Advertisement

ಅಲ್ಜಾರಿ ಜೋಸೆಫ್ ದಾಳಿಗೆ ಜಾರಿದ ಹೈದರಾಬಾದ್‌

07:50 PM Apr 07, 2019 | Sriram |

ಹೈದರಾಬಾದ್‌: “ಇದು ಕನಸಿನ ಆರಂಭ. ಇದಕ್ಕಿಂತ ಉತ್ತಮ ಆರಂಭ ಸಾಧ್ಯವೇ ಇರಲಿಲ್ಲ’ ಎಂದಿದ್ದಾರೆ ಮೊದಲ ಐಪಿಎಲ್‌ ಪಂದ್ಯದಲ್ಲೇ ದಾಖಲೆಯ ಬೌಲಿಂಗ್‌ ಪ್ರದರ್ಶನವಿತ್ತ ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಅಲ್ಜಾರಿ ಜೋಸೆಫ್.

Advertisement

ರವಿವಾರ ರಾತ್ರಿ ಆತಿಥೇಯ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಸಾಮಾನ್ಯ ಮೊತ್ತ ಪೇರಿಸಿಯೂ ಇದನ್ನು ಮುಂಬೈ ಇಂಡಿಯನ್ಸ್‌ ಉಳಿಸಿಕೊಳ್ಳುವಂತಾಗಲು ಕಾರಣ ಅಲ್ಜಾರಿ ಜೋಸೆಫ್ ಅವರ ಘಾತಕ ದಾಳಿ. ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 7 ವಿಕೆಟಿಗೆ 136 ರನ್‌ ಗಳಿಸಿದರೆ, ತವರಿನಲ್ಲೇ ಆಡುತ್ತಿದ್ದ ಹೈದರಾಬಾದ್‌ 17. 4 ಓವರ್‌ಗಳಲ್ಲಿ 96 ರನ್ನಿಗೆ ಕುಸಿಯಿತು. ಜೋಸೆಫ್ ಸಾಧನೆ 12 ರನ್ನಿಗೆ 6 ವಿಕೆಟ್‌!

ವೆಸ್ಟ್‌ ಇಂಡೀಸ್‌ನ 22ರ ಹರೆಯದ ಮಧ್ಯಮ ವೇಗಿ ಆಲ್ಜಾರಿ ಜೋಸೆಫ್ ಎಸೆದ ಮೊದಲ ಓವರೇ “ವಿಕೆಟ್‌ ಮೇಡನ್‌’ ಆಗಿತ್ತು. ತಾನೆಸೆದ ಮೊದಲ ಎಸೆತದಲ್ಲೇ ಅವರು ಅಪಾಯಕಾರಿ ಆರಂಭಕಾರ ಡೇವಿಡ್‌ ವಾರ್ನರ್‌ಗೆ ಪೆವಿಲಿಯನ್‌ ಹಾದಿ ತೋರಿಸಿ ಸನ್‌ರೈಸರ್ ಮೇಲೆ ಅಪಾಯದ ಬಾವುಟ ಹಾರಿಸಿದರು. ಆದರೆ ಸಂಭ್ರಮ ಆಚರಿಸಲಿಲ್ಲ. “ನಮಗೆ ಗೆಲುವು ಮುಖ್ಯವಾಗಿತ್ತು, ಇದರತ್ತ ನಾವು ಹೆಚ್ಚಿನ ಗಮನ ನೀಡಬೇಕಿತ್ತು. ಅವರಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿದ್ದರು…’ ಎಂದರು.

ವಾರ್ನರ್‌-ಬೇರ್‌ಸ್ಟೊ 3.4 ಓವರ್‌ಗಳಲ್ಲಿ 33 ರನ್‌ ಪೇರಿಸಿದಾಗ ಈ ಪಂದ್ಯವನ್ನು ಹೈದರಾಬಾದ್‌ಗೆ ಸುಲಭದಲ್ಲಿ ಗೆಲ್ಲುತ್ತದೆಂದು ಭಾವಿಸಲಾಗಿತ್ತು. ಆದರೆ ಜಬರ್ದಸ್ತ್ ದಾಳಿ ಸಂಘಟಿಸಿದ ಜೋಸೆಫ್ ಹೈದರಾಬಾದನ್ನು ಕನಿಷ್ಠ ಮೊತ್ತಕ್ಕೆ ಉಡಾಯಿಸಿದರು. 20 ರನ್‌ ಮಾಡಿದ ದೀಪಕ್‌ ಹೂಡಾ ಅವರದೇ ಹೆಚ್ಚಿನ ಗಳಿಕೆ.

ಈ ಪಂದ್ಯಕ್ಕೂ ಮೊದಲು ಮುಂಬಯಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅಲ್ಜಾರಿ ಜೋಸೆಫ್, “ನಾನು ಭಾರತಕ್ಕೆ ಬರುತ್ತಿರುವುದು ಇದೇ ಮೊದಲು. ಈ ದೇಶ ನಾನು ಕಲ್ಪಿಸಿದಂತಿಲ್ಲ. ಇಲ್ಲಿ ಗಗನಚುಂಬಿ ಕಟ್ಟಡಗಳನ್ನೇ ಕಾಣುತ್ತಿದ್ದೇನೆ. ನನ್ನ ನಾಡಿನಲ್ಲಿ ಹೆಚ್ಚಾಗಿ ಮರ ಮತ್ತು ನೀರನ್ನು ಕಾಣಬಹುದಿತ್ತು. ಊರಿಗೆ ಮರಳುವಾಗ ಎಷ್ಟು ಸಾಧ್ಯವೋ ಅಷ್ಟು ಅನುಭವವವನ್ನು ಗಳಿಸಿ ಹೋಗಬೇಕು…’ ಎಂದಿದ್ದರು.

Advertisement

ಭಾರತದಲ್ಲಿ ಮೊದಲ ಪಂದ್ಯ
ಆ್ಯಂಟಿಗುವಾದ ಅಲ್ಜಾರಿ ಶಹೀಮ್‌ ಜೋಸೆಫ್ ಭಾರತದಲ್ಲಿ ಆಡಿದ ಮೊದಲ ಪಂದ್ಯ ಇದಾಗಿತ್ತು. ಶ್ರೀಲಂಕಾದ ವೇಗಿ ಲಸಿತ ಮಾಲಿಂಗ ದೇಶಿ ಕ್ರಿಕೆಟ್‌ ಆಡಲು ತೆರಳಿದ್ದರಿಂದ ಜೋಸೆಫ್ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿತು. ಆದರೆ ಇವರು ಮುಂಬೈ ತಂಡದ ಬದಲಿ ಆಟಗಾರನೂ ಹೌದು ಎಂಬುದನ್ನು ಇಲ್ಲಿ ಗಮನಿಸಬೇಕು. ಆ್ಯಡಂ ಮಿಲೆ° ಗಾಯಾಳಾಗಿ ಹೊರಬಿದ್ದುದರಿಂದ ಈ ಸ್ಥಾನ ಜೋಸೆಫ್ ಪಾಲಾಗಿತ್ತು. ಈ ಅವಕಾಶವನ್ನು ಅವರು ಭರ್ಜರಿಯಾಗಿ ಬಾಚಿಕೊಂಡರು.

ಅಂಡರ್‌-19 ವಿಶ್ವಕಪ್‌ ಹೀರೋ
2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಆಡಿಯಿರಿಸಿದ ಅಲ್ಜಾರಿ ಜೋಸೆಫ್ ಪಾಲಿಗೆ 2016 ಸ್ಮರಣೀಯ ವರ್ಷ. ಅಂದು ನಡೆದ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮೊದಲ ಸಲ ವಿಶ್ವ ಮಟ್ಟದಲ್ಲಿ ಸುದ್ದಿಯಾದರು. ಈ ಕೂಟದಲ್ಲಿ ಅವರು 13.76 ಸರಾಸರಿಯಲ್ಲಿ 13 ವಿಕೆಟ್‌ ಕಿತ್ತು 3ನೇ ಸ್ಥಾನ ಸಂಪಾದಿದರು. ಇದರಲ್ಲಿ ವೆಸ್ಟ್‌ ಇಂಡೀಸ್‌ ಚಾಂಪಿಯನ್‌ ಆಗಿತ್ತು. ಜಿಂಬಾಬ್ವೆ ವಿರುದ್ಧ ಗಂಟೆಗೆ 143 ಕಿ.ಮೀ. ವೇಗದಲ್ಲಿ ಬೌಲಿಂಗ್‌ ನಡೆಸಿ ಕೂಟದ ದಾಖಲೆ ಬರೆದಿದ್ದರು.

2016ರ ಆಗಸ್ಟ್‌ನಲ್ಲಿ ಪ್ರವಾಸಿ ಭಾರತದ ವಿರುದ್ಧ ಗ್ರಾಸ್‌ ಐಲೆಟ್‌ನಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸಿದ ಜೋಸೆಫ್, ಅದೇ ವರ್ಷ ಪಾಕಿಸ್ಥಾನ ವಿರುದ್ಧ ಏಕದಿನ ಪಂದ್ಯಕ್ಕೂ ಪದಾರ್ಪಣೆ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ-7 ವಿಕೆಟಿಗೆ 136 (ಪೊಲಾರ್ಡ್‌ ಔಟಾಗದೆ 46, ಡಿ ಕಾಕ್‌ 19, ಇಶಾನ್‌ ಕಿಶನ್‌ 17, ಹಾರ್ದಿಕ್‌ ಪಾಂಡ್ಯ 14, ಕೌಲ್‌ 34ಕ್ಕೆ 2, ನಬಿ 13ಕ್ಕೆ 1). ಹೈದರಾಬಾದ್‌-17.4 ಓವರ್‌ಗಳಲ್ಲಿ 96 (ಹೂಡಾ 20, ಬೇರ್‌ಸ್ಟೊ 16, ಪಾಂಡೆ 16, ವಾರ್ನರ್‌ 15, ಜೋಸೆಫ್ 12ಕ್ಕೆ 6, ಚಹರ್‌ 21ಕ್ಕೆ 2).

ಪಂದ್ಯಶ್ರೇಷ್ಠ: ಅಲ್ಜಾರಿ ಜೋಸೆಫ್.

Advertisement

Udayavani is now on Telegram. Click here to join our channel and stay updated with the latest news.

Next