Advertisement

ಡೆಲ್ಲಿಯೋ? ಆರ್‌ಸಿಬಿಯೋ? ಗೆದ್ದವರಿಗೆ ಪ್ಲೇ ಆಫ್ ಟಿಕೆಟ್‌

11:51 PM Nov 01, 2020 | mahesh |

ಅಬುಧಾಬಿ: ಯಾವತ್ತೋ ಟಾಪ್‌-4 ಯಾದಿಗೆ ಲಗ್ಗೆ ಇರಿಸಿದ್ದ ಆರ್‌ಸಿಬಿ ಮತ್ತು ಡೆಲ್ಲಿಗೆ ಇನ್ನೂ ಈ ಸ್ಥಾನಕ್ಕೆ ಸಿಮೆಂಟ್‌ ಹಾಕಲು ಸಾಧ್ಯವಾಗದಿರುವುದು ಈ ಐಪಿಎಲ್‌ನ ವೈಚಿತ್ರ್ಯಕ್ಕೆ ಸಾಕ್ಷಿ. ತಲಾ 14 ಅಂಕ ಹೊಂದಿರುವ ಈ ತಂಡಗಳು ಸೋಮವಾರ ಕೊನೆಯ ಪಂದ್ಯವನ್ನು ಆಡಲಿವೆ. ಗೆದ್ದ ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗುವಲ್ಲಿ ಯಶಸ್ವಿಯಾಗುತ್ತದೆ. ಪರಾಜಿತ ತಂಡದ ಅಂಕ 14ರಲ್ಲೇ ಉಳಿಯುವುದರಿಂದ ರನ್‌ರೇಟ್‌ ನಿರ್ಣಾಯಕವಾಗಿ ಪರಿಣಮಿಸಲಿದೆ.

Advertisement

ಈ ವರೆಗೆ ಐಪಿಎಲ್‌ ಪ್ರಶಸ್ತಿ ಜಯಿಸದ ಡೆಲ್ಲಿ ಮತ್ತು ಆರ್‌ಸಿಬಿ ತಂಡಗಳೆರಡೂ ಮೇಲ್ನೋಟಕ್ಕೆ ಬಲಿಷ್ಠವಾಗಿವೆ. ಆದರೆ ಅಸ್ಥಿರ ಪ್ರದರ್ಶನವೇ ಇತ್ತಂಡಗಳಿಗೆ ಮುಳುವಾಗಿದೆ. ಹೀಗಾಗಿ ಭವಿಷ್ಯ ನುಡಿಯುವುದು ಕಷ್ಟ. ಹಾಗೆಯೇ ಯಾರು ಮೇಲೆ ಬಂದರೆ ಹೆಚ್ಚಿನ ಲಾಭವಿದೆ ಎಂಬ ಲೆಕ್ಕಾಚಾರವೂ ಇಲ್ಲಿ ಕೆಲಸ ಮಾಡಬಹುದು!

ಮಧ್ಯಮ ಕ್ರಮಾಂಕ ದುರ್ಬಲ
ಆರ್‌ಸಿಬಿಯ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ. ಪಡಿಕ್ಕಲ್‌ ಈ ಸರಣಿಯ ಹೀರೋ ಆಗಿದ್ದಾರೆ. ಇವರ ಜತೆಗಾರನಾಗಿ ಮತ್ತೆ ಫಿಂಚ್‌ ಕಣಕ್ಕಿಳಿಯಬಹುದು. ಆದರೆ ಮಿಡ್ಲ್ ಆರ್ಡರ್‌ ಗಟ್ಟಿ ಇಲ್ಲ. ನಾಯಕ ಕೊಹ್ಲಿ, ಎಬಿಡಿ ಈ ಪಂದ್ಯದಲ್ಲಿ ಸಿಡಿಯಲೇ ಬೇಕಿದೆ. ಇವರಿಬ್ಬರ ನಿರ್ಗಮನದ ಬಳಿಕ ಇನ್ನಿಂಗ್ಸ್‌ ಬೆಳೆಸಬಲ್ಲ ಆಟಗಾರರಿಲ್ಲ. ಗುರುಕೀರತ್‌ ಬದಲು ಪಾರ್ಥಿವ್‌ ಪಟೇಲ್‌ ಮೊದಲ ಅವಕಾಶ ಪಡೆದರೆ ಅಚ್ಚರಿ ಇಲ್ಲ. ಆರ್‌ಸಿಬಿ ಬೌಲಿಂಗ್‌ ಡೆಲ್ಲಿ ತಂಡದಷ್ಟು ಬಲಿಷ್ಠವಾಗಿಲ್ಲ ಎಂಬುದನ್ನು ಒಪ್ಪಲೇಬೇಕು.

ಡೆಲ್ಲಿಗೆ ಬ್ಯಾಟಿಂಗ್‌ ಚಿಂತೆ
ಆರಂಭದಲ್ಲಿ ಡೆಲ್ಲಿ ತೋರಿದ ಪ್ರದರ್ಶನ ಕಂಡಾಗ ಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿ ಗೋಚರಿಸಿತ್ತು. ಆದರೆ ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ ಆಫ್ಗೆ ತೇರ್ಗಡೆಯಾಗುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದೆ. ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಧವನ್‌, ನಾಯಕ ಅಯ್ಯರ್‌, ಮಾರ್ಕಸ್‌ ಸ್ಟೋಯಿನಿಸ್‌ ಈಗ ತೀವ್ರ ರನ್‌ ಬರಗಾಲದಲ್ಲಿದ್ದಾರೆ. ವಿಂಡೀಸ್‌ ಹಿಟ್ಟರ್‌ ಹೆಟ್‌ಮೈರ್‌, ಪಂತ್‌, ಪೃಥ್ವಿ ಶಾ ಇದುವರೆಗೆ ಒಂದೇ ಒಂದು “ಹಿಟ್‌ ಶೋ’ ನೀಡಿಲ್ಲ. ಇವರೆಲ್ಲ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದರಷ್ಟೇ ತಂಡಕ್ಕೆ ಲಾಭ. ಬೌಲಿಂಗ್‌ ವಿಭಾಗ ರಬಾಡ, ನೋರ್ಜೆ ಮತ್ತು ಆರ್‌. ಅಶ್ವಿ‌ನ್‌ ಅವರನ್ನು ಅವಲಂಬಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next