ದುಬಾೖ: ಸ್ಟಾರ್ ಆಟಗಾರರನ್ನು ಹೊಂದಿಯೂ ಈವರೆಗೆ ಐಪಿಎಲ್ ಚಾಂಪಿಯನ್ ಪಟ್ಟವೇರದ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಸೋಮವಾರ ಮತ್ತೂಂದು ಸುತ್ತಿನ ಕನಸು ಹೆಣೆದುಕೊಂಡು ಆಖಾಡಕ್ಕೆ ಇಳಿಯಲಿದೆ.
ದುಬಾೖಯಲ್ಲಿ ನಡೆಯುವ ಮುಖಾಮುಖಿಯಲ್ಲಿ ಡೇವಿಡ್ ವಾರ್ನರ್ ಸಾರಥ್ಯದ ಬಲಿಷ್ಠ ಸನ್‌ರೈಸರ್ ಹೈದರಾಬಾದ್ ಸವಾಲನ್ನು ಎದುರಿಸಲಿದೆ.
ಎರಡೂ ತಂಡಗಳು ಅಪಾಯಕಾರಿ ಹಾಗೂ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿವೆ. ಏಕಾಂಗಿಯಾಗಿ ಪಂದ್ಯವನ್ನು ತಮ್ಮತ್ತ ಸೆಳೆಯುವ ಆಟಗಾರರು ಎರಡೂ ತಂಡಗಳಲ್ಲಿದ್ದಾರೆ ಹೀಗಾಗಿ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.
ಆಸ್ಟ್ರೇಲಿಯನ್ನರ ನಂಟು
ಎರಡೂ ತಂಡಗಳ ಆಸ್ಟ್ರೇಲಿಯದ ನಂಟು ಬಲವಾದುದು. ಆರಂಭಿಕರ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯದ ಸಾಂಪ್ರದಾಯಿಕ ಜೋಡಿಯೊಂದು ಇಲ್ಲಿ ಪರಸ್ಪರ ಎದುರಾಗುವುದೊಂದು ವಿಶೇಷ. ವಾರ್ನರ್ ಹೈದರಾಬಾದ್ ತಂಡದಲ್ಲಿದ್ದರೆ, ಅವರ ಜತೆಗಾರ ಆರನ್ ಫಿಂಚ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ.
Related Articles
ಫಿಂಚ್ ಉತ್ತಮ ಫಾರ್ಮ್ ಕೂಡ ಹೊಂದಿದ್ದಾರೆ. ವಾರ್ನರ್‌ಗೆ ಫಾರ್ಮ್ ಮುಖ್ಯವಲ್ಲ. ಅದು ಯಾವುದೇ ಕ್ಷಣದಲ್ಲಿ ಒಲಿಯಬಲ್ಲದು. ಈವರೆಗೆ 3 ಸಲ ಆರೆಂಜ್ ಕ್ಯಾಪ್ ಏರಿಸಿಕೊಂಡು, 2016ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ ಅನುಭವ ವಾರ್ನರ್ ಅವರದು. ಆದರೆ ವಿರಾಟ್ ಕೊಹ್ಲಿ ಈ ವಿಷಯದಲ್ಲಿ ಅನ್ ಲಕ್ಕಿ!
ಎಲ್ಲರೂ ಸೇರಿ ಮೇಲೆತ್ತಬೇಕಿದೆ
2019ರಲ್ಲಿ ಕಟ್ಟಕಡೆಯ ಸ್ಥಾನಕ್ಕೆ ಕುಸಿದಿದ್ದ ಆರ್‌ಸಿಬಿಯನ್ನು ಮತ್ತೆ ಮೇಲೆತ್ತಿ ನಿಲ್ಲಿಸುವ ಜವಾಬ್ದಾರಿ ಕೇವಲ ಕ್ಯಾಪ್ಟನ್ ಕೊಹ್ಲಿಗಷ್ಟೇ ಸೀಮಿತವಲ್ಲ, ಅದು ತಂಡದ ಎಲ್ಲ ಸದಸ್ಯರ ಮೇಲೂ ಇದೆ. ಆರ್‌ಸಿಬಿ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಭೀತಿ ಹುಟ್ಟಿಸುತ್ತ ಬಂದ ತಂಡ. ಈ ಸಲ ಫಿಂಚ್ ಹಾಗೂ ಮಾರಿಸ್ ಸೇರ್ಪಡೆ ಯಿಂದ ಇನ್ನಷ್ಟು ಶಕ್ತಿಶಾಲಿಯಾಗಿದೆ. ಫಿಂಚ್ ಜತೆ ಪಾರ್ಥಿವ್ ಪಟೇಲ್ ಅಥವಾ ದೇವದತ್ತ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಬಹುದು. ಸ್ವತಃ ಕೊಹ್ಲಿಯೇ ಆರಂಭಿಕನಾಗಿ ಬಂದರೆ ಅಚ್ಚರಿಪಡಬೇಕಿಲ್ಲ.