ಹೊಸದಿಲ್ಲಿ: ಐಪಿಎಲ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಸನ್‌ರೈಸರ್ ಹೈದರಾಬಾದ್ ಮತ್ತೂಂದು ಕಾಳಗಕ್ಕೆ ಅಣಿಯಾಗಿದೆ. ಗುರುವಾರ ರಾತ್ರಿ ತನ್ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸೆಣಸಲಿದೆ. “ಕೋಟ್ಲಾ’ ಅಂಗಳದಲ್ಲಿ ಈ ಮುಖಾಮುಖಿ ಏರ್ಪಡಲಿದ್ದು, ಡೆಲ್ಲಿಗೆ ಇದು 2ನೇ ತವರಿನ ಪಂದ್ಯವಾಗಿದೆ.
ಮೊಹಾಲಿಯಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಡೆಲ್ಲಿ ನಾಟಕೀಯ ಕುಸಿತ ಕಂಡು ಸೋಲನುಭವಿಸಿತ್ತು. ತವರಿನಲ್ಲಿ ಗೆಲುವಿನ ಟ್ರ್ಯಾಕ್ ಏರುವ ಅವಕಾಶ ವೊಂದು ಶ್ರೇಯಸ್ ಅಯ್ಯರ್ ಬಳಗಕ್ಕೆ ಎದುರಾಗಿದೆ. ಇನ್ನೊಂದೆಡೆ ಹೈದರಾ ಬಾದ್ ತಂಡ ಆರ್‌ಸಿಬಿ ವಿರುದ್ಧ 118 ರನ್‌ಗಳ ದೊಡ್ಡ ಅಂತರದ ಗೆಲುವು ದಾಖಲಿಸಿ ಮರೆದಿತ್ತು.
ಸಶಕ್ತ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗ ಹೊಂದಿರುವ ಸನ್‌ರೈಸರ್ಗೆ ವಾರ್ನರ್, ಬೇರ್‌ಸ್ಟೊ, ರಶೀದ್ ಖಾನ್, ಮೊಹಮ್ಮದ್ ನಬಿ ಬಲವಿದೆ. ಆರ್‌ಸಿಬಿ ವಿರುದ್ಧದ ಹಿಂದಿನ ಪಂದ್ಯದಲ್ಲಿ ಬೇರ್‌ಸ್ಟೊ, ವಾರ್ನರ್ ಇಬ್ಬರೂ ಶತಕ ಸಿಡಿಸಿ ಮೆರೆದದ್ದು ಡೆಲ್ಲಿ ಪಾಲಿಗೊಂದು ಎಚ್ಚರಿಕೆಯ ಗಂಟೆ. ಅಫ್ಘಾನ್ ಬೌಲರ್ ಮೊಹಮ್ಮದ್ ನಬಿ 11 ರನ್ನಿಗೆ 4 ವಿಕೆಟ್ ಕಿತ್ತು ಹೈದರಾಬಾದ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಪರಾಕ್ರಮ ಮುಂದುವರಿದರೆ ಡೆಲ್ಲಿ ತವರಿನಲ್ಲೂ ಪರಾದಾಡಬೇಕಾ ದೀತು. ಆಲ್‌ರೌಂಡರ್ ವಿಜಯ್ ಶಂಕರ್, ಭುವನೇಶ್ವರ್ ಕುಮಾರ್, ಯೂಸುಫ್ ಪಠಾಣ್ ಫಾರ್ಮ್ ನಿರ್ಣಾಯಕವಾಗಲಿದೆ.
ಯುವ ಆಟಗಾರರ ಡೆಲ್ಲಿ ಪಡೆ
ಯುವ ಆಟಗಾರರನ್ನೇ ನೆಚ್ಚಿರುವ ಡೆಲ್ಲಿ ತಂಡ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅದೃಷ್ಟವೂ ಕೈಕೊಡುತ್ತಿದೆ. ಇದಕ್ಕೆ ಪಂಜಾಬ್ ವಿರುದ್ಧದ ಮೊಹಾಲಿ ಪಂದ್ಯವೇ ಸಾಕ್ಷಿ. ಇಲ್ಲಿ ಡೆಲ್ಲಿಗೆ ಅಂತಿಮ 21 ಎಸೆತಗಳಲ್ಲಿ ಗೆಲ್ಲಲು ಕೇವಲ 23 ರನ್ ಬೇಕಿತ್ತು. 7 ವಿಕೆಟ್ ಕೂಡ ಕೈಯಲ್ಲಿತ್ತು. ಆದರೆ ಸ್ಯಾಮ್ ಕರನ್ ಹ್ಯಾಟ್ರಿಕ್ ಸಾಧಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿ ಡೆಲ್ಲಿಗೆ ಆಘಾತವಿಕ್ಕಿದರು. ಡೆಲ್ಲಿ ಕೊನೆಯ 7 ವಿಕೆಟ್‌ಗಳನ್ನು ಬರೀ 8 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಅವರನ್ನು ಹೆಚ್ಚು ಅವಲಂಬಿಸಿದೆ. ಅನುಭವಿ ಶಿಖರ್ ಧವನ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹನುಮ ವಿಹಾರಿ ಕೂಡ ರನ್ ಬರಗಾಲದಲ್ಲಿದ್ದಾರೆ. ರಬಾಡ, ಮಾರಿಸ್, ಲಮಿಚಾನೆ ಡೆಲ್ಲಿಯ ಬೌಲಿಂಗ್ ಸರದಿಯನ್ನು ಆಧರಿಸಬೇಕಿದೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ತವರಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಎಡವಿತ್ತು. ಬಳಿಕ ಕೆಕೆಆರ್ ವಿರುದ್ಧ ಗೆದ್ದು ಬಂದಿತ್ತು.