Advertisement

ಅರಬ್‌ ನಾಡಿನಲ್ಲಿ ಇಂದಿನಿಂದ 53 ದಿನಗಳ ಐಪಿಎಲ್‌ ಅಬ್ಬರ

11:43 PM Sep 18, 2020 | mahesh |

ಅಬುಧಾಬಿ: ಆರು ತಿಂಗಳುಗಳಿಂದ ಐಪಿಎಲ್‌ ಗುಂಗಿನಲ್ಲೇ ಇದ್ದ ದೇಶದ ಕ್ರಿಕೆಟ್‌ ಅಭಿಮಾನಿಗಳು ಇನ್ನು ಕಾಯಬೇಕಿಲ್ಲ. ವಿಶ್ವದ ಈ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ನ 13ನೇ ಆವೃತ್ತಿಗೆ ಎದುರಾದ ಕಂಟಕವೆಲ್ಲ ನಿವಾರಣೆ ಗೊಂಡಿದೆ. ಕೋವಿಡ್‌ ಕಾರಣದಿಂದ ಸುಮಾರು 6 ತಿಂಗಳು ವಿಳಂಬವಾಗಿ ಅರಬ್‌ ನಾಡಿನ 3 ಅಂಗಳದಲ್ಲಿ ಶನಿವಾರದಿಂದ ಅಬ್ಬರಿಸಲಿದೆ. ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಮುಂದಿನ 53 ದಿನಗಳ ಕಾಲ ಹಬ್ಬದ ವಾತಾವರಣ.

Advertisement

ಅಬುಧಾಬಿಯ “ಶೇಖ್‌ ಜಾಯೇದ್‌ ಸ್ಟೇಡಿಯಂ’ನಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ರನ್ನರ್ ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಎದುರಾಗಲಿವೆ. ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಪಂದ್ಯ ಆರಂಭವಾಗುತ್ತದೆ.

ಕೊರೊನಾ ಭೀತಿಯ ನಡುವೆ, ಹತ್ತಾರು ನಿಬಂಧನೆ ಗಳು ಮತ್ತು ವೀಕ್ಷಕರ ಅನುಪಸ್ಥಿತಿ ಯಲ್ಲಿ ಈ ಪಂದ್ಯಾವಳಿ ನಡೆದರೂ ಇದು ಸೃಷ್ಟಿ ಸಿರುವ ರೋಮಾಂಚನಕ್ಕೇನೂ ಕೊರತೆ ಇಲ್ಲ. ಕೊರೊನಾದಿಂದಾಗಿ ಮನೋರಂಜನೆಯ ತೀವ್ರ ಬರಗಾಲದಲ್ಲಿದ್ದ ಇತರರನ್ನೂ ಈ ಬಾರಿಯ ಐಪಿಎಲ್‌ ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ.

ಎಂಟೂ ತಂಡ ಬಲಿಷ್ಠ
ಮೇಲ್ನೋಟಕ್ಕೆ ಎಲ್ಲ 8 ತಂಡಗಳೂ ಬಲಿಷ್ಠ ವಾಗಿವೆ. ಆದರೂ ಕೆಲವು ಸ್ಟಾರ್‌ ಆಟಗಾರರ ಅನುಪಸ್ಥಿತಿ ಕೆಲವು ತಂಡಗಳ ಕಾರ್ಯತಂತ್ರವನ್ನು ಏರುಪೇರಾಗಿಸುವ ಸಾಧ್ಯತೆ ಇದೆ. ಲಸಿತ ಮಾಲಿಂಗ (ಮುಂಬೈ), ಸುರೇಶ್‌ ರೈನಾ, ಹರ್ಭಜನ್‌ ಸಿಂಗ್‌ (ಚೆನ್ನೈ) ಈಗಾಗಲೇ ಕೂಟದಿಂದ ಹೊರಗುಳಿದಿದ್ದಾರೆ. ಬೆನ್‌ ಸ್ಟೋಕ್ಸ್‌ (ರಾಜಸ್ಥಾನ್‌) ಕೂಡ ಫಿಫ್ಟಿ-ಫಿಫ್ಟಿ ಎಂಬ ಸ್ಥಿತಿಯಲ್ಲಿದ್ದಾರೆ. ಇನ್ನೊಂದೆಡೆ ಕೆಲವು ತಂಡಗಳು ಹೆಚ್ಚುವರಿ ತಾರಾ ಆಟಗಾರರಿಂದ ಹೆಚ್ಚು ಬಲಿಷ್ಠವಾಗಿವೆ. ಉದಾಹರಣೆಗೆ
ಆರ್‌ಸಿಬಿ. ಕರ್ನಾಟಕದ ಈ ಫ್ರಾಂಚೈಸಿ ಆರನ್‌ ಫಿಂಚ್‌, ಕ್ರಿಸ್‌ ಮಾರಿಸ್‌ ಸೇರ್ಪಡೆಯಿಂದ ಜಬರ್ದಸ್ತ್ ಆಗಿ ಗೋಚರಿಸುತ್ತಿದೆ.

ಧೋನಿ ಕೇಂದ್ರಬಿಂದು
ಎಲ್ಲರ ಕೇಂದ್ರಬಿಂದು ಆಗಿರುವವರು ಮಹೇಂದ್ರ ಸಿಂಗ್‌ ಧೋನಿ. ಅಂತಾರಾಷ್ಟ್ರೀಯ ಕ್ರಿಕೆಟಿಗೆ ಈಗಾಗಲೇ ವಿದಾಯ ಘೋಷಿಸಿರುವ ಧೋನಿ ಇನ್ನು ಆಡುವುದೇನಿದ್ದರೂ ಐಪಿಎಲ್‌ ಮಾತ್ರ. ಇದು ಅವರ ಕೊನೆಯ ಐಪಿಎಲ್‌ ಕೂಡ ಆಗಿರಲೂಬಹುದು. ಹೀಗಾಗಿ ಮೊದಲ ಪಂದ್ಯದಿಂದಲೇ 13ನೇ ಐಪಿಎಲ್‌ ಮೋಡಿ ಗೈಯುವುದರಲ್ಲಿ ಅನುಮಾನವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next