Advertisement

ಪವರ್‌ ಹಿಟ್ಟಿಂಗ್‌ ಪಂಜಾಬ್‌ ವರ್ಸಸ್‌ ಸ್ಪಿನ್‌ ಶಕ್ತಿಯ ಡೆಲ್ಲಿ

09:03 PM Sep 19, 2020 | mahesh |

ದುಬಾೖ: ಬಿಗ್‌ ಹಿಟ್ಟಿಂಗ್‌ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ವೈವಿಧ್ಯಮಯ ಸ್ಪಿನ್‌ ದಾಳಿಯನ್ನು ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ರವಿವಾರದ ದುಬಾೖ ಐಪಿಎಲ್‌ ಮೇಲಾಟಕ್ಕೆ ಅಣಿಯಾಗಿವೆ. ಇದಕ್ಕೂ ಮಿಗಿಲಾಗಿ ಮಾಜಿ ಘಟಾನುಘಟಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ ಮತ್ತು ರಿಕಿ ಪಾಂಟಿಂಗ್‌ ಅವರ ಕೋಚಿಂಗ್‌ ಪರಿಣತಿಗೆ ಸವಾಲಾಗಬಲ್ಲ ಪಂದ್ಯವೂ ಇದಾಗಿರುವುದರಿಂದ ಕುತೂಹಲ ಸಹಜವಾಗಿಯೇ ಹೆಚ್ಚಿದೆ.

Advertisement

ಪಂಜಾಬ್‌ ಪಾಳೆಯದಲ್ಲಿ ಕನ್ನಡಿಗರೇ ತುಂಬಿರುವುದರಿಂದ ಕರ್ನಾಟಕದ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಈ ತಂಡದ ಮೇಲೆ ಹೆಚ್ಚಿನ ಸೆಳೆತ, ಮೋಹ ಸಹಜ. ಕೆ.ಎಲ್‌. ರಾಹುಲ್‌ ಮೊದಲ ಸಲ ನಾಯಕನಾಗಿರುವುದರಿಂದ ಈ ಆಕರ್ಷಣೆ ಇನ್ನಷ್ಟು ಹೆಚ್ಚಿದೆ. ಈವರೆಗೆ ಫೈನಲ್‌ ಕೂಡ ಕಾಣದ ಡೆಲ್ಲಿಯನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದಾರೆ.

ಪಂಜಾಬ್‌ ಫೇವರಿಟ್‌
ಕಾಗದದ ಮೇಲೆ ಪಂಜಾಬ್‌ ಫೇವರಿಟ್‌. ರಾಹುಲ್‌, ಗೇಲ್‌, ಮ್ಯಾಕ್ಸ್‌ವೆಲ್‌, ನೀಶಮ್‌, ಪೂರಣ್‌, ಕೆ. ಗೌತಮ್‌ ಅವರೆಲ್ಲ ಪಂಜಾಬ್‌ ತಂಡದ ಪಿಲ್ಲರ್‌ಗಳಾಗಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದರೆ ಪಂಜಾಬ್‌ ಬೃಹತ್‌ ಮೊತ್ತದ ಸವಾಲೆಸೆಯುವ ಎಲ್ಲ ಸಾಧ್ಯತೆ ಇದೆ. ಬ್ಯಾಟಿಂಗಿಗೆ ಹೋಲಿಸಿದರೆ ಪಂಜಾಬಿನ ಬೌಲಿಂಗ್‌ ತುಂಬ ದುರ್ಬಲವಾಗಿ ಗೋಚರಿಸುತ್ತದೆ. ಮೊಹಮ್ಮದ್‌ ಶಮಿ, ಕ್ರಿಸ್‌ ಜೋರ್ಡನ್‌, ಶೆಲ್ಡನ್‌ ಕಾಟ್ರೆಲ್‌, ಕೆ. ಗೌತಮ್‌, ರವಿ ಬಿಶ್ನೋಯಿ, ಮುಜೀಬ್‌ ಉರ್‌ ರೆಹಮಾನ್‌ ಅವರೆಲ್ಲ ಎಷ್ಟು ಘಾತಕವಾಗಬಲ್ಲರು ಎಂಬುದರ ಮೇಲೆ ಪಂಜಾಬ್‌ ಬೌಲಿಂಗ್‌ ಸಾಮರ್ಥ್ಯವನ್ನು ಅಳೆಯಬಹುದು.

ಡೆಲ್ಲಿ ಬೌಲಿಂಗ್‌ ಬಲಿಷ್ಠ
ಯುಎಇ ಪಿಚ್‌ಗಳಲ್ಲಿ ಭಾರತದಂತೆ ರನ್‌ ಪ್ರವಾಹ ಹರಿದು ಬರುವುದಿಲ್ಲ, ಇವು ಸ್ಪಿನ್‌ ಸ್ನೇಹಿ ಎಂಬ ಪ್ರತೀತಿ ಇರುವುದರಿಂದ ಡೆಲ್ಲಿಗೆ ಹೆಚ್ಚಿನ ಲಾಭವಾಗಬಹುದು. ಅಯ್ಯರ್‌ ಬಳಗ ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ ಅವರ ತ್ರಿವಳಿ ಸ್ಪಿನ್‌ ದಾಳಿಯನ್ನು ಹೊಂದಿದೆ.

ಡೆಲ್ಲಿಯ ವೇಗದ ಬೌಲಿಂಗ್‌ ಕೂಡ ವೈವಿಧ್ಯಮಯ. ಬಿಗ್‌ ಬಾಶ್‌ ಲೀಗ್‌ನಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ಡೇನಿಯಲ್‌ ಸ್ಯಾಮ್ಸ್‌, ಘಾತಕ ವೇಗಿ ಕಾಗಿಸೊ ರಬಾಡ, ಇಶಾಂತ್‌ ಶರ್ಮ ಇಲ್ಲಿನ ಪ್ರಮುಖ ದಾಳಿಗಾರರು. ಒಟ್ಟಾರೆ ಬೌಲಿಂಗ್‌ ಬಲ ಡೆಲ್ಲಿಯ ಆಸ್ತಿ ಎನ್ನಬಹುದು.

Advertisement

ಡೆಲ್ಲಿ ಬ್ಯಾಟಿಂಗ್‌ ಸರದಿಯಲ್ಲಿ ಭಾರತೀಯ ಆಟಗಾರದೇ ಸಿಂಹಪಾಲು. ಶಿಖರ್‌ ಧವನ್‌, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌ ಪ್ರಮುಖರು. ವಿದೇಶಿಯರಲ್ಲಿ ಹೆಟ್‌ಮೈರ್‌, ಅಲೆಕ್ಸ್‌ ಕ್ಯಾರಿ, ಸ್ಟೋಯಿನಿಸ್‌ ಅಪಾಯಕಾರಿಯಾಗಬಲ್ಲರು.
ಇತಿಹಾಸ ಪಂಜಾಬ್‌ ಪರವಾಗಿದೆ. ಕಳೆದ 5 ಪಂದ್ಯಗಳಲ್ಲಿ ಅದು ಡೆಲ್ಲಿಯನ್ನು 4 ಸಲ ಮಣಿಸಿದೆ. 2019ರ ದ್ವಿತೀಯ ಸುತ್ತಿನ ಹಣಾಹಣಿಯಲ್ಲಿ ಡೆಲ್ಲಿ ಗೆಲುವಿನ ಸಂಭ್ರಮ ಆಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next