Advertisement

ಐಪಿಎಲ್‌-2020 ದಿನಾಂಕ; ಫ್ರಾಂಚೈಸಿಗಳಿಗೆ ಚಿಂತೆ

10:15 AM Dec 23, 2019 | Sriram |

ಹೊಸದಿಲ್ಲಿ: 2020ರ ಐಪಿಎಲ್‌ ಪಂದ್ಯಾವಳಿಯ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಆದರೆ ಮೂಲವೊಂದರ ಪ್ರಕಾರ ಇದು ಮಾರ್ಚ್‌ 28ರಿಂದ ಆರಂಭವಾಗಿ ಮೇ 24ರ ತನಕ ನಡೆಯಲಿದೆ.

Advertisement

ಆದರೆ ಈ ಸಮಯದಲ್ಲೇ ಐಪಿಎಲ್‌ ಹಣಾಹಣಿ ಮೊದಲ್ಗೊಂಡರೆ ಭಾರೀ ಹೊಡೆತ ಎದುರಾಗಲಿದೆ ಎಂಬುದು ಫ್ರಾಂಚೈಸಿಗಳ ಚಿಂತೆಗೆ ಕಾರಣವಾಗಿದೆ. ಕಾರಣ, ವಿವಿಧ ಫ್ರಾಂಚೈಸಿಗಳಿಗೆ ಆಯ್ಕೆಯಾಗಿರುವ ಬಹುತೇಕ ವಿದೇಶಿ ಕ್ರಿಕೆಟಿಗರು ಈ ಸಮಯದಲ್ಲಿ ಬೇರೆ ಬೇರೆ ಅಂತಾರಾಷ್ಟ್ರೀಯ ಸರಣಿಗಳಲ್ಲಿ ವ್ಯಸ್ತರಾಗಿರುತ್ತಾರೆ. ಇದನ್ನು ಮುಗಿಸಿಯೇ ಅವರು ಐಪಿಎಲ್‌ಗೆ ಹೊರಡಬೇಕಾಗುತ್ತದೆ.

ವಿಳಂಬ ಆರಂಭದಿಂದ ಅನುಕೂಲ
ಮಾರ್ಚ್‌ ಅಂತ್ಯದಲ್ಲಿ ಆಸ್ಟ್ರೇಲಿಯ- ನ್ಯೂಜಿಲ್ಯಾಂಡ್‌ ಟಿ20 ಸರಣಿ ಜಾರಿಯಲ್ಲಿರುತ್ತದೆ. ಇಂಗ್ಲೆಂಡ್‌-ಶ್ರೀಲಂಕಾ ನಡುವೆ ಟೆಸ್ಟ್‌ ಸರಣಿ ನಡೆಯುತ್ತಿರುತ್ತದೆ. ಹೀಗಾಗಿ ಕೆಲವು ತಾರಾ ಆಟಗಾರರು ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎಪ್ರಿಲ್‌ ಒಂದರ ವೇಳೆ ಐಪಿಎಲ್‌ ಆರಂಭವಾದರೆ ಅನುಕೂಲ ಎಂಬುದು ಅನೇಕ ಫ್ರಾಂಚೈಸಿ ಮಾಲಕರ ಅಭಿಪ್ರಾಯ.

“ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವಿನ ಕೊನೆಯ ಟಿ20 ಪಂದ್ಯ ಮುಗಿಯುವುದು ಮಾ. 29ಕ್ಕೆ. ಹಾಗೆಯೇ ಇಂಗ್ಲೆಂಡ್‌-ಶ್ರೀಲಂಕಾ ಸರಣಿ ಅಂತ್ಯವಾಗುವುದು ಮಾ. 31ಕ್ಕೆ. ಹೀಗಾಗಿ ಎಪ್ರಿಲ್‌ ಒಂದರಿಂದ ಐಪಿಎಲ್‌ ಆರಂಭವಾದರೆ ಅನುಕೂಲ. ಐಪಿಎಲ್‌ ಆಡಳಿತ ಮಂಡಳಿ ಇದನ್ನು ಪರಿಗಣಿಸುವ ವಿಶ್ವಾಸವಿದೆ’ ಎಂದು ಫ್ರಾಂಚೈಸಿಯೊಂದರ ಅಧಿಕಾರಿ ಹೇಳಿದ್ದಾರೆ.

ಐಪಿಎಲ್‌ ಹರಾಜು: ಅನ್‌ಸೋಲ್ಡ್‌ ಇಲೆವೆನ್‌!
ಐಪಿಎಲ್‌ ಹರಾಜು ಪ್ರಕ್ರಿಯೆ ಈಗಾಗಲೇ ಮುಗಿದಿದೆ. ವಿದೇಶಿಗರ ಹಾಗೂ ಭಾರತದ ಯುವ ಕ್ರಿಕೆಟಿಗರತ್ತ ಫ್ರಾಂಚೈಸಿಗಳು ಒಲವು ತೋರಿದ್ದು ಈ ಬಾರಿಯ ವಿಶೇಷ.

Advertisement

ಹಾಗೆಯೇ ಸ್ಟಾರ್‌ ಕ್ರಿಕೆಟಿಗರನೇಕರು ಮಾರಾಟವಾಗದೇ ಉಳಿಯುವ ಮೂಲಕವೂ ಈ ಸಲದ ಐಪಿಎಲ್‌ ಹರಾಜು ಸುದ್ದಿಯಾಗಿದೆ. ಅಮೋಘ ಫಾರ್ಮ್ನಲ್ಲಿರುವ ವೆಸ್ಟ್‌ ಇಂಡೀಸ್‌ ಆರಂಭಕಾರ ಶೈ ಹೋಪ್‌, ಎವಿನ್‌ ಲೆವಿಸ್‌, ಸ್ಫೋಟಕ ಆಲ್‌ರೌಂಡರ್‌ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ನಮ್ಮದೇ ದೇಶದ ಯೂಸುಫ್ ಪಠಾಣ್‌ ಮೊದಲಾದವರನ್ನೆಲ್ಲ ಯಾರೂ ಕೊಳ್ಳಲಿಲ್ಲ!

ಇಂಥ 11 ಮಂದಿ ಆಟಗಾರರ “ಅನ್‌ಸೋಲ್ಡ್‌ ಇಲೆವೆನ್‌’ ಒಂದು ಪ್ರಕಟಗೊಂಡಿದೆ. ಮುಂದೆ ನಡುವಲ್ಲಿ ಐಪಿಎಲ್‌ನಿಂದ ಹೊರಹೋಗುವವರ ಸ್ಥಾನಕ್ಕೆ ಇವರು ಬರಬಹುದಾದರೂ ಸದ್ಯದ ಮಟ್ಟಿಗೆ ಇವರು ಮಾರಾಟವಾಗದೇ ಉಳಿದದ್ದೇ ಒಂದು ಅಚ್ಚರಿ.

ಅನ್‌ಸೋಲ್ಡ್‌ ಇಲೆವೆನ್‌: ಮಾರ್ಟಿನ್‌ ಗಪ್ಟಿಲ್‌, ಎವಿನ್‌ ಲೆವಿಸ್‌, ಅಲೆಕ್ಸ್‌ ಹೇಲ್ಸ್‌, ಕಾಲಿನ್‌ ಇನ್‌ಗಾÅಮ್‌, ಶೈ ಹೋಪ್‌, ಬೆನ್‌ ಕಟಿಂಗ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಆ್ಯಡಂ ಝಂಪ, ಟಿಮ್‌ ಸೌಥಿ, ನೂರ್‌ ಅಹ್ಮದ್‌, ಅಲ್ಜಾರಿ ಜೋಸೆಫ್.

Advertisement

Udayavani is now on Telegram. Click here to join our channel and stay updated with the latest news.

Next