Advertisement

ಚೆನ್ನೈ – ಆರ್ ಸಿಬಿ ಮುಖಾಮುಖಿ: ಕೊಹ್ಲಿ ಪಡೆಗೆ 37 ರನ್ ಗೆಲುವು

11:52 PM Oct 10, 2020 | mahesh |

ದುಬಾೖ: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಶನಿವಾರದ ದ್ವಿತೀಯ ಐಪಿಎಲ್‌ ಮುಖಾಮುಖಿಯಲ್ಲಿ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದ ರಾಯಲ್‌ ಚಾಲೆಂಜರ್ ಬೆಂಗಳೂರು 37 ರನ್‌ ಗೆಲುವು ದಾಖಲಿಸಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ನೆಗೆದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 4 ವಿಕೆಟಿಗೆ 169 ರನ್‌ ಗಳಿಸಿ ಸವಾಲೊಡ್ಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

Advertisement

ಮೊಯಿನ್‌ ಅಲಿ ಬದಲಿಗೆ ಆಡಲಿಳಿದ ದಕ್ಷಿಣ ಆಫ್ರಿಕಾದ ವೇಗಿ ಕ್ರಿಸ್‌ ಮಾರಿಸ್‌ ಮಾರಕ ದಾಳಿ ನಡೆಸಿದರು. ಕೇವಲ 19 ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ ಕಬಳಿಸಿದರು. ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಪಡೆದರು.

ಚೆನ್ನೈ ಪರ ಅಗ್ರ ಕ್ರಮಾಂಕದ ಆಟಗಾರರಾದ ಫಾ ಡು ಪ್ಲೆಸಿಸ್‌, ವಾಟ್ಸನ್‌ ಉತ್ತಮ ಬ್ಯಾಟಿಂಗ್‌ ನಡೆಸುವಲ್ಲಿ ವಿಫ‌ಲರಾದರು. ರಾಯುಡು (42), ಜಗದೀಶನ್‌ (33) ರನ್‌ ಗಳಿಸಿದರು.

ಈ ಪಂದ್ಯದಲ್ಲಿ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಆಸೀಸ್‌ ಬಿಗ್‌ ಹಿಟ್ಟರ್‌ ಆರನ್‌ ಫಿಂಚ್‌ ಎರಡೇ ರನ್ನಿಗೆ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಆಘಾತವಿಕ್ಕಿತು. ಅವರನ್ನು ಬೌಲ್ಡ್‌ ಮಾಡುವ ಮೂಲಕ ದೀಪಕ್‌ ಚಹರ್‌ ಕಳೆದ ಪಂದ್ಯದ ವೈಫ‌ಲ್ಯವನ್ನು ಬದಿಗೊತ್ತಿದರು. ಅವರು 3 ಓವರ್‌ಗಳಲ್ಲಿ ಬರೀ 10 ರನ್‌ ನೀಡಿ ಒಂದು ವಿಕೆಟ್‌ ಪಡೆದರು.

2ನೇ ವಿಕೆಟ್‌ಗೆ ಜತೆಯಾದ ಕೊಹ್ಲಿ ಮತ್ತು ಪಡಿಕ್ಕಲ್‌ ಎಚ್ಚರಿಕೆಯ ಆಟವಾಡತೊಡಗಿದರು ಈ ಜೋಡಿಯಿಂದ 53 ರನ್‌ಗಳು ಒಟ್ಟುಗೂಡಿತು. ಪಡಿಕ್ಕಲ್‌ 33 ರನ್‌ ಗಳಿಸಿದ ವೇಳೆ ಸಿಕ್ಸರ್‌ ಬಾರಿಸುವ ಪ್ರಯತ್ನದಲ್ಲಿ ಫಾ ಡು ಪ್ಲೆಸಿಸ್‌ಗೆ ಕ್ಯಾಚ್‌ ನೀಡುವ ಮೂಲಕ ಔಟಾದರು. ಇದರ ಬೆನ್ನಲ್ಲೆ ಎಬಿಡಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದರು. ಈ ಇಬ್ಬರ ವಿಕೆಟ್‌ ಬೇಟೆಯಾಡುವಲ್ಲಿ ಶಾರ್ದುಲ್‌ ಠಾಕೂರ್‌ ಯಶಸ್ವಿಯಾದರು.

Advertisement

ಇನ್ನೊಂದು ಬದಿಯಲ್ಲಿ ನಾಯಕ ವಿರಾಟ್‌ ಮಾತ್ರ ಏಕಾಂಗಿಯಾಗಿ ನಿಂತು ಚೆನ್ನೈ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಇದ್ದರು. 54 ಎಸೆತಗಳನ್ನು ಎದುರಿಸಿ ಅಜೇಯ 90 ರನ್‌ (4 ಸಿಕ್ಸರ್‌ 4 ಬೌಂಡರಿ) ಸಿಡಿಸಿದರು. ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಆಲ್‌ರೌಂಡರ್‌ ದುಬೆ 14 ಎಸೆಗಳಿಂದ ಅಜೇಯ 22 ರನ್‌ ಸೂರೆಗೈದರು.

ಸಂಕ್ಷಿಪ್ತ ಸ್ಕೋರ್‌: ಆರ್‌ಸಿಬಿ 20 ಓವರ್‌ಗಳಲ್ಲಿ 169ಕ್ಕೆ 4 (ಕೊಹ್ಲಿ ಅಜೇಯ 90, ಪಡಿಕ್ಕಲ್‌ 33, ಶಾರ್ದುಲ್‌ 40ಕ್ಕೆ 2).

ಚೆನ್ನೈ: 20 ಓವರ್‌ಗಳಲ್ಲಿ 132ಕ್ಕೆ 8 (ರಾಯುಡು 42, ಮಾರಿಸ್‌ 19ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next