Advertisement
“ನಮಗೆ ಈ ಗೆಲುವು ಅತ್ಯಂತ ಅಗತ್ಯವಿತ್ತು. ಪಂದ್ಯಾವಳಿಯ ಮಹತ್ವದ ಘಟ್ಟದಲ್ಲಿ ನಾವಿದನ್ನು ಸಾಧಿಸಿದ್ದೇವೆ. ಬಹಳ ಅಗತ್ಯವುಳ್ಳ ಎರಡಂಕವನ್ನು ಪಡೆದಿದ್ದೇವೆ. ಈ ಜಯದಲ್ಲಿ ಬೌಲರ್‌ಗಳ ಪಾತ್ರ ಮಹತ್ವದ್ದಾಗಿತ್ತು…’ ಎಂದು ಕೊಹ್ಲಿ ಹೇಳಿದರು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 7 ವಿಕೆಟಿಗೆ 167 ರನ್ ಗಳಿಸಿದರೆ, ಮುಂಬೈಗೆ ಪೇರಿಸಲು ಸಾಧ್ಯವಾದದ್ದು 7 ವಿಕೆಟಿಗೆ 153 ರನ್ ಮಾತ್ರ. ಆರಂಭಕಾರ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮ “ಡಕ್ ಔಟ್’ ಆದುದರಿಂದ ಮುಂಬೈಗೆ ಭಾರೀ ಹಿನ್ನಡೆ ಎದುರಾಯಿತು. ಅದರಲ್ಲೂ ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮ ಅವರನ್ನು ಸತತ ಎಸೆತಗಳಲ್ಲಿ ಕೆಡವಿದ ಉಮೇಶ್ ಯಾದವ್ ಮುಂಬೈಗೆ ಮರ್ಮಾಘಾತವಿಕ್ಕಿದರು. 3.2 ಓವರ್‌ಗಳಲ್ಲಿ 21 ರನ್ನಿಗೆ 3 ವಿಕೆಟ್ ಉದುರಿಸಿಕೊಂಡ ಹಾಲಿ ಚಾಂಪಿಯನ್ಸ್ ತಂಡ ತೀವ್ರ ಒತ್ತಡಕ್ಕೆ ಸಿಲುಕಿತು.
ಮಂಗಳವಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರ ಬರ್ತ್‌ಡೇ. ಅನುಷ್ಕಾ ಸ್ಟೇಡಿಯಂನಲ್ಲಿ ಹಾಜರಿದ್ದು ಕೊಹ್ಲಿ ಪಡೆಯ ಗೆಲುವಿಗೆ ಸಾಕ್ಷಿಯಾದರು. ಈ ಕುರಿತು ಪ್ರತಿಕ್ರಿಯಿಸಿದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, “ಅನುಷ್ಕಾಗೆ ಈ ಗೆಲುವು ಸಹಜವಾಗಿಯೇ ಸಂತಸ ತಂದಿದೆ. ಅವಳ ಸಮ್ಮುಖದಲ್ಲಿ ಎರಡಂಕ ಗಳಿಸಿದ್ದಕ್ಕೆ ಖುಷಿಯಾಗುತ್ತಿದೆ’ ಎಂದು ಹೇಳಿ ನಕ್ಕರು!
Related Articles
“ನಾವು ಗಳಿಸಿದ್ದು 167 ರನ್ನುಗಳ ಸಾಮಾನ್ಯ ಮೊತ್ತ. ಇದನ್ನು ಉಳಿಸಿ ಕೊಳ್ಳುವಲ್ಲಿ ಬೌಲರ್‌ಗಳ ಪಾತ್ರ ನಿರ್ಣಾಯಕವಾಗಬೇಕಿತ್ತು. ಹೀಗಾಗಿ ನಾನು ಬೌಲರ್‌ಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ನಿಮಗೆ ಬೇಕಿದ್ದ ಫೀಲ್ಡಿಂಗ್ ರಚನೆಯನ್ನು ನಿಮ್ಮ ಯೋಜನೆಯಂತೆ ನೀವೇ ಮಾಡಿ ಕೊಳ್ಳಿ ಎಂದು ಸೂಚಿಸಿದೆ. ಇದು ಯಶಸ್ವಿ ಯಾಯಿತು. ಸಿರಾಜ್, ಕಾಲಿನ್, ಸೌಥಿ ಅಮೋಘ ಬೌಲಿಂಗ್ ಪ್ರದರ್ಶಿಸಿ ದರು. ಉಮೇಶ್, ಚಾಹಲ್ ಸಾಧನೆ ಪ್ರಶಂಸನೀಯ’
ವಿರಾಟ್ ಕೊಹ್ಲಿ
Advertisement
ಅಂತಿಮ ಎಸೆತ: 13 ರನ್!ಆರ್‌ಸಿಬಿ ತನ್ನ ಅಂತಿಮ ಎಸೆತದಲ್ಲಿ 13 ರನ್ ಸಿಡಿಸಿದ್ದನ್ನು ಈ ಪಂದ್ಯಕ್ಕೆ ತಿರುವು ಕೊಟ್ಟಿತೆಂದು ಹೇಳಲಡ್ಡಿಯಿಲ್ಲ.
ಮೆಕ್ಲೆನಗನ್ ಎಸೆದ ಅಂತಿಮ ಎಸೆತ ನೋಬಾಲ್ ಆಗಿತ್ತು. ಇದನ್ನು ಗ್ರ್ಯಾಂಡ್‌ಹೋಮ್ ಸಿಕ್ಸರ್‌ಗೆ ರವಾನಿಸಿದರು. ಬಳಿಕ ಫ್ರೀ-ಹಿಟ್‌ನಲ್ಲೂ ಸಿಕ್ಸರ್ ಎತ್ತಿದರು. ಆರ್‌ಸಿಬಿಯ ಗೆಲುವಿನ ಅಂತರ 14 ರನ್ ಎಂಬುದನ್ನು ಪರಿಗಣಿಸುವಾಗ ಈ ಕೊನೆಯ ಎಸೆತದ 13 ರನ್ ಫಲಿತಾಂಶ ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದೇ ವಿಶ್ಲೇಷಿಸಬೇಕಾಗುತ್ತದೆ! ಒಂದೇ ಎಸೆತ; 2 ಸಲ 13 ರನ್!
ಆರ್‌ಸಿಬಿ-ಮುಂಬೈ ನಡುವಿನ ಪಂದ್ಯ ಸ್ವಾರಸ್ಯಕರ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಆರ್‌ಸಿಬಿ ಇನ್ನಿಂಗ್ಸ್ ವೇಳೆ 2 ಸಲ ಒಂದೇ ಎಸೆತದಲ್ಲಿ 13 ರನ್ ಹರಿದು ಬಂತು! ಮೊದಲ ಸಾಧಕ ಬ್ರೆಂಡನ್ ಮೆಕಲಮ್. ಕೊನೆಯಲ್ಲಿ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಇದನ್ನು ಪುನರಾವರ್ತಿಸಿದರು. ಹಾರ್ದಿಕ್ ಪಾಂಡ್ಯ 10ನೇ ಓವರ್‌ನಲ್ಲಿ ಎಸೆದ ನೋಬಾಲ್ ಒಂದನ್ನು ಸಿಕ್ಸರ್‌ಗೆ ರವಾನಿಸಿದ ಮೆಕಲಮ್, ಫ್ರೀ-ಹಿಟ್ ಎಸೆತಕ್ಕೂ “ಸ್ಕೂಪ್ ಶಾಟ್’ ಮೂಲಕ ಸಿಕ್ಸರ್ ರುಚಿ ತೋರಿಸಿದರು. ಇದರಿಂದ ಒಂದೇ ಎಸೆತದಲ್ಲಿ 13 ರನ್ ಬಂದಂತಾಯಿತು. ಬಳಿಕ ಮಿಚೆಲ್ ಮೆಕ್ಲೆನಗನ್ ಎಸೆದ ಅಂತಿಮ ಎಸೆತ ನೋಬಾಲ್ ಆದಾಗ ಗ್ರ್ಯಾಂಡ್‌ಹೋಮ್ ಕೂಡ 2 ಸಿಕ್ಸರ್ ಬಾರಿಸಿದರು. ಹೀಗೆ ಐಪಿಎಲ್ ಪಂದ್ಯದ ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಆಟಗಾರರಿಂದ ಮೊದಲ ಬಾರಿಗೆ ಈ ಸಾಧನೆ ದಾಖಲಾಯಿತು. 2014ರಲ್ಲಿ ಸೌರವ್ ಗಂಗೂಲಿ ಕೂಡ ಇದೇ ಸಾಹಸಗೈದಿದ್ದರು (ಕೆಕೆಆರ್-ರಾಜಸ್ಥಾನ್ ಪಂದ್ಯ). ಎಕ್ಸ್‌ಟ್ರಾ ಇನ್ನಿಂಗ್ಸ್ : ಆರ್‌ಸಿಬಿ-ಮುಂಬೈ
ಮುಂಬೈ ವಿರುದ್ಧ ಬೆಂಗಳೂರಿನಲ್ಲಿ ನಡೆದ 9 ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿ 2ನೇ ಜಯ ಸಾಧಿಸಿತು. ಉಳಿದ ಏಳನ್ನು ಮುಂಬೈ ಜಯಿಸಿದೆ. ಒಟ್ಟಾರೆಯಾಗಿ ಆರ್‌ಸಿಬಿ ವಿರುದ್ಧ ಮುಂಬೈ 13-9 ಗೆಲುವಿನ ದಾಖಲೆ ಕಾಯ್ದುಕೊಂಡಿದೆ. ಆರ್‌ಸಿಬಿ 2016ರ ಬಳಿಕ ಮುಂಬೈ ವಿರುದ್ಧ ಮೊದಲ ಗೆಲುವು ಸಾಧಿಸಿತು. ಹಾರ್ದಿಕ್ ಪಾಂಡ್ಯ ಈ ಐಪಿಎಲ್‌ನಲ್ಲಿ ಸರ್ವಾಧಿಕ 11 ವಿಕೆಟ್ ಉರುಳಿಸಿದ 5ನೇ ಬೌಲರ್ ಎನಿಸಿದರು. ಉಳಿದವರೆಂದರೆ ಸಿದ್ಧಾರ್ಥ್ ಕೌಲ್, ಮಾಯಾಂಕ್ ಮಾರ್ಕಂಡೆ, ಉಮೇಶ್ ಯಾದವ್, ಟ್ರೆಂಟ್ ಬೌಲ್ಟ್. ವಿರಾಟ್ ಕೊಹ್ಲಿ 32ನೇ ರನ್ ಗಳಿಸಿದ ವೇಳೆ ಪ್ರಸಕ್ತ ಐಪಿಎಲ್‌ನಲ್ಲಿ ಅತ್ಯಧಿಕ ಸಿಂಗಲ್ಸ್ ತೆಗೆದ ಬ್ಯಾಟ್ಸ್‌ಮನ್ ಎನಿಸಿದರು. ಇದು ಕೊಹ್ಲಿ ಗಳಿಸಿದ 113ನೇ ಸಿಂಗಲ್ ರನ್ ಆಗಿತ್ತು. ನೂರಕ್ಕಿಂತ ಹೆಚ್ಚು ಸಿಂಗಲ್ಸ್ ತೆಗೆದ ಉಳಿದಿಬ್ಬರೆಂದರೆ ಅಂಬಾಟಿ ರಾಯುಡು (108) ಮತ್ತು ಕೇನ್ ವಿಲಿಯಮ್ಸನ್ (103). ಹಾರ್ದಿಕ್ ಪಾಂಡ್ಯ ಈ ಐಪಿಎಲ್‌ನಲ್ಲಿ 50 ರನ್ ಬಾರಿಸುವ ಜತೆಗೆ 3 ವಿಕೆಟ್ ಉರುಳಿಸಿದ ಮೊದಲ ಕ್ರಿಕೆಟಿಗನೆನಿಸಿದರು. ಐಪಿಎಲ್‌ನಲ್ಲಿ ಇಂಥ ಆಲ್‌ರೌಂಡ್ ಸಾಧನೆ ದಾಖಲಾಗುತ್ತಿರುವುದು 12ನೇ ಸಲ. ಯುವರಾಜ್ ಸಿಂಗ್ ಸರ್ವಾಧಿಕ 3 ಸಲ ಈ ಸಾಧನೆಗೈದಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಸರ್ವಾಧಿಕ ರನ್ ಗಳಿಸಿದ ದಾಖಲೆ ಬರೆದರು (4,758 ರನ್). ಸುರೇಶ್ ರೈನಾ ದ್ವಿತೀಯ ಸ್ಥಾನಕ್ಕಿಳಿದರು (4,744 ರನ್). ಈ ಐಪಿಎಲ್ ಮುಗಿಯುವುದರೊಳಗಾಗಿ ಇವರಿಬ್ಬರ ನಡುವೆ ಅಗ್ರಸ್ಥಾನದ ಹಾವು-ಏಣಿ ಆಟ ಮುಂದುವರಿಯುವುದು ಖಚಿತ. ವಿರಾಟ್ ಕೊಹ್ಲಿ 2014ರ ಬಳಿಕ ಐಪಿಎಲ್‌ನಲ್ಲಿ ಮೊದಲ ಸಲ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದರು. ಅಂದು ಚೆನ್ನೈ ವಿರುದ್ಧ ಇದೇ ಕ್ರಮಾಂಕದಲ್ಲಿ ಆಡಲಿಳಿದು 49 ಎಸೆತಗಳಿಂದ 73 ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ ಒಟ್ಟು 18 ವೈಡ್ ಎಸೆತಗಳು ದಾಖಲಾದವು. ಇದು ಐಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಜಂಟಿ 2ನೇ ಅತ್ಯಧಿಕ ವೈಡ್ ಎಸೆತಗಳಾಗಿವೆ. 2011ರ ಪಂಜಾಬ್-ಕೊಚ್ಚಿ ನಡುವಿನ ಪಂದ್ಯದಲ್ಲಿ ಸರ್ವಾಧಿಕ 19 ವೈಡ್ ಎಸೆತಗಳು ದಾಖಲಾಗಿದ್ದವು. ಜೆಪಿ ಡ್ಯುಮಿನಿ ಐಪಿಎಲ್‌ನಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದರು (2,016 ರನ್).