Advertisement
ಮ್ಯಾಕ್ಸ್‌ವೆಲ್ “ಟಾಪ್-5 ಫ್ಲಾಪ್ಸ್’ ಆಟಗಾರರ ಯಾದಿಯಲ್ಲಿ ಅಗ್ರಸ್ಥಾನ ನೀಡಲೇಬೇಕು. ಇವರನ್ನು ಪಂಜಾಬ್ 10.7 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಮ್ಯಾಕ್ಸಿ ಮಾತ್ರ ತೀರಾ ಶೋಚನೀಯ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ದಾರೆ. 2014ರಲ್ಲಿ ಏಕಾಂಗಿಯಾಗಿ ತಂಡವನ್ನು ಫೈನಲ್ ತನಕ ಕೊಂಡೊಯ್ದಿದ್ದ ಮ್ಯಾಕ್ಸ್‌ವೆಲ್, ಮಂಗಳವಾರದ ಪಂದ್ಯಕ್ಕೂ ಮೊದಲು 9 ಮುಖಾಮುಖೀಗಳಿಂದ ಗಳಿಸಿದ್ದು ಬರೀ 58 ರನ್. ಈ ಬಿಗ್ ಹಿಟ್ಟರ್‌ನ ಬ್ಯಾಟ್‌ನಿಂದ ಒಂದೂ ಸಿಕ್ಸರ್ ಸಿಡಿದಿಲ್ಲ. ಉರುಳಿಸಿದ್ದು ಒಂದು ವಿಕೆಟ್ ಮಾತ್ರ. ಅಷ್ಟೊಂದು ಅಪಾರ ಮೊತ್ತವನ್ನು ಪಂಜಾಬ್ ನೀರಿನಲ್ಲಿ ಹೋಮ ಮಾಡಿತಲ್ಲ ಎಂದು ಅಭಿಮಾನಿಗಳು ಪರಿತಪಿಸುತ್ತಿದ್ದಾರೆ!
ಆಸ್ಟ್ರೇಲಿಯದವರೇ ಆದ ಪ್ಯಾಟ್ ಕಮಿನ್ಸ್ ಈ ಕೂಟದ ಅತ್ಯಂತ ದುಬಾರಿ ಆಟಗಾರ. ಕೆಕೆಆರ್ ಇವರಿಗೆ 15.5 ಕೋಟಿ ರೂ. ಮೊತ್ತವನ್ನು ವ್ಯಯಿಸಿದೆ. ಆದರೆ ಈ ಮೊತ್ತಕ್ಕೆ ಸಮನಾದ ಪ್ರದರ್ಶನ ಮಾತ್ರ ಕಮಿನ್ಸ್ ಅವರಿಂದ ಈ ವರೆಗೆ ಮೂಡಿಬಂದಿಲ್ಲ. 9 ಪಂದ್ಯಗಳಿಂದ ಉರುಳಿಸಿದ್ದು ಬರೀ 3 ವಿಕೆಟ್. ಬ್ಯಾಟಿಂಗ್‌ನಲ್ಲಿ ಮಾತ್ರ ಒಂದಿಷ್ಟು ಮಿಂಚಿ 126 ರನ್ ಬಾರಿಸಿದ್ದಾರೆ. ಪಂಜಾಬ್ ತಂಡದಲ್ಲಿರುವ ವೆಸ್ಟ್ ಇಂಡೀಸಿನ ವೇಗಿ ಶೆಲ್ಡನ್ ಕಾಟ್ರೆಲ್ 8.5 ಕೋಟಿ ಮೊತ್ತದ ದುಬಾರಿ ಆಟಗಾರ. ಅವರ ಮಿಲಿಟರಿ ಸೆಲ್ಯೂಟ್ ಕ್ರಿಕೆಟಿನ ಆಕರ್ಷಣೆಗಳಲ್ಲಿ ಒಂದಾಗಿತ್ತು. ಆದರೆ ಸರಣಿಯ ಆರಂಭದಲ್ಲೇನೋ ಕಾಟ್ರೆಲ್ ಕೆಲವು ಸೆಲ್ಯೂಟ್ ಹೊಡೆದರು. ಆದರೆ ಯಾವಾಗ ತೆವಾತಿಯಾ ಅವರ ಎಸೆತಗಳನ್ನು ಎಳೆದೆಳೆದು ಸಿಕ್ಸರ್‌ಗೆ ಬಡಿದಟ್ಟಿದರೋ, ಅಲ್ಲಿಗೆ ಪಂಜಾಬ್ ತಂಡವೇ ಕಾಟ್ರೆಲ್‌ಗೆ ದೊಡ್ಡ ಸೆಲ್ಯೂಟ್ ಹೇಳಿ ಆಡುವ ಬಳಗದಿಂದ ಕೈಬಿಟ್ಟಿತು! ಕಾಟ್ರೆಲ್ 6 ಪಂದ್ಯಗಳಿಂದ 6 ವಿಕೆಟ್ ಉರುಳಿಸಿದ್ದಾರೆ.