Advertisement
ರಾಜಸ್ಥಾನ್ ಮತ್ತು ಕೆಕೆಆರ್ ಒಂದೇ ದೋಣಿಯಲ್ಲಿ ಪಯಣಿಸುವ ತಂಡಗಳಾಗಿವೆ. ಎರಡೂ ತಂಡಗಳು 4 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಮುಗ್ಗರಿಸಿವೆ. ಒಂದನ್ನಷ್ಟೇ ಗೆದ್ದಿವೆ. ಹೀಗಾಗಿ ಎರಡೂ ತಂಡಗಳ ಮುಂದಿನ ಹಂತದ ಪ್ರಯಾಣಕ್ಕೆ ಇನ್ನಷ್ಟು ಗೆಲುವು ಅಗತ್ಯವಿದೆ. ಅದು ಇಲ್ಲಿಂದಲೇ ಆರಂಭವಾಗಬೇಕಿದೆ.
ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಜಸ್ಥಾನ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳೆರಡಕ್ಕೂ ಮೇಜರ್ ಸರ್ಜರಿಯ ಅಗತ್ಯವಿದೆ. ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸಾಕಷ್ಟು ಮಂದಿ ಬಿಗ್ ಹಿಟ್ಟರ್ ಇದ್ದರೂ ಯಾರೂ ಸಿಡಿಯುತ್ತಿಲ್ಲ. ಸ್ಟೋಕ್ಸ್ ಹೊರಬಿದ್ದರೂ ಬಟ್ಲರ್, ಮಿಲ್ಲರ್ ಅವರಂಥ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿಯೂ ರಾಜಸ್ಥಾನ್ ರನ್ ಬರಗಾಲ ಅನುಭವಿಸುತ್ತಿರುವುದೊಂದು ದುರಂತ. ಮನನ್ ವೋಹ್ರಾ, ರಿಯಾನ್ ಪರಾಗ್, ಮುಸ್ತಫಿಜುರ್ ರೆಹಮಾನ್ ಬದಲು ಇತರ ಆಟಗಾರರಿಗೆ ಅವಕಾಶ ನೀಡಿದರೆ ತಂಡಕ್ಕೆ ಹೆಚ್ಚಿನ ಲಾಭವಾದೀತು.