Advertisement

ಗೆಲುವಿಗೆ ಟ್ರ್ಯಾಕ್‌ಗೆ ಮರಳಲು ಚೆನ್ನೈ ಕಾತರ

06:47 PM Oct 01, 2020 | mahesh |

ದುಬಾಯಿ: ಸತತ ಎರಡು ಪಂದ್ಯಗಳನ್ನು ಸೋಲನ್ನು ಕಂಡು ಒತ್ತಡದಲ್ಲಿರುವ ಡೇವಿಡ್‌ ವಾರ್ನರ್‌ ನೇತೃತ್ವದ ಹೈದರಾಬಾದ್‌ ತಂಡವು ಮಂಗಳವಾರ ಗೆಲುವಿನ ಹ್ಯಾಟ್ರಿಕ್‌ ಯೋಜನೆಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ 15 ರನ್ನುಗಳ ಸೋಲುಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಶುಕ್ರವಾರ ಮತ್ತೂಂದು ಗೆಲುವಿಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣೆಸಲಿದೆ. ಇನ್ನೊಂದೆಡೆ ಧೋನಿ ಸಾರಥ್ಯದ ಚೆನ್ನೈ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದು ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುವ ಯೋಜನೆಯಲ್ಲಿದೆ.

Advertisement

ಹೈದರಾಬಾದ್‌ ವೈಫ‌ಲ್ಯ
ಹೈದರಾಬಾದ್‌ ತಂಡದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಎದ್ದು ಕಾಣುತ್ತಿದೆ. ಬೇರ್‌ಸ್ಟೊ, ವಾರ್ನರ್‌, ಕೇನ್‌ ವಿಲಿಯಮ್ಸನ್‌ ಹೊರತುಪಡಿಸಿ ಉಳಿದ ಆಟಗಾರರ ಬ್ಯಾಟ್‌ ಮಾತಾಡುತ್ತಿಲ್ಲ. ಕನ್ನಡಿಗ ಮನೀಷ್‌ ಪಾಂಡೆ ಅವರ ಬ್ಯಾಟಿಂಗ್‌ ಕೂಡ ಸುಧಾರಿಸಬೇಕಿದೆ. ಬೌಲಿಂಗ್‌ನಲ್ಲಿ ಅಫ್ಘಾನ್‌ ಆಟಗಾರ ರಶೀದ್‌ ಖಾನ್‌ ಹೊರತುಪಡಿಸಿ ಉಳಿದವರೆಲ್ಲರೂ ದುಬಾರಿಯಾಗುತ್ತಿದ್ದಾರೆ. ಅನುಭವಿ ಭುವನೇಶ್ವರ್‌ ಕುಮಾರ್‌ ಈ ಪಂದ್ಯದಲ್ಲಿ ಮಿಂಚಲೇಬೇಕಾದ ಅನಿವಾರ್ಯವಿದೆ.

ಚೆನ್ನೈ ಓಪನಿಂಗ್‌ ವೈಫ‌ಲ್ಯ
ಚೆನ್ನೈತಂಡದ ಪ್ರಮುಖ ಸಮಸ್ಯೆ ಓಪನಿಂಗ್‌. ಮುರಳಿ ವಿಜಯ್‌, ಶೇನ್‌ ವಾಟ್ಸನ್‌ ಪ್ರತಿ ಪಂದ್ಯದಲ್ಲಿಯೂ ಕೈಕೊಡುತ್ತಿದ್ದಾರೆ. ಆದರೆ ಪ್ಲೆಸಿಸ್‌ ಮಾತ್ರ ಏಕಾಂಗಿ ಹೊರಾಟ ನಡೆಸುತ್ತಿದ್ದು ಅವರಿಗೆ ನಾಯಕ ಧೋನಿ ಹೊರತುಪಡಿಸಿ ಬೇರೆ ಯಾರೂ ಬೆಂಬಲ ನೀಡುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಕೆದಾರ್‌ ಜಾದವ್‌, ಋತುರಾಜ್‌ ಗಾಯಕ್ವಾಡ್‌ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫ‌ಲರಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.

ಚೆನ್ನೈ ಬೌಲಿಂಗ್‌ ಹರಿತಗೊಂಡೀತೇ?
ರವೀಂದ್ರ ಜಡೇಜ, ಪೀಯೂಷ್‌ ಚಾವ್ಲಾ , ದೀಪಕ್‌ ಚಹರ್‌ ಎಸೆತಗಳೆಲ್ಲ ಕಳೆದ ಪಂದ್ಯದಲ್ಲಿ ದಿಕ್ಕಾಪಾಲಾಗಿದ್ದವು. ತಂಡದ ಬೌಲಿಂಗ್‌ ವಿಭಾಗವನ್ನು ಹರಿತಗೊಳಿಸುವುದು ಹೇಗೆ ಎಂಬುದು ಧೋನಿ ಅವರಿಗೆ ದೊಡ್ಡ ಸಮಸ್ಯೆಯಾಗಿ ಕಾಡಿದೆ. ಸ್ಯಾಮ್‌ ಕರನ್‌ ಬದಲು ಈ ಬಾರಿ ಡ್ವೇನ್‌ ಬ್ರಾವೊ ಆಡುವ ಸಾಧ್ಯತೆಯಿದೆ.

ರಾಯುಡು, ಬ್ರಾವೊ ಲಭ್ಯ ?
ಐಪಿಎಲ್‌ ಉದ್ಘಾಟನ ಪಂದ್ಯ ಆಡಿದ ಬಳಿಕ ಗಾಯಾಳಾಗಿ ಹೊರಗುಳಿದಿದ್ದ ಅಂಬಾಟಿ ರಾಯುಡು ಮತ್ತೆ ತಂಡಕ್ಕೆ ವಾಪಾಸ್‌ ಆಗಿದ್ದಾರೆ. ಜತೆಗೆ ಸ್ಟಾರ್‌ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಕೂಡ ಹೈದರಾಬಾದ್‌ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ತಂಡದ ಸಿಇಒ ಕೆ.ಎಸ್‌. ವಿಶ್ವನಾಥನ್‌ ತಿಳಿಸಿದ್ದಾರೆ. ಬ್ರಾವೊ ಅವರು ಸ್ಯಾಮರ್‌ ಕರನ್‌ ಬದಲಿಗೆ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next