ಶಾರ್ಜಾ: ರಾಯಲ್ ಚಾಲೆಂಜರ್ ಬೆಂಗಳೂರು 3ನೇ ತಂಡವಾಗಿ ಐಪಿಎಲ್ ಪ್ಲೇ-ಆಫ್ ಸುತ್ತಿಗೆ ಲಗ್ಗೆ ಇರಿಸಿದೆ. ಭಾನು ವಾರ ಪಂಜಾಬ್ ಕಿಂಗ್ಸ್ ವಿರುದ್ಧ ಇನ್ನೇನು ಸೋತೇ ಬಿಟ್ಟಿತೆನ್ನುವ ಹಂತದಲ್ಲಿ ತಿರುಗಿ ಬಿದ್ದ ಆರ್‌ಸಿಬಿ ಆರು ರನ್ನುಗಳ ರೋಚಕ ಜಯ ದಾಖಲಿಸಿ ಮೇಲೇರಿತು.
ಸುಸ್ಥಿತಿಯಲ್ಲಿದ್ದ ಪಂಜಾಬ್ ಕೈಲಿದ್ದ ಪಂದ್ಯವನ್ನು ಕಳೆದುಕೊಂಡು ತನ್ನ ದುರದೃಷ್ಟವನ್ನು ಹಳಿಯತೊಡಗಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 7 ವಿಕೆಟಿಗೆ 164 ರನ್ ಪೇರಿಸಿತು. ಪಂಜಾಬ್ 6 ವಿಕೆಟಿಗೆ 158 ರನ್ ಮಾಡಿ 8ನೇ ಸೋಲಿಗೆ ತುತ್ತಾಯಿತು. ರಾಹುಲ್ (39), ಅಗರ್ವಾಲ್ (57) 10.5 ಓವರ್‌ಗಳಿಂದ 91 ರನ್ ರಾಶಿ ಹಾಕಿದಾಗ ಪಂಜಾಬ್ ಗೆ ಗೆಲುವು ಖಂಡಿತ ಎಂಬುದೇ ಎಲ್ಲರ ನಿರೀಕ್ಷೆ ಯಾಗಿತ್ತು.
ಆದರೆ ಅದೃಷ್ಟ ಆರ್‌ಸಿಬಿ ಪಾಳೆಯದಲ್ಲಿ ಬೀಡುಬಿಟ್ಟಿತ್ತು. 17ನೇ ಓವರ್‌ನಲ್ಲಿ 127ಕ್ಕೆ 5 ವಿಕೆಟ್ ಕಳೆದುಕೊಂಡ ಪಂಜಾಬ್ ಸೋಲಿನತ್ತ ಮುಖ ಮಾಡತೊಡಗಿತು. ಪೂರಣ್ ಮತ್ತೆ ಕೈಕೊಟ್ಟರು. ಅಗರ್ವಾಲ್ ಮತ್ತು ಸಫìರಾಜ್ (0) ಅವರನ್ನು ಚಹಲ್ ಒಂದೇ ಓವರ್ ನಲ್ಲಿ ವಾಪಸ್ ಕಳುಹಿಸಿದರು. ಮಾರ್ಕ್‌ರಮ್, ಶಾರೂಖ್ ಖಾನ್, ಹೆನ್ರಿಕ್ಸ್ ಅವರಿಗೆ ಒತ್ತಡವನ್ನು ನಿಭಾಯಿಸಲಾಗಲಿಲ್ಲ. 36 ಎಸೆತಗಳಿಂದ 63 ರನ್, ಅಂತಿಮ ಓವರ್‌ನಲ್ಲಿ 19 ರನ್ ತೆಗೆಯುವ ಸವಾಲನ್ನು ಆಹ್ವಾನಿಸಿ ಕೊಂಡ ಪಂಜಾಬ್‌ಗ ಸೋಲಿನ ಬಲೆಯಿಂದ ತಪ್ಪಿಸಿಕೊಳ್ಳಲು ಯಾವ ಮಾರ್ಗವೂ ಇರಲಿಲ್ಲ.
ಭರವಸೆಯ ಆರಂಭ : ಗ್ಲೆನ್ ಮ್ಯಾಕ್ಸ್ ವೆಲ್ ಅವರ ಮತ್ತೂಂದು ಆಕರ್ಷಕ ಅರ್ಧ ಶತಕ, ಅವರು ಎಬಿಡಿ ಜತೆ ನಡೆಸಿದ ಉತ್ತಮ ಜತೆಯಾಟ, ಪಡಿಕ್ಕಲ್ -ಕೊಹ್ಲಿ ಜೋಡಿಯ ಭರವಸೆಯ ಆರಂಭವೆಲ್ಲ ಆರ್‌ಸಿಬಿ ಸರದಿಯ ಆಕರ್ಷಣೆಯಾಗಿತ್ತು. ಪಡಿಕ್ಕಲ್-ಕೊಹ್ಲಿ 9.4 ಓವರ್ ಗಳಿಂದ 68 ರನ್ ಸಂಗ್ರಹಿಸಿದರು. ಆದರೆ ಸ್ಕೋರ್ 73ಕ್ಕೆ ಏರುವಷ್ಟರಲ್ಲಿ 3 ವಿಕೆಟ್ ಬಡಬಡನೆ ಬಿತ್ತು.
ಆರಂಭಿಕರಿಬ್ಬರ ಜತೆಗೆ ಡೇನಿಯಲ್ ಕ್ರಿಸ್ಟಿಯನ್ ಕೂಡ ಪೆವಿಲಿಯನ್ ಸೇರಿಕೊಂಡರು. ಪಡಿಕ್ಕಲ್ 38 ಎಸೆತಗಳಿಂದ 40 ರನ್ (4 ಫೋರ್, 2 ಸಿಕ್ಸರ್) ಬಾರಿಸಿದರೆ, ಕೊಹ್ಲಿ 24 ಎಸೆತ ಎದುರಿಸಿ 25 ರನ್ ಮಾಡಿದರು (2 ಬೌಂಡರಿ, 1 ಸಿಕ್ಸರ್). ಈ ನಡುವೆ ಕ್ರಿಸ್ಟಿಯನ್ ಗೋಲ್ಡನ್ ಡಕ್ ಅವಮಾನಕ್ಕೆ ಸಿಲುಕಿದರು. ಪ್ರಚಂಡ ಫಾರ್ಮ್ನಲ್ಲಿದ್ದ ಶ್ರೀಕರ್ ಭರತ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸದಿದ್ದುದು ಅಚ್ಚರಿಯಾಗಿ ಕಂಡಿತು.
ಮ್ಯಾಕ್ಸ್‌ವೆಲ್ ಪವರ್: ಆಸ್ಟ್ರೇಲಿಯದ ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು 360 ಡಿಗ್ರಿ ಪ್ಲೇಯರ್ ಎಬಿ ಡಿ ವಿಲಿಯರ್ 4ನೇ ವಿಕೆಟಿಗೆ ಜತೆಗೂಡಿದ ಬಳಿಕ ಆರ್‌ಸಿಬಿ ಸ್ಕೋರ್‌ಬೋರ್ಡ್ ಮತ್ತೆ ಬೆಳೆಯತೊಡಗಿತು. ಸ್ಫೋಟಕ ಆಟವಾಡಿದ ಮ್ಯಾಕ್ಸ್ ವೆಲ್ ತಮ್ಮ ಹಿಂದಿನ ತಂಡದ ಮೇಲೆರಗಿ ಹೋದರು. 33 ಎಸೆತ ಎದುರಿಸಿ 4 ಸಿಕ್ಸರ್, 3 ಬೌಂಡರಿ ನೆರವಿನಿಂದ 57 ರನ್ ಕೊಡುಗೆ ಸಲ್ಲಿಸಿದರು.
ಈ ಐಪಿಎಲ್‌ನಲ್ಲಿ ಮ್ಯಾಕ್ಸಿ ಬಾರಿಸಿದ 5ನೇ ಫಿಫ್ಟಿ ಇದಾಗಿದೆ. ಎಬಿಡಿ ಮಿಂಚಿನ ಗತಿಯಲ್ಲಿ 23 ರನ್ ಮಾಡಿ ರನೌಟಾದರು. 18 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್, ಒಂದು ಫೋರ್ ಒಳಗೊಂಡಿತ್ತು. ಈ ಜೋಡಿಯಿಂದ 73 ರನ್ ಒಟ್ಟುಗೂಡಿತು.
ಸಂಕ್ಷಿಪ್ತ ಸ್ಕೋರ್:
ಆರ್ ಸಿಬಿ: 164/7, ಮ್ಯಾಕ್ಸ್ ವೆಲ್ – 57(33), ಪಡಿ ಕ್ಕಲ್ – 40(38), ಶಮಿ 39/3, ಹೆನ್ರಿ ಕಸ್ 12/3 , ಪಂಜಾಬ್ : ಅಗ ರ್ವಾಲ್ – 57(42) ಕೆ.ಎ ಲ್. ರಾ ಹುಲ್ – 39(35), ಚಾಹಲ್ 29/3, ಗಾರ್ಟ ನ್ 27/1.