Advertisement

ಇಂದು ಆರ್‌ಸಿಬಿ-ಕೆಕೆಆರ್‌ ಎಲಿಮಿನೇಟರ್‌ ಪಂದ್ಯ ಗೆದ್ದರಷ್ಟೇ ಉಳಿಗಾಲ; ಸೋತವರು ಮನೆಗೆ

11:23 PM Oct 10, 2021 | Team Udayavani |

ಶಾರ್ಜಾ: ಭಾರತ, ಇಂಗ್ಲೆಂಡ್‌ ತಂಡಗಳನ್ನು ಯುಎಇ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮುನ್ನಡೆ ಸಲಿರುವ ವಿರಾಟ್‌ ಕೊಹ್ಲಿ ಮತ್ತು ಮಾರ್ಗನ್‌ ಅವರಿಗೆ ಇದಕ್ಕೂ ಮೊದಲು ಐಪಿಎಲ್‌ ಹರ್ಡಲ್ಸ್‌ ದಾಟಬೇಕಾದ ಒತ್ತಡ ಎದುರಾಗಿದೆ. ಸೋಮವಾರ ಇವರ ನಾಯಕತ್ವದ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳು ಎಲಿಮಿನೇಟರ್‌ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ಇಲ್ಲಿ ಗೆದ್ದವರಿಗಷ್ಟೇ ಉಳಿಗಾಲ. ಸೋತವರು ಕೂಟದಿಂದ ಹೊರಬೀಳಲಿದ್ದಾರೆ.

Advertisement

ಆರ್‌ಸಿಬಿ ತೃತೀಯ ಸ್ಥಾನಿಯಾಗಿ ಬಹಳ ಬೇಗನೇ ಪ್ಲೇ ಆಫ್ಗೆ ಬಂದ ಹೆಗ್ಗಳಿಕೆ ಹೊಂದಿದ ತಂಡ. ಆದರೆ ಕೆಕೆಆರ್‌ ಅಂತಿಮ ಲೀಗ್‌ ಪಂದ್ಯದ ತನಕ ಕಾಯಬೇಕಾಯಿತು. ಮುಂಬೈಗಿಂತ ಹೆಚ್ಚಿನ ರನ್‌ರೇಟ್‌ ಹೊಂದಿರುವುದರಿಂದ 4ನೇ ಸ್ಥಾನಿಯಾಗಿ ಮುಂದಿನ ಸುತ್ತಿಗೆ ಏರಿತು. ಲೀಗ್‌ ಹಂತದಲ್ಲಿ ಆರ್‌ಸಿಬಿ-ಕೆಕೆಆರ್‌ 1-1 ಸಮಬಲದ ಫ‌ಲಿತಾಂಶ ದಾಖ ಲಿಸಿವೆ. ಮೊದಲ ಪಂದ್ಯದಲ್ಲಿ 4ಕ್ಕೆ 204 ರನ್‌ ಪೇರಿಸಿದ ಆರ್‌ಸಿಬಿ 38 ರನ್ನುಗಳಿಂದ ಗೆದ್ದು ಬಂದಿತ್ತು. ಆದರೆ ಯುಎಇ ಆವೃತ್ತಿಯಲ್ಲಿ 92 ರನ್ನಿಗೆ ಕುಸಿದು ಕೆಕೆಆರ್‌ಗೆ 9 ವಿಕೆಟ್‌ಗಳಿಂದ ಶರಣಾಗಿತ್ತು. ಎಲಿಮಿನೇಟರ್‌ನಲ್ಲಿ ಇತ್ತಂಡಗಳಿಗೆ ಗೆಲುವೊಂದೇ ಮೂಲ ಮಂತ್ರವಾಗಬೇಕಿದೆ.

ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
ಈವರೆಗೆ ಒಮ್ಮೆಯೂ ಚಾಂಪಿಯನ್‌ ಆಗದ ಆರ್‌ಸಿಬಿ ಕೊನೆಯ ಸಲ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡುತ್ತಿದೆ. ಈ ಕೂಟದ ಬಳಿಕ ಅವರು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ. ಅವರಿಗೆ ಚೊಚ್ಚಲ ಟ್ರೋಫಿಯೊಂದಿಗೆ ಗೌರವಪೂರ್ಣ ವಿದಾಯ ಲಭಿಸೀತೇ ಎಂಬುದೊಂದು ನಿರೀಕ್ಷೆ. ಇಂಥದೊಂದು ವಿದಾಯ ಸಿಗಬೇಕಾದರೆ ಆರ್‌ಸಿಬಿ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದುದು ಅನಿವಾರ್ಯ.

ಡೆಲ್ಲಿ ಎದುರಿನ ಅಂತಿಮ ಲೀಗ್‌ ಪಂದ್ಯವನ್ನು ಅಂತಿಮ ಎಸೆತದಲ್ಲಿ ಗೆಲ್ಲುವ ಮೂಲಕ ಆರ್‌ಸಿಬಿ ಪಾಳೆಯದಲ್ಲಿ ಹೊಸ ಆತ್ಮವಿಶ್ವಾಸ ಮೂಡಿದೆ. ತಂಡದ ಬ್ಯಾಟಿಂಗ್‌ ಲೈನ್‌ಅಪ್‌ ಹೆಚ್ಚು ಬಲಿಷ್ಠ. ಕೊಹ್ಲಿ, ಪಡಿಕ್ಕಲ್‌, ಕ್ರಿಸ್ಟಿಯನ್‌, ಭರತ್‌, ಮ್ಯಾಕ್ಸ್‌ವೆಲ್‌, ಎಬಿಡಿ ಇಲ್ಲಿನ ಕಟ್ಟಾಳುಗಳು. ಇವರಲ್ಲಿ ಎಬಿಡಿ ಅವರ ಹಿಂದಿನ ಗೇಮ್‌ ಮಾಯವಾದರೂ ಆರ್‌ಸಿಬಿಗೆ ಆತಂಕವೇನೂ ಇಲ್ಲ. ಈ ಕೊರತೆಯನ್ನು ಮ್ಯಾಕ್ಸ್‌ವೆಲ್‌ ತುಂಬುತ್ತಿದ್ದಾರೆ. ಸತತವಾಗಿ ಅರ್ಧ ಶತಕ ಬಾರಿಸುತ್ತಲೇ ಇರುವ “ಮ್ಯಾಕ್ಸಿ’ಯ ಪವರ್‌ ಹಿಟ್‌ ಬ್ಯಾಟಿಂಗ್‌ನಲ್ಲಿ ಈಗಾಗಲೇ 498 ರನ್‌ ಹರಿದು ಬಂದಿದೆ.

ಇದನ್ನೂ ಓದಿ:ಟಿ20; ಆಸ್ಟ್ರೇಲಿಯ ವನಿತೆಯರಿಗೆ 2-0 ಸರಣಿ

Advertisement

ಆರ್‌ಸಿಬಿ ಬೌಲಿಂಗಿಗೆ ಹರ್ಷಲ್‌ ಪಟೇಲ್‌ ಹೊಸ ಶಕ್ತಿ ತುಂಬಿದ್ದಾರೆ. 14 ಪಂದ್ಯಗಳಿಂದ 30 ವಿಕೆಟ್‌ ಉಡಾಯಿಸಿ ಪರ್ಪಲ್‌ ಕ್ಯಾಪ್‌ ಏರಿಸಿಕೊಂಡಿದ್ದಾರೆ. ಇದರಲ್ಲಿ ಮುಂಬೈ ವಿರುದ್ಧ ಸಾಧಿಸಿದ ಹ್ಯಾಟ್ರಿಕ್‌ ಕೂಡ ಸೇರಿದೆ. ಸಿರಾಜ್‌, ಚಹಲ್‌, ಗಾರ್ಟನ್‌ ಉಳಿದ ಪ್ರಮುಖ ಬೌಲರ್.

ಕೆಕೆಆರ್‌ಗೆ ಭಾರತೀಯರ ಬಲ
2012 ಮತ್ತು 2014ರ ಚಾಂಪಿಯನ್‌ ತಂಡವಾದ ಕೆಕೆಆರ್‌ನ ಗತ ವೈಭವವನ್ನು ಮರಳಿ ಸ್ಥಾಪಿಸುವಲ್ಲಿ ನಾಯಕ ಇಯಾನ್‌ ಮಾರ್ಗನ್‌ ಸಾಮಾನ್ಯ ಮಟ್ಟದ ಯಶಸ್ಸು ಸಾಧಿಸಿದ್ದಾರೆ. ವಿಪರ್ಯಾಸವೆಂದರೆ, ಸ್ವತಃ ಮಾರ್ಗನ್‌ ಅವರ ಬ್ಯಾಟ್‌ ಮುಷ್ಕರ ಹೂಡಿರುವುದು!

ಕೆಕೆಆರ್‌ ಬ್ಯಾಟಿಂಗ್‌ ಲೈನ್‌ಅಪ್‌ ಭಾರತೀಯ ಆಟಗಾರರಿಂದಲೇ ಬಲಿಷ್ಠಗೊಂಡಿದೆ. ಈ ಐಪಿಎಲ್‌ನ ನೂತನ ಸ್ಟಾರ್‌ ವೆಂಕಟೇಶ್‌ ಅಯ್ಯರ್‌, ಶುಭಮನ್‌ ಗಿಲ್‌, ನಿತೀಶ್‌ ರಾಣಾ, ರಾಹುಲ್‌ ತ್ರಿಪಾಠಿ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಲ್‌ರೌಂಡರ್‌ ಸ್ಥಾನವನ್ನು ಶಕಿಬ್‌, ರಸೆಲ್‌ ತುಂಬಲಿದ್ದಾರೆ.
ಕೋಲ್ಕತಾದ ಬೌಲಿಂಗ್‌ ಕೂಡ ವೈವಿಧ್ಯಮಯ. ಸೌಥಿ, ಮಾವಿ, ಚಕ್ರವರ್ತಿ, ಸುನೀಲ್‌ ನಾರಾಯಣ್‌, ಫ‌ರ್ಗ್ಯುಸನ್‌ ಅವರೆಲ್ಲ ಘಾತಕವಾಗಿ ಪರಿಣಮಿಸಲಬಲ್ಲರು.

ಇಂದಿನ ಪಂದ್ಯ
ಆರ್‌ಸಿಬಿ vs ಕೆಕೆಆರ್‌
ಸ್ಥಳ: ಶಾರ್ಜಾ, ಆರಂಭ: 7.30,
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next