Advertisement

ರೋಹಿತ್ ಶರ್ಮಾ ಕ್ಯಾಪ್ಟನ್ ನಾಕ್ ; ನೈಟ್ ರೈಡರ್ಸ್ ಗೆಲುವಿಗೆ 196 ರನ್ ಗುರಿ

10:10 PM Sep 23, 2020 | Hari Prasad |

ಅಬುಧಾಬಿ: ಐಪಿಎಲ್ ನ ಎರಡು ದೈತ್ಯ ತಂಡಗಳ ಮುಖಾಮುಖಿಯಲ್ಲಿ ಪ್ರಥಮ ಇನ್ನಿಂಗ್ಸ್ ಮುಗಿದುಹೋಗಿದೆ.

Advertisement

ಮುಂಬಯಿ ಇಂಡಿಯನ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಅಬು ಧಾಬಿಯಲ್ಲಿ ನಡೆಯುತ್ತಿರುವ ಟಿ20 ಲೀಗ್ ನಲ್ಲಿ ಟಾಸ್ ಗೆದ್ದ ನೈಟ್ ರೈಡರ್ಸ್ ನಾಯಕ ದಿನೇಶ್ ಕಾರ್ತಿಕ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮುಂಬೈ ಇಂಡಿಯನ್ಸ್ ಕಪ್ತಾನ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಸಮಯೋಚಿತ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳೆದುಕೊಂಡು 195 ರನ್ ಗಳನ್ನು ಕಲೆಹಾಕಿದೆ. ಆ ಮೂಲಕ ಕೊಲ್ಕೊತ್ತಾ ಗೆಲುವಿಗೆ 196 ರನ್ ಗಳ ಗುರಿಯನ್ನು ನಿಗದಿಪಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್ ಅನ್ನು ಕಪ್ತಾನ ರೋಹಿತ್ ಶರ್ಮಾ (80) ಹಾಗೂ ವಿಕೆಟ್ ಕೀಪರ್ ಕ್ವಿಂಟೆನ್ ಡಿ’ ಕಾಕ್ (01) ಪ್ರಾರಂಭಿಸಿದರು. ಆದರೆ ಎರಡನೇ ಓವರ್ ನಲ್ಲೇ ಡಿ’ ಕಾಕ್ ಅವರು ಸಿವಂ ಮಾವಿ ಬೌಲಿಂಗ್ ನಲ್ಲಿ ಔಟಾಗಿ ನಿರಾಶೆ ಮೂಡಿಸಿದರು.

ಬಳಿಕ ರೋಹಿತ್ ಅವರನ್ನು ಸೇರಿಕೊಂಡ ಸೂರ್ಯ ಕುಮಾರ್ ಯಾದವ್ ಅವರು ಬಿರುಸಿನ ಬ್ಯಾಟಂಗ್ ಗೆ ಇಳಿದರು. ಈ ಜೋಡಿ ಕೆಕೆಆರ್ ಬೌಲರ್ ಗಳನ್ನು ದಂಡಿಸುತ್ತಾ ಸಾಗಿತು. ಇವರಿಬ್ಬರ ನಡುವೆ 97 ರನ್ ಗಳ ಅಮೂಲ್ಯ ಜೊತೆಯಾಟ ದಾಖಲಾಯಿತು.

Advertisement

ಈ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಾ ಅರ್ಧಶತಕದ ಹೊಸ್ತಿಲಲ್ಲಿದ್ದ ಸೂರ್ಯಕುಮಾರ್ ಯಾದವ್ ಅವರು 47 ರನ್ ಗಳಿಸಿ ರನೌಟಾದರು.  ಅವರ ಈ ಇನ್ನಿಂಗ್ಸ್ ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ದಾಖಲಾಗಿತ್ತು.


ಬಳಿಕ ತಂಡವನ್ನು ಆಧರಿಸಿದ ಕಪ್ತಾನ ರೋಹಿತ್ ಶರ್ಮಾ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ನಡೆಸುತ್ತಾ ಶತಕದತ್ತ ದಾಪುಗಾಲು ಹಾಕುತ್ತಿದ್ದರು. ಶರ್ಮಾ ಅವರಿಗೆ ಸೌರಭ್ ತಿವಾರಿ (21), ಹಾರ್ದಿಕ್ ಪಾಂಡ್ಯ (18) ಉತ್ತಮ ಬೆಂಬಲ ನೀಡಿದರು. ಆದರೆ ಪಾಂಡ್ಯ ತಮ್ಮ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು.

17.5 ಓವರ್ ತನಕ ಬ್ಯಾಟಂಗ್ ನಡೆಸಿದ ಶರ್ಮಾ 80 ರನ್ ಗಳಿಸಿದ್ದಾಗ, ಇನ್ನೇನು ಶತಕ ದಾಖಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ ಶಿವಂ ಮಾವಿ ಬೌಲಂಗ್ ನಲ್ಲಿ ಕಮಿನ್ಸ್ ಗೆ ಕ್ಯಾಚ್ ನೀಡಿ ಔಟಾದರು. ಅವರ ಈ ಇನ್ನಿಂಗ್ಸ್ ನಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿ ದಾಖಲಾಗಿತ್ತು.

ಕೆಕೆಆರ್ ಪರ ವೇಗಿ ಶಿವಂ ಮಾವಿ ಅವರು 2 ಪ್ರಮುಖ ವಿಕೆಟ್ (ಡಿ’ ಕಾಕ್, ರೋಹಿತ್ ಶರ್ಮಾ) ಪಡೆದು ಮಿಂಚಿದರು. ಸ್ಪಿನ್ನರ್ ನರೈನ್ ಮತ್ತು ರಸ್ಸೆಲ್ ತಲಾ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next