Advertisement
ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಗೆ ಮತ್ತೆ ಮುಂಬೈ ಇಂಡಿಯನ್ಸ್ ಬಲೆ ಬೀಸಿತು. ಅವರ ಬೆಲೆ 15.25 ಕೋಟಿ ರೂ. ಅಂದರೆ ಮೂಲಬೆಲೆಗಿಂತ (2 ಕೋಟಿ ರೂ.) ಏಳೂವರೆಪಟ್ಟು ಹೆಚ್ಚು! ಇದು ಐಪಿಎಲ್ ಹರಾಜು ಇತಿಹಾಸದಲ್ಲಿ ಭಾರತೀಯ ಆಟಗಾರನಿಗೆ ಲಭಿಸಿದ 2ನೇ ಅತ್ಯಧಿಕ ಮೊತ್ತ. ಯುವರಾಜ್ ಸಿಂಗ್ 16 ಕೋಟಿ ರೂ.ಗೆ ಮಾರಾಟವಾದದ್ದು ದಾಖಲೆ.
Related Articles
Advertisement
20 ಲಕ್ಷ ರೂ.ನಿಂದ ದಶಕೋಟಿಗೆ ಭಡ್ತಿ :
ಹರ್ಯಾಣದ ಬಲಗೈ ವೇಗಿ, ಆಲ್‌ರೌಂಡರ್ ಹರ್ಷಲ್ ಪಟೇಲ್ ಅವರ ಮೌಲ್ಯದ ಗ್ರಾಫ್ ಒಮ್ಮೆಲೇ 20 ಲಕ್ಷ ರೂ. ಮೊತ್ತದಿಂದ 10.75 ಕೋಟಿ ರೂ.ಗೆ ಏರಿದ್ದು ಈ ಹರಾಜಿನ ವಿಸ್ಮಯ. ಇನ್ನೊಂದು ವಿಸ್ಮಯವೆಂದರೆ ಹಿಂದಿನ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲೇ ಇದ್ದ ಈ ಆಟಗಾರನನ್ನು ಆರ್‌ಸಿಬಿಯೇ ಇಷ್ಟೊಂದು ದುಬಾರಿ ಮೊತ್ತಕ್ಕೆ ಖರೀದಿಸಿದ್ದು! 2014ರ ಹರಾಜಿನಲ್ಲಿ ಹರ್ಷಲ್ 40 ಲಕ್ಷ ರೂ. ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದರು. 2018ರ ಹರಾಜಿನಲ್ಲಿ ಅವರ ಮೌಲ್ಯ 20 ಲಕ್ಷ ರೂ.ಗೆ ಕುಸಿಯಿತು. ಹರ್ಷಲ್ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸೇರಿಕೊಂಡರು. 2021ರಲ್ಲಿ ಹರ್ಷಲ್ ಮತ್ತೆ ಆರ್‌ಸಿಬಿ ಪಾಳೆಯ ಸೇರಿಕೊಂಡರು. ಮೊತ್ತದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ (20 ಲಕ್ಷ ರೂ.). ಹ್ಯಾಟ್ರಿಕ್ ಹೀರೋ ಆಗಿ ಮೆರೆದರು. ಭಾರತ ತಂಡವನ್ನೂ ಪ್ರತಿನಿಧಿಸಿದರು. ಈ ಬಾರಿ ಬಂಪರ್ ಹೊಡೆಯಿತು!
ಮತ್ತೆ ಧೋನಿಯನ್ನು ಕೂಡಿಕೊಂಡ ವೇಗಿ :
ಆಲ್‌ರೌಂಡರ್ ದೀಪಕ್ ಚಹರ್ ಚೆನ್ನೈ ಸೇರಿದ ಬಳಿಕವೇ ಐಪಿಎಲ್‌ನಲ್ಲಿ ಸುದ್ದಿಯಾದದ್ದು. 2016ರಲ್ಲಿ ಪುಣೆ ಫ್ರಾಂಚೈಸಿ ಸೇರಿದ್ದ ಚಹರ್ 2 ಋತುಗಳ 5 ಪಂದ್ಯಗಳಿಂದ ಉರುಳಿಸಿದ್ದು ಒಂದೇ ವಿಕೆಟ್. ಬಳಿಕ 2018ರ ಹರಾಜಿನಲ್ಲಿ 80 ಲಕ್ಷ ರೂ.ಗೆ ಚೆನ್ನೈ ಪಾಲಾದರು. ಕಳೆದ 4 ಋತುಗಳಿಂದಲೂ ಧೋನಿ ತಂಡದ ಪರ ಆಡುತ್ತಲೇ ಇದ್ದಾರೆ. 58 ಪಂದ್ಯಗಳಿಂದ 58 ವಿಕೆಟ್ ಉರುಳಿಸಿದ ಸಾಧನೆ ಇವರದು. ಪವರ್ ಪ್ಲೇಯಲ್ಲಿ ದೀಪಕ್ ಚಹರ್ ಹೆಚ್ಚು ಪರಿಣಾಮಕಾರಿ. ಇಲ್ಲಿ ಚೆನ್ನೈ ಪರ 42 ವಿಕೆಟ್ ಕೆಡವಿದ್ದಾರೆ. ಜತೆಗೆ ಹಾರ್ಡ್ ಹಿಟ್ಟಿಂಗ್ ಬ್ಯಾಟಿಗ ಕೂಡ ಹೌದು. ಭಾರತ ತಂಡದ ಪರವೂ ಗಮನಾರ್ಹ ಸಾಧನೆಗೈದಿದ್ದಾರೆ.
ಒಂದೂ ವಿಕೆಟ್ ಕೀಳದಿದ್ದರೂ ಭರ್ಜರಿ ಮೊತ್ತ! :
ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಅವರದು ಬಂಪರ್ ಸಾಧನೆ. ಆರ್‌ಸಿಬಿ ದುಬಾರಿ ಮೊತ್ತ ಸುರಿದು ಇವರನ್ನು ಸೆಳೆದುಕೊಂಡಿತು. ಇವರು ಕಳೆದ ಋತುವಿನಲ್ಲೂ ಆರ್‌ಸಿಬಿಯಲ್ಲೇ ಇದ್ದರು. ಆ್ಯಡಂ ಝಂಪ ಮತ್ತು ಕೇನ್ ರಿಚಡ್ಸìನ್ ಕೊರೊನಾ ಭೀತಿಯಿಂದ ಆಸ್ಟ್ರೇಲಿಯಕ್ಕೆ ವಾಪಸಾದಾಗ ಹಸರಂಗ ಬದಲಿ ಆಟಗಾರನಾಗಿ ಆರ್‌ಸಿಬಿ ಸೇರಿಕೊಂಡಿದ್ದರು. 2 ಪಂದ್ಯವಾಡಿದ್ದು, ಒಂದೂ ವಿಕೆಟ್ ಉರುಳಿಸಿರಲಿಲ್ಲ. 4 ಓವರ್ ಕೋಟಾವನ್ನೂ ಪೂರೈಸಿರಲಿಲ್ಲ. ಒಟ್ಟು 6 ಓವರ್‌ಗಳಲ್ಲಿ 60 ರನ್ ಬಿಟ್ಟುಕೊಟ್ಟಿದ್ದರು. ಇವರನ್ನೀಗ ಆರ್‌ಸಿಬಿ 10.75 ಕೋಟಿ ನೀಡಿ ಖರೀದಿಸಿದೆ! ಇದನ್ನು ಕೇಳಿಯೇ ಹರಾಜುಗಾರ ಎಡ್ಮಿಡ್ಸ್ ಕುಸಿದು ಬಿದ್ದರು ಎಂಬ ಜೋಕ್ ವೈರಲ್ ಆಗಿದೆ!
ಸ್ಥಿರವಾಗಿ ಆಡದ ಸ್ಫೋಟಕ ಬ್ಯಾಟಿಗನಿಗೇಕೆ ಇಷ್ಟು ಬೇಡಿಕೆ? :
ನಿಕೋಲಸ್ ಪೂರಣ್ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟಿಗ ಹಾಗೂ ಕೀಪರ್. ಆದರೆ ಐಪಿಎಲ್‌ನಲ್ಲಿ ಪೂರನ್ ಈವರೆಗೆ ಪರಿಪೂರ್ಣ ಸಾಧನೆ ತೋರ್ಪಡಿಸಿದವರಲ್ಲ. ಕಳೆದ ಋತುವನ್ನೇ ಗಮನಿಸಿ… ಇವರಾಗ ಪಂಜಾಬ್ ಕಿಂಗ್ಸ್ ಆಟಗಾರ. ತಂಡದ ವೈಫಲ್ಯದಲ್ಲಿ ಇವರ ಕೊಡುಗೆ ದೊಡ್ಡದು. 12 ಪಂದ್ಯ ಆಡಿದರೂ ಗಳಿಸಿದ್ದು ಬರೀ 85 ರನ್. ಇದರಲ್ಲಿ 32 ರನ್ ಗರಿಷ್ಠ. ವಿಂಡೀಸ್ ತಂಡದಲ್ಲೂ ಇವರ ಇತ್ತೀಚಿನ ಸಾಧನೆ ಶೂನ್ಯ. ಆದರೂ ಇವರಿಗೆ ಸನ್‌ರೈಸರ್ 10.75 ಕೋಟಿ ರೂ. ನೀಡಿದ್ದು ಅಚ್ಚರಿಯ ಮೇಲಚ್ಚರಿ!
ಹಂತಹಂತವಾಗಿ ಪ್ರಸಿದ್ಧಿ ಪಡೆದ ಕೃಷ್ಣ… :
ಕರ್ನಾಟಕದ ಬಲಗೈ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ, ಐಪಿಎಲ್ ಮೂಲಕವೇ ಪ್ರಸಿದ್ಧಿಗೆ ಬಂದ ಆಟಗಾರ. ಕೆಕೆಆರ್ ತಂಡದ ಸ್ಟ್ರೈಕ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. 2018ರಲ್ಲಿ ಕಮಲೇಶ್ ನಾಗರಕೋಟಿಗೆ ಬದಲಿ ಆಟಗಾರನಾಗಿ ಬಂದು ಐಪಿಎಲ್ ಪದಾರ್ಪಣೆ ಮಾಡಿದ್ದರು. 7 ಪಂದ್ಯಗಳಿಂದ 10 ವಿಕೆಟ್ ಕಿತ್ತರು. ಒಟ್ಟು 34 ಐಪಿಎಲ್ ಪಂದ್ಯಗಳಿಂದ 30 ವಿಕೆಟ್ ಉರುಳಿಸಿ ದರು. ಇಲ್ಲಿನ ಯಶಸ್ಸಿ ನಿಂದ ಭಾರತ ತಂಡದ ಬಾಗಿಲು ತೆರೆಯಿತು. ಕಳೆದ ವೆಸ್ಟ್ ಇಂಡೀಸ್ ಎದುರಿನ ಏಕದಿನ ಮುಖಾಮುಖೀಯಲ್ಲಿ ಜೀವನಶ್ರೇಷ್ಠ ಸಾಧನೆಗೈದದ್ದು, ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದದ್ದು ಐಪಿಎಲ್‌ನಲ್ಲಿ ದೊಡ್ಡ ಮೊತ್ತ ಗಳಿಸಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸಿತ್ತು. ಇದು ಹುಸಿಯಾಗಲಿಲ್ಲ. ಇವರನ್ನು ರಾಜಸ್ಥಾನ್ ರಾಯಲ್ಸ್ ಸೆಳೆಯುವಲ್ಲಿ ಯಶಸ್ವಿಯಾಯಿತು.
ಉಪಯುಕ್ತ ಆಲ್‌ರೌಂಡರ್‌ಗೆ ಯೋಗ್ಯ ಬೆಲೆ :
ಶಾದೂìಲ್ ಠಾಕೂರ್ ಚೆನ್ನೈ ತಂಡದ ಪ್ರಧಾನ ಬೌಲರ್, ಜತೆಗೆ ಆಲ್‌ರೌಂಡರ್ ಆಗಿದ್ದವರು. ಈ ಬಾರಿ ಡೆಲ್ಲಿ ಪಾಳೆಯ ಸೇರಿಕೊಂಡರು. ಠಾಕೂರ್‌ಗಾಗಿ ಮೊದಲು ಡೆಲ್ಲಿ-ಚೆನ್ನೈ ನಡುವೆ ಪೈಪೋಟಿ ಕಂಡುಬಂತು. ಚೆನ್ನೈ 7.5 ಕೋಟಿ ರೂ. ತನಕ ಬಂದು ಹಿಂದೆ ಸರಿಯಿತು. ಬಳಿಕ ಡೆಲ್ಲಿ ಜತೆ ಸ್ಪರ್ಧೆಗೆ ಇಳಿದ ಫ್ರಾಂಚೈಸಿ ಪಂಜಾಬ್. ಅಂತೂ ಡೆಲ್ಲಿಗೆ ಉಪಯುಕ್ತ ಸವ್ಯಸಾಚಿಯೋರ್ವ ಲಭಿಸಿದಂತಾಯಿತು.
ಲಾಕೀಯನ್ನು ಗೆದ್ದುಕೊಂಡ ಗುಜರಾತ್ :
ನ್ಯೂಜಿಲೆಂಡ್ ಆಲ್‌ರೌಂಡರ್‌ಗಾಗಿ ಡೆಲ್ಲಿ, ಗುಜರಾತ್ ಮತ್ತು ಆರ್‌ಸಿಬಿ ಆರಂಭದಲ್ಲಿ ತೀವ್ರ ಪೈಪೋಟಿಗೆ ಇಳಿದವು. ಡೆಲ್ಲಿ, ಗುಜರಾತ್ 4 ಕೋಟಿಯಿಂದ ಬಿಡ್ ಆರಂಭಿಸಿದರೆ, ಆರ್‌ಸಿಬಿ 6.75 ಕೋಟಿ ರೂ. ವೇಳೆ ಕಣಕ್ಕಿಳಿಯಿತು. ಆಗ ಗುಜರಾತ್ 7 ಕೋಟಿ ರೂ.ಗೆ ತಲುಪಿತು. ಆರ್‌ಸಿಬಿ 8.75ರ ತನಕ ಸಾಗಿತು. ಈ ಹಂತದಲ್ಲಿ ಲಕ್ನೋ ಕೂಡ ಫರ್ಗ್ಯುಸನ್ ಮೇಲೆ ಆಸಕ್ತಿ ತೋರಿತು. ಕಡೆಗೆ ಅವರನ್ನು 10 ಕೋಟಿ ರೂ. ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ಖರೀದಿಸಿತು.
ಮಾರಾಟವಾಗಲಿಲ್ಲವೇಕೆ ರೈನಾ, ಸ್ಮಿತ್, ಶಕಿಬ್? :
ಈ ಬಾರಿ ಐಪಿಎಲ್ ಹರಾಜಿನಲ್ಲಿ ವಿಚಿತ್ರವೆನಿಸಿದ ಸಂಗತಿಯೆಂದರೆ ದುಬಾರಿ ಮೊತ್ತಕ್ಕೆ ಮಾರಾಟ ವಾಗಬಹುದು ಎಂದು ಭಾವಿಸಲ್ಪಟ್ಟಿದ್ದ ಸುರೇಶ್ ರೈನಾ, ಶಕಿಬ್ ಅಲ್ ಹಸನ್, ವಿಶ್ವವಿಖ್ಯಾತ ಬ್ಯಾಟಿಗ ಸ್ಟೀವ್ ಸ್ಮಿತ್ ಮಾರಾಟವಾಗದೇ ಉಳಿದದ್ದು! ಚೆನ್ನೈ ತಂಡದ ಭಾವೀ ನಾಯಕ ಎಂದೇ ವರ್ಣಿಸಲ್ಪಟ್ಟಿದ್ದ ರೈನಾ, ಹಿಂದಿನ ಐಪಿಎಲ್‌ನ ಕೊನೆಕೊನೆಯ ಪಂದ್ಯಗಳಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಬಾರಿಯೂ ಚೆನ್ನೈ ಅವರನ್ನು ಖರೀದಿಸಲು ಆಸಕ್ತಿ ತೋರಲಿಲ್ಲ. ಐಪಿಎಲ್‌ನಲ್ಲಿ ತಾಂತ್ರಿಕತೆ, ಸ್ಥಿರತೆಗಿಂತ ಸ್ಫೋಟಕತೆಯೇ ಮುಖ್ಯವಾಗಿರುವುದರಿಂದ ಸ್ಮಿತ್ ಬಗ್ಗೆ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಇನ್ನು ಡೇವಿಡ್ ಮಿಲ್ಲರ್, ಸ್ಯಾಮ್ ಬಿಲ್ಲಿಂಗ್ಸ್, ವೃದ್ಧಿಮಾನ್ ಸಹಾ ಮಾರಾಟವಾಗದ ಪ್ರಮುಖರು.
ಇವರಿಗೇಕೆ ತೀರಾ ಕಡಿಮೆ ಬೆಲೆ? :
ಐಪಿಎಲ್ ಹರಾಜಿನಲ್ಲಿ ಕೆಲವೊಮ್ಮೆ ತೀರಾ ಅಚ್ಚರಿಗಳು ಸಂಭವಿಸುತ್ತವೆ. ವಿಶ್ವವಿಖ್ಯಾತ, ಸ್ಫೋಟಕ ಬ್ಯಾಟಿಗ ಡೇವಿಡ್ ವಾರ್ನರ್ ಕೇವಲ 6.25 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡರು. ಆಸೀಸ್‌ನ ವೇಗದ ಬೌಲಿಂಗ್ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್‌ಗೆ ಸಿಕ್ಕಿದ್ದು 7.25 ಕೋಟಿ ರೂ. ಮೂಲಬೆಲೆ ಕೇವಲ 40 ಲಕ್ಷ ರೂ. ಇದ್ದ ರಾಹುಲ್ ತೆವಾತಿಯ 9 ಕೋ.ರೂ. ಪಡೆದರು. ಇನ್ನು ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಲೆಕ್ಕಾಚಾರದ ದೃಷ್ಟಿಯಿಂದ ನೋಡಿದರೆ ಬರೀ ಬೌಲಿಂಗ್ ಮಾತ್ರ ಮಾಡಬಲ್ಲರು. ಅವರಿಗೆ 10 ಕೋ.ರೂ. ಸಿಕ್ಕಿದೆ. ಈ ರೀತಿಯ ಖರೀದಿಯ ಹಿಂದಿನ ಲೆಕ್ಕಾಚಾರಗಳು ಅರ್ಥವಾಗುವುದಿಲ್ಲ!
ಆರ್‌ಸಿಬಿಗೆ ಡು ಪ್ಲೆಸಿಸ್ ನಾಯಕ? :
2013ರಿಂದಲೂ ಆರ್‌ಸಿಬಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಕಳೆದ ಐಪಿಎಲ್ ವೇಳೆ ಈ ಹುದ್ದೆಯಿಂದ ಕೆಳಗಿಳಿದಿದ್ದರು. 2022ರಲ್ಲಿ ಆರ್‌ಸಿಬಿಯನ್ನು ಮುನ್ನಡೆಸುವವರು ಯಾರು ಎಂಬುದು ಅಭಿಮಾನಿಗಳ ಕುತೂಹಲ. ಕಳೆದ ಬಾರಿ ಚೆನ್ನೈ ತಂಡದಲ್ಲಿದ್ದ ಫಾ ಡು ಪ್ಲೆಸಿಸ್ ಈ ಬಾರಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಆದ್ದರಿಂದ ಅವರಿಗೇ ಈ ಅವಕಾಶ ಸಿಗುವ ಸಾಧ್ಯತೆ ಜಾಸ್ತಿ. ಫಾ ಡು ಪ್ಲೆಸಿಸ್‌ಗೆ ಈ ಅವಕಾಶ ಸಿಗುವ ಸಾಧ್ಯತೆ ಹೆಚ್ಚು ಎಂಬ ಸುದ್ದಿ ಹರಿದಾಡುತ್ತಿದೆ.
ಡು ಪ್ಲೆಸಿಸ್ ಅವರನ್ನು ಚೆನ್ನೈ ಉಳಿಸಿಕೊಳ್ಳದಿದ್ದುದು ಅಚ್ಚರಿಯಾಗಿ ಕಂಡಿತ್ತು. 2021ರ ಚೆನ್ನೈ ವಿಜಯದಲ್ಲಿ ಈ ದ.ಆಫ್ರಿಕಾ ಕ್ರಿಕೆಟಿಗನ ಕೊಡುಗೆ ದೊಡ್ಡಮಟ್ಟದ್ದಾಗಿತ್ತು. 16 ಪಂದ್ಯಗಳಿಂದ 633 ರನ್ ಪೇರಿಸಿದ್ದರು. ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಡು ಪ್ಲೆಸಿಸ್‌ಗೆ ವಿಶೇಷ ಸ್ಥಾನ. ಭರ್ತಿ 100 ಪಂದ್ಯಗಳಿಂದ 2,935 ರನ್ ಪೇರಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿರುವುದರಿಂದ ಡು ಪ್ಲೆಸಿಸ್ ಆರ್‌ಸಿಬಿ ನಾಯಕನಾದರೆ ಅಚ್ಚರಿ ಇಲ್ಲ.
ಸ್ವಾರಸ್ಯಗಳು :
- ಹಿಂದೆ ಮಂಕಡ್ ಔಟ್ ಮಾಡುವ ಮೂಲಕ ಇಂಗ್ಲೆಂಡ್ ಬ್ಯಾಟಿಗ ಜಾàಸ್ ಬಟ್ಲರ್‌ರೊಂದಿಗೆ ಆರ್.ಅಶ್ವಿನ್ ಗಲಾಟೆ ಮಾಡಿಕೊಂಡಿದ್ದರು. ಈಗ ಅಶ್ವಿನ್ ರಾಜಸ್ಥಾನ್ ಪಾಲಾಗಿರುವುದರಿಂದ, ಬಟ್ಲರ್ ಜೊತೆಗೆ ಗೆಳೆತನ ಸಾಧಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ!
- ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್‌ಗೆ ಹಾರ್ದಿಕ್ ಪಾಂಡ್ಯ ನಾಯಕ. ಈಗ ತಮ್ಮ ಹಾರ್ದಿಕ್‌ನನ್ನು ಅಣ್ಣ ಕೃಣಾಲ್ ಪಾಂಡ್ಯ ಕೂಡಿಕೊಂಡಿದ್ದಾರೆ.
- 2021, ನವೆಂಬರ್‌ನಲ್ಲಿ ದೇಶಿ ಟಿ20ಗೆ ಪದಾರ್ಪಣೆ ಮಾಡಿದ್ದ ಕರ್ನಾಟಕದ ಅಭಿನವ್ ಮನೋಹರ್‌ಗೆ ಅದೃಷ್ಟ ಕುದುರಿದೆ. ಕೇವಲ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಅವರು ಗುಜರಾತ್ ಟೈಟಾನ್ಸ್‌ಗೆ60 ಕೋ.ರೂ.ಗೆ ಮಾರಾಟವಾಗಿದ್ದಾರೆ!
- ಚನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಬೆಲೆ 12 ಕೋಟಿ ರೂ. ಆ ತಂಡ ಖರೀದಿಸಿರುವ ದೀಪಕ್ ಚಹರ್ 14 ಕೋ.ರೂ. ಪಡೆದು ನಾಯಕನನ್ನೇ ಮೀರಿಸಿದ್ದಾರೆ.
- ಮುಂಬೈ ನಾಯಕ ರೋಹಿತ್ ಶರ್ಮರಿಗೆ (16 ಕೋ.ರೂ.) ಹತ್ತಿರಹತ್ತಿರ ಮೊತ್ತವನ್ನು ಇಶಾನ್ ಕಿಶನ್ (15.25 ಕೋ.ರೂ.) ಪಡೆದಿದ್ದಾರೆ.