇ ಅಥವಾ ರಾಜಸ್ಥಾನ್‌ ಸೇಡು ತೀರಿಸಿಕೊಂಡು ಕಪ್‌ ತನ್ನದಾಗಿಸಿಕೊಂಡೀತೇ… ನೆರೆಹೊರೆಯ ರಾಜ್ಯಗಳೆರಡರ ಕ್ರಿಕೆಟ್‌ ಕುತೂಹಲಕ್ಕೆ ಕೊನೆ ಇಲ್ಲ.

ಓಪನಿಂಗ್‌ ಯಶಸ್ಸು
ಗುಜರಾತ್‌ ಟೈಟಾನ್ಸ್‌ ಓಪನಿಂಗ್‌ನಲ್ಲಿ ಯಶಸ್ಸು ಕಾಣಬೇಕಿದೆ. ಗಿಲ್‌, ಸಾಹಾ, ವೇಡ್‌ ಪವರ್‌ ಪ್ಲೇಯಲ್ಲಿ ಉತ್ತಮ ಮೊತ್ತ ಪೇರಿಸಿದರೆ ದೊಡ್ಡ ಮೊತ್ತಕ್ಕೇನೂ ಕೊರತೆ ಇಲ್ಲ. ನಾಯಕ ಹಾರ್ದಿಕ್‌ ಪಾಂಡ್ಯ ಎಲ್ಲ ವಿಭಾಗಗಳಲ್ಲೂ ಪ್ರಬುದ್ಧತೆ ತೋರುತ್ತಿದ್ದಾರೆ. ಅವರು ಬೇಗನೇ ಕ್ರೀಸ್‌ ಇಳಿದು ತಂಡವನ್ನು ಆಧರಿಸಿ ನಿಲ್ಲುವ ರೀತಿ ಕ್ರಿಕೆಟ್‌ ಪ್ರೌಢತೆಗೆ ಸಾಕ್ಷಿ. ಡೇವಿಡ್‌ ಮಿಲ್ಲರ್‌ “ಕಿಲ್ಲರ್‌’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಹ್ಯಾಟ್ರಿಕ್‌ ಸಿಕ್ಸರ್‌ ಸಾಹಸ ಅಷ್ಟು ಬೇಗ ಮರೆತು ಹೋಗುವಂಥದ್ದಲ್ಲ. ಇನ್ನು ಬಿಗ್‌ ಹಿಟ್ಟರ್‌, ಗೇಮ್‌ ಚೇಂಜರ್‌ ಖ್ಯಾತಿಯ ತೆವಾಟಿಯ. ಅವರಿಗೆ ಮರುಜನ್ಮ ನೀಡಿದ ಸೀಸನ್‌ ಇದು.

ಟ್ರಂಪ್‌ ಕಾರ್ಡ್‌ ಶಮಿ, ಫರ್ಗ್ಯುಸನ್‌, ರಶೀದ್‌ ಖಾನ್‌, ಯಶ್‌ ದಯಾಳ್‌, ಜೋಸೆಫ್‌ ಅವರನ್ನೊಳಗೊಂಡ ಬೌಲಿಂಗ್‌ ತೀವ್ರ ಘಾತಕವೇನಲ್ಲ, ಆದರೆ ಪರಿಸ್ಥಿತಿಯನ್ನು ಬದಲಿಸಬಲ್ಲ ಸಾಮರ್ಥ್ಯವಂತೂ ಇದೆ.

ಟಾರ್ಗೆಟ್‌ ಬಟ್ಲರ್‌
ರಾಜಸ್ಥಾನ್‌ ಮೆಗಾ ಹರಾಜು ಹಂತದಲ್ಲೇ ಸಶಕ್ತ ತಂಡವೊಂದನ್ನು ರೂಪಿಸಿ ಅದಕ್ಕೆ ತಕ್ಕ ರೀತಿಯಲ್ಲಿ ಯಶಸ್ಸು ಕಾಣುತ್ತ ಬಂದಿದೆ. ಕಳೆದ ರಾತ್ರಿ ಅದು ಆರ್‌ಸಿಬಿಯನ್ನು ಬಡಿದು ಹೊರದಬ್ಬಿದ ರೀತಿಯನ್ನು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಾಗದು. ಗುಜರಾತ್‌ ಪಾಲಿಗೆ ಇದೊಂದು ಎಚ್ಚರಿಕೆಯ ಗಂಟೆ.

ಈಗಾಗಲೇ 4 ಶತಕ ಸಿಡಿಸಿರುವ ಇಂಗ್ಲಿಷ್‌ಮ್ಯಾನ್‌ ಜಾಸ್‌ ಬಟ್ಲರ್‌ ರಾಜಸ್ಥಾನ್‌ ತಂಡದ ಅಪಾಯಕಾರಿ ಬ್ಯಾಟರ್‌. ಇಡೀ ಬ್ಯಾಟಿಂಗ್‌ ವಿಭಾಗ ಬಟ್ಲರ್‌ ಅವರ ನಿರ್ವಹಣೆಯನ್ನು ಅವಲಂಬಿಸಿದೆ. ಅಕಸ್ಮಾತ್‌ ಬಟ್ಲರ್‌ ಬೇಗ ನಿರ್ಗಮಿಸಿದರೆ ರಾಜಸ್ಥಾನ್‌ ಅರ್ಧ ಸೋತಂತೆ. ಏಕೆಂದರೆ ಇಲ್ಲಿ ಬಟ್ಲರ್‌ ಬಿಟ್ಟರೆ ಇನ್ನಿಂಗ್ಸ್‌ ಕಟ್ಟಬಲ್ಲವರ ಸಂಖ್ಯೆ ಕಡಿಮೆ. ಗುಜರಾತ್‌ ಟಾರ್ಗೆಟ್‌ ಕೂಡ ಬಟ್ಲರ್‌ ವಿಕೆಟೇ ಆಗಿರುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next