Advertisement

ಎಂಟನೇ ಜಯದ ಕಾತರದಲ್ಲಿ ಆರ್‌ಸಿಬಿ, ಮುಂಬೈ

06:07 PM Oct 27, 2020 | mahesh |

ಅಬುಧಾಬಿ: ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳಲು ಇನ್ನೊಂದು ಗೆಲುವಿನ ಅಗತ್ಯ ಎದುರಿಸುತ್ತಿರುವ ಮುಂಬೈ ಮತ್ತು ಆರ್‌ಸಿಬಿ ತಂಡಗಳು ಬುಧವಾರ ಮುಖಾಮುಖಿ ಆಗಲಿವೆ. ಈಗಾಗಲೇ ಎರಡೂ ತಂಡಗಳಿಗೆ ಮುಂದಿನ ಸುತ್ತಿನ ಬಾಗಿಲು ತೆರೆದಿದೆಯಾದರೂ ಇದು ಅಧಿಕೃತಗೊಳ್ಳಲು ಇನ್ನೊಂದು ಜಯ ಬೇಕಿದೆ. ಮೊದಲು ಪ್ರವೇಶಿಸುವ ಅದೃಷ್ಟ ಯಾರಿಗಿದೆ ಎಂಬುದು ಇಲ್ಲಿನ ಕುತೂಹಲ.

Advertisement

ನಾನಾ ಲೆಕ್ಕಾಚಾರಗಳು…
ಐಪಿಎಲ್‌ ಲೀಗ್‌ ಸ್ಪರ್ಧೆ ಅಂತಿಮ ಹಂತಕ್ಕೆ ಬಂದಿರುವಂತೆಯೇ ನಾನಾ ಲೆಕ್ಕಾಚಾರಗಳು, ಸಾಧ್ಯತೆಗಳನ್ನೆಲ್ಲ ತೆರೆದಿಡುವ ಪ್ರಯತ್ನ ಸಾಗುತ್ತಿರುವುದು ಗೋಚರಿಸುತ್ತಿದೆ. ಅಂತಿಮ ಲೀಗ್‌ ಪಂದ್ಯದ ತನಕ, ಮುಂದಿನ ಸುತ್ತಿಗೇರುವ 4ನೇ ತಂಡ ಯಾವುದೆಂಬ ಕುತೂಹಲ ಕಾಯ್ದುಕೊಳ್ಳುವ ರೀತಿಯಲ್ಲಿ ಸ್ಪರ್ಧೆಗಳು ಸಾಗುತ್ತಿವೆ. ಇದಕ್ಕೆ ತಕ್ಕ ಫಲಿತಾಂಶಗಳೇ ಬರುತ್ತಿವೆ. ಅರ್ಥಾತ್‌, ಅಂಕಪಟ್ಟಿಯ ತಳದಲ್ಲಿರುವ ತಂಡಗಳು ಟಾಪ್‌ ತಂಡಗಳನ್ನು ಮಣಿಸುವ ಕೆಲಸದಲ್ಲಿ ತೊಡಗಿವೆ. ಆದರೆ ಆರ್‌ಸಿಬಿ-ಮುಂಬೈ ನಡುವಿನ ಮುಖಾಮುಖೀಯಲ್ಲಿ ಹೀಗಾಗುವ ಯಾವುದೇ ಸಾಧ್ಯತೆ ಇಲ್ಲ. ಇವೆರಡೂ ಟಾಪ್‌-ಮೂರರ ತಂಡಗಳು. ಯಾರು ಮೊದಲು ಮುಂದಿನ ಸುತ್ತು ತಲಪಬಹುದೆಂಬುದಷ್ಟೇ ಇತ್ಯರ್ಥವಾಗಬೇಕಿರುವ ಸಂಗತಿ.

ಸೇಡು ತೀರಿಸೀತೇ ಮುಂಬೈ?
ಆರ್‌ಸಿಬಿ ಮತ್ತು ಮುಂಬೈ 7 ಜಯದೊಂದಿಗೆ 14 ಅಂಕ ಹೊಂದಿವೆ. ಈ ಋತುವಿನ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ ಸೂಪರ್‌ ಓವರ್‌ನಲ್ಲಿ ಗೆಲುವು ದಾಖಲಿಸಿತ್ತು. ಮುಂಬೈ ಇದಕ್ಕೆ ಸೇಡು ತೀರಿಸಿಕೊಂಡೀತೇ ಎಂಬುದೊಂದು ಪ್ರಶ್ನೆ ಹಾಗೂ ನಿರೀಕ್ಷೆ.
ಸ್ನಾಯು ಸೆಳೆತದಿಂದ ಕಳೆದೆರಡು ಪಂದ್ಯದಲ್ಲಿ ಆಡದಿದ್ದ ಮುಂಬೈ ನಾಯಕ ರೋಹಿತ್‌ ಶರ್ಮ ಈ ಪಂದ್ಯದಲ್ಲೂ ಆಡುವುದು ಅನುಮಾನ. ಹೀಗಾಗಿ ಪೊಲಾರ್ಡ್‌ ಅವರೇ ಸತತ 3ನೇ ಪಂದ್ಯದಲ್ಲಿ ಮುಂಬೈಯನ್ನು ಮುನ್ನಡೆಸಬೇಕಾಗುತ್ತದೆ.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗದಲ್ಲಿ ಮುಂಬೈ ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಎಲ್ಲ ಕ್ರಮಾಂಕದಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲ ಬ್ಯಾಟ್ಸ್‌ಮನ್‌ಗಳೇ ತುಂಬಿದ್ದಾರೆ. ಕ್ವಿಂಟನ್‌ ಡಿ ಕಾಕ್‌ (374 ರನ್‌), ಇಶಾನ್‌ ಕಿಶನ್‌ (298 ರನ್‌) ತಂಡಕ್ಕೆ ಉತ್ತಮ ಆರಂಭ ನೀಡಿದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ (283 ರನ್‌), ಪಾಂಡ್ಯ ಬ್ರದರ್ಸ್‌ ಮತ್ತು ಕೈರನ್‌ ಪೊಲಾರ್ಡ್‌ (214 ನ್‌) ಸಿಡಿದು ನಿಂತು ತಂಡದ ಮೊತ್ತವನ್ನು 200ರ ಸನಿಹಕ್ಕೆ ತಲುಪಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ.

ಬೌಲಿಂಗ್‌ ಕೂಡ ಹೆಚ್ಚು ಘಾತಕವಾಗಿದೆ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ, ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್ ಮತ್ತು ಪ್ಯಾಟಿನ್ಸನ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲರಾದರೂ ರಾಜಸ್ಥಾನ್‌ ಎದುರಿನ ಕಳೆದ ಪಂದ್ಯದಲ್ಲಿ ಏನಾಯಿತೆಂಬುದು ಎಲ್ಲರಿಗೂ ತಿಳಿದೇ ಇದೆ. 196 ರನ್ನುಗಳ ಗುರಿಯನ್ನು ರಾಜಸ್ಥಾನ್‌ ಎರಡೇ ವಿಕೆಟ್‌ ನಷ್ಟದಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತ್ತು. ಸ್ಟೋಕ್ಸ್‌ ಸೆಂಚುರಿ ಸ್ಟ್ರೋಕ್‌ ಮೂಲಕ ಮುಂಬೈಗೆ ಆಘಾತವಿಕ್ಕಿದ್ದರು.

Advertisement

ಕೊಹ್ಲಿ, ಎಬಿಡಿ ಬೆನ್ನೆಲುಬು
ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್‌ ಕೊಹ್ಲಿ (415 ರನ್‌) ಮತ್ತು ಎಬಿ ಡಿ ವಿಲಿಯರ್ (324 ರನ್‌) ಅವರೇ ಬೆನ್ನೆಲುಬಾಗಿದ್ದಾರೆ. ಆಸೀಸ್‌ ಹಿಟ್ಟರ್‌ ಆರನ್‌ ಫಿಂಚ್‌ (236 ರನ್‌) ಮತ್ತು ದೇವದತ್‌ ಪಡಿಕ್ಕಲ್‌ (343 ರನ್‌) ಹೆಚ್ಚು ಕಾಲ ಕ್ರೀಸ್‌ ಆಕ್ರಮಿಸಿಕೊಳ್ಳುವ ಅನಿವಾರ್ಯತೆ ಎಂದಿಗಿಂತ ಹೆಚ್ಚೇ ಇದೆ. ತಂಡದ ಕೆಳ ಹಂತದ ಬ್ಯಾಟಿಂಗ್‌ ನಂಬಲರ್ಹವಲ್ಲ. ಆರ್‌ಸಿಬಿ ಬೌಲಿಂಗ್‌ ಈ ಬಾರಿ ಹೆಚ್ಚು ಘಾತಕವಾಗಿ ಮೂಡಿಬಂದಿದೆ. ಮಾರಿಸ್‌, ಸಿರಾಜ್‌, ಉದಾನ, ಚಹಲ್‌ ಉತ್ತಮ ಲಯದಲ್ಲಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಗಾಯಾಳಾ ಸೈನಿ ಆಡುವುದು ಅನುಮಾನ.

Advertisement

Udayavani is now on Telegram. Click here to join our channel and stay updated with the latest news.

Next