ದುಬಾೖ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ ದೇವದತ್ತ ಪಡಿಕ್ಕಲ್ ಮೊದಲ ಐಪಿಎಲ್ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ತಮ್ಮ ಆರಂಭವನ್ನು ಸ್ಮರಣೀಯಗೊಳಿಸಿದರು. ಅವರ ಅರ್ಧ ಶತಕ 36 ಎಸೆತಗಳಿಂದ ಬಂತು. ಪಡಿಕ್ಕಲ್ ಚೊಚ್ಚಲ ಪಂದ್ಯದಲ್ಲೇ ಅರ್ಧ ಶತಕ ಹೊಡೆದ ಆರ್‌ಸಿಬಿಯ 5ನೇ ಕ್ರಿಕೆಟಿಗ. ಉಳಿದವರೆಂದರೆ ಕ್ರಿಸ್ ಗೇಲ್ (ಅಜೇಯ 102), ಎಬಿ ಡಿ ವಿಲಿಯರ್ (ಅಜೇಯ 54), ಯುವರಾಜ್ ಸಿಂಗ್ (ಅಜೇಯ 52) ಮತ್ತು ಶ್ರೀವತ್ಸ ಗೋಸ್ವಾಮಿ (52).
ಐಪಿಲ್ ಮೂರನೇ ಪಂದ್ಯದಲ್ಲಿ ಆರ್‌ಸಿಬಿ, ಸನ್‌ರೈಸರ್ ಹೈದರಾಬಾದ್ ಗೆಲುವಿವೆ 16೪ ರನ್ ಗಾಲ ಗುರಿ ನೀಡಿದೆ. ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್, ಆಸ್ಟ್ರೇಲಿಯದ ಬಿಗ್ ಹಿಟ್ಟರ್ ಆರನ್ ಫಿಂಚ್ ಮತ್ತು “360 ಡಿಗ್ರಿ ಬ್ಯಾಟ್ಸ್‌ಮನ್’ ಎಬಿ ಡಿ ವಿಲಿಯರ್ ಅವರ ಹೊಡಿಬಡಿ ಬ್ಯಾಟಿಂಗ್ ಪರಾಕ್ರಮದಿಂದ 163 ರನ್ ಪೇರಿಸಿದೆ. ಪಡಿಕ್ಕಲ್ ಚೊಚ್ಚಲ ಐಪಿಎಲ್‌ನಲ್ಲೇ ಅರ್ಧ ಶತಕ ಬಾರಿಸಿ ಮಿಂಚಿದರು.
ಪಡಿಕ್ಕಲ್ ಮತ್ತು ಮೊದಲ ಸಲ ಬೆಂಗಳೂರು ಫ್ರಾಂಚೈಸಿಯನ್ನು ಪ್ರತಿನಿಧಿಸಿದ ಆರನ್ ಫಿಂಚ್ ಆರ್‌ಸಿಬಿಗೆ ಭರ್ಜರಿ ಆರಂಭ ನೀಡಿದರು. 5.2 ಓವರ್‌ಗಳಲ್ಲಿ 50 ರನ್ ಜತೆಯಾಟ ನೀಡುವ ಮೂಲಕ ಉತ್ತಮ ಅಡಿಪಾಯವೊಂದನ್ನು ನಿರ್ಮಿಸಿದರು. 9 ಓವರ್‌ಗಳಲ್ಲಿ 75 ರನ್ ಒಟ್ಟುಗೂಡಿತು. ಇವರಲ್ಲಿ ಫಿಂಚ್‌ಗಿಂತ ಲಂಬೂ ಬ್ಯಾಟ್ಸ್‌ಮನ್ ಪಡಿಕ್ಕಲ್ ಬ್ಯಾಟಿಂಗ್ ಬಿರುಸಿನಿಂದ ಕೂಡಿತ್ತು. ಬಿರುಸಿನ ಆಟಕ್ಕಿಳಿದ ಅವರು ಆಕರ್ಷಕ ಬೌಂಡರಿಗಳ ಮೂಲಕ ಗಮನ ಸೆಳೆದರು.
ಹೈದರಾಬಾದ್‌ನ ಪ್ರಧಾನ ಸ್ಪಿನ್ನರ್ ರಶೀದ್ ಖಾನ್ ಕೂಡ ಆರಂಭಿಕರ ಆರ್ಭಟದ ವೇಳೆ ಪರಿಣಾಮ ಬೀರಲಿಲ್ಲ. ಇವರನ್ನು ಫಿಂಚ್ ಟಾರ್ಗೆಟ್ ಮಾಡಿಕೊಂಡರು. ಅಫ್ಘಾನ್ ಬೌಲರ್‌ಗೆ ಸಿಕ್ಸರ್ ರುಚಿಯನ್ನೂ ತೋರಿಸಿದರು. 10 ಓವರ್ ಆಗುವಷ್ಟರಲ್ಲಿ 7 ಮಂದಿಯನ್ನು ಬೌಲಿಂಗಿಗೆ ಇಳಿಸಿದ್ದು ಹೈದರಾಬಾದ್‌ನ ಅಸಹಾಯಕತೆಗೆ, ಆರ್‌ಸಿಬಿ ಆರಂಭಿಕರ ಪಾರಮ್ಯಕ್ಕೆ ಸಾಕ್ಷಿಯಾಯಿತು.
ಪಡಿಕ್ಕಲ್ ಫಿಂಚ್ ಜತೆಯಾಟ ಭರ್ತಿ 11 ಓವರ್‌ಗಳ ತನಕ ಸಾಗಿತು. ಮೊದಲ ವಿಕೆಟಿಗೆ 90 ರನ್ ಒಟ್ಟುಗೂಡಿತು. ಆಗ 56 ರನ್ ಮಾಡಿದ ಪಡಿಕ್ಕಲ್ ಅವರನ್ನು ವಿಜಯ್ ಶಂಕರ್‌ಗೆ ಬೌಲ್ಡ್ ಮಾಡಿದರು. 42 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಒಳಗೊಂಡಿತ್ತು.