Advertisement

ಯುವಕರ ಸವಾಲು ಮೆಟ್ಟಿ ನಿಂತಿತೇ ಚೆನ್ನೈ

11:26 PM Oct 16, 2020 | mahesh |

ಶಾರ್ಜಾ: ಒಂದೆಡೆ ಹಿರಿಯ ಅನುಭವಿಗಳಿಂದಲೇ ಕೂಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ಇನ್ನೊಂದೆಡೆ ಯುವಕರನ್ನೇ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್‌ ಶನಿವಾರದ ದ್ವಿತೀಯ ಐಪಿಎಲ್‌ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಡೆಲ್ಲಿ ತಂಡದಲ್ಲಿ ಅನುಭವಿಗಳ ಕೊರತೆಯಿದ್ದರೂ ತಂಡದ ಪ್ರದರ್ಶನವನ್ನು ನೋಡುದಾದರೆ ಸ್ವತಃ ಅನುಭವಿ ಆಟಗಾರರೇ ನಾಚಿಸುವಂತ ಉತ್ಕೃಷ್ಟ ಪ್ರದರ್ಶನ ತೋರುತ್ತಿದೆ ಅಯ್ಯರ್‌ ಪಡೆ.

Advertisement

ಮತ್ತೆ ಗೆದ್ದಿತೇ ಚೆನ್ನೈ
ಕಳೆದ ಹೈದರಾಬಾದ್‌ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಗೆಲುವಿನ ಟ್ರ್ಯಾಕ್‌ಗೆ ಮರಳಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಆತ್ಮವಿಶ್ವಾಸದಲ್ಲಿದೆ. ಆದರೆ ಡೆಲ್ಲಿ ಸವಾಲು ಅಷ್ಟೂ ಸುಲಭವಲ್ಲ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಡೆಲ್ಲಿ ಸಮರ್ಥವಾಗಿದೆ. 150ರ ಸಾಮಾನ್ಯ ಮೊತ್ತವನ್ನು ಹಿಡಿದು ನಿಲ್ಲಿಸುವಂತ ಸಾಮರ್ಥ್ಯ ಡೆಲ್ಲಿ ಪಾಳಯದಲ್ಲಿದೆ. ಚೆನ್ನೈ ಕಳೆದ ಪಂದ್ಯದಲ್ಲಿ ಸ್ಯಾಮ್‌ ಕರನ್‌ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಯಶಸ್ಸು ಕಂಡಿತ್ತು. ಈ ಬಾರಿಯೂ ಅವರು ಆರಂಭಿಕನಾಗಿ ಆಡುವ ಸಾಧ್ಯತೆ ಹೆಚ್ಚಿದೆ. ಆದರೆ ತಂಡದ ನಂಬಿಕಾರ್ಹ ಆಟಗಾರ ಫಾ ಡು ಪ್ಲೆಸಿಸ್‌ ಕಳೆದ ಕೆಲ ಪಂದ್ಯಗಳಿಂದ ಬ್ಯಾಟಿಂಗ್‌ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ಚಿಂತೆಗೀಡು ಮಾಡಿದೆ. ಇನ್ನು ವಿದೇಶಿ ಕೋಟದಲ್ಲಿರುವ ಬೌಲರ್‌ಗಳಾದ ಬ್ರಾವೊ ಮತ್ತು ಕರನ್‌ ಉತ್ತಮ ಲಯದಲ್ಲಿರುವ ಕಾರಣದಿಂದ ಹಿರಿಯ ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ಗೆ ಈ ಪಂದ್ಯದಲ್ಲಿಯೂ ಆಡುವ ಅವಕಾಶ ಕಷ್ಟಸಾಧ್ಯ.

ಫಾರ್ಮ್ಗೆ ಮರಳಿದ ಧವನ್‌
ಭಾರತ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ ಬ್ಯಾಟಿಂಗ್‌ ಫಾರ್ಮ್ಗೆ ಮರಳಿರುವುದು ಡೆಲ್ಲಿಗೆ ಹೆಚ್ಚು ಬಲ ಬಂದಂತಾಗಿದೆ. ಕಳೆದ ಎರಡೂ ಪಂದ್ಯಗಳಲ್ಲಿ ಶಿಖರ್‌ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಬಗ್ಗೆ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಉಳಿದಂತೆ ಅಯ್ಯರ್‌, ಸ್ಟೋಯಿನಿಸ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಗ್ಗೆ ತಂಡದ ಕೋಚ್‌ ರಿಕಿ ಪಾಂಟಿಂಗ್‌ಗೆ ಅಪಾರ ನಂಬಿಕೆ ಹುಟ್ಟಿಸಿದೆ.

ಬೌಲಿಂಗ್‌ ಬಲಿಷ್ಠ
ಕಳೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155ರ ಸರಾಸರಿ ಬೌಲಿಂಗ್‌ ನಡೆಸಿ ಸುದ್ದಿಯಾದ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್‌ ನೋರ್ಜೆ ಒಂದೆಡೆಯಾದರೆ ಈ ಮೊದಲು ಚೆನ್ನೈ ತಂಡದಲ್ಲಿ ಆಡಿದ ಅನುಭವ ಹೊಂದಿ ರುವ ಆರ್‌.ಅಶ್ವಿ‌ನ್‌ ಜತೆಗೆ ಪಂದ್ಯದ ಪಲಿತಾಂಶವನ್ನೆ ಬದಲಿಸಬಲ್ಲ ಘಾತಕ ವೇಗಿ ಕಾಗಿಸೊ ರಬಾಡ ಡೆಲ್ಲಿಯ ಪ್ರಮುಖ ಅಸ್ತ್ರವಾಗಿದ್ದಾರೆ. ಇವರಿಗೆ ಅಕ್ಷರ್‌ ಪಟೇಲ್‌, ಆಲ್‌ರೌಂಡರ್‌ ಸ್ಟೋಯಿನಿಸ್‌ ಕೂಡ ಉತ್ತಮ ಬೆಂಬಲ ನೀಡುವಲ್ಲಿ ಸಮರ್ಥರಿದ್ದಾರೆ ಆದ್ದರಿಂದ ಡೆಲ್ಲಿ ಬೌಲಿಂಗ್‌ ಘಾತಕ ಎನ್ನಲಡ್ಡಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next