ದುಬಾೖ: ಹೈದರಾಬಾದ್ ತಂಡದ ಬಿಗಿ ದಾಳಿಯನ್ನು ನಿಭಾಯಿಸುವಲ್ಲಿ ವಿಫಲವಾದ ಚೆನ್ನೈ ಶುಕ್ರವಾರದ ಐಪಿಎಲ್ ಮುಖಾಮುಖಿಯಲ್ಲಿ 7 ರನ್ ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದು ಕೊಂಡ ವಾರ್ನರ್ ಬಳಗ ನಿಗದಿತ 20 ಓವರ್ ಗೆ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಈ ಸವಾಲಿನ ಮೊತ್ತ ಬೆನ್ನತ್ತಿದ ಧೋನಿ ಬಳಗ 5 ವಿಕೆಟ್ ಕಳೆದುಕೊಂಡು 157 ರನ್ ಕಲೆ ಹಾಕಿ 7 ರನ್ ಗಳಿಂದ ಸೋಲೊಪ್ಪಿಕೊಂಡಿದೆ.
ಫಾಫ್ ಡು ಪ್ಲೆಸಿಸ್ (22) ಶೇನ್ ವ್ಯಾಟ್ಸನ್ (1), ಅಂಬಾಟಿ ರಾಯುಡು (8), ಕೇದಾರ್ ಜಾಧವ್ (3) ರನ್ ಗೆ ವಿಕೆಟ್ ಒಪ್ಪಿಸಿ ಹೈದರಾಬಾದ್ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು. ನಾಯಕ ಧೋನಿ ಹಾಗೂ ರವೀಂದ್ರ ಜಡೇಜಾ ತಂಡದ ಗೆಲುವಿಗೆ ಹೋರಾಟ ನಡೆಸಿದರಾದರೂ ಯಾವುದೇ ಫಲ ನೀಡಲಿಲ್ಲ. ಜಡೇಜಾ (50) ವಿಕೆಟ್ ನೀಡಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಹೋರಾಟ ನಡೆಸಿದ ಧೋನಿ (47), ಸ್ಯಾಮ್ ಕರ್ರನ್(15) ರನ್ ಗಳಿಸಲಷ್ಟೇ ಶಕ್ತರಾದರು.
ಪ್ರಾರಂಭದಿಂದಲೇ ಚೆನ್ನೈ ದಾಂಢಿಗರನ್ನು ಕಟ್ಟಿಹಾಕುವಲ್ಲಿ ಸಫಲರಾದ ಹೈದರಾಬಾದ್ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸುತ್ತಾ ಹೋದರು. ಇದರಿಂದ ಒತ್ತಡಕ್ಕೆ ಸಿಲುಕಿದ ಚೆನ್ನೈ 157 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು.