Advertisement

ಕೊಹ್ಲಿ ಪಡೆಗೆ ರಾಹುಲ್‌-ಕರುಣ್‌ ಸವಾಲು!

06:20 AM Apr 13, 2018 | |

ಬೆಂಗಳೂರು: ಮೊದಲ ಪಂದ್ಯ ಸೋತಿರುವ ಆತಿಥೇಯ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಮೊದಲ ಪಂದ್ಯ ಗೆದ್ದಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು ಶುಕ್ರವಾರ ಚಿನ್ನಸ್ವಾಮಿ ಮೈದಾನದಲ್ಲಿ ಮುಖಾಮುಖೀಯಾಗಲಿವೆ. 

Advertisement

ವಿಶೇಷವೆಂದರೆ, ಕರ್ನಾಟಕದ ಕ್ರಿಕೆಟ್‌ ಕಲಿಗಳಿಂದ ತುಂಬಿರುವ ಪಂಜಾಬನ್ನು ಕನ್ನಡದ ತಾರೆಯರೇ ಇಲ್ಲದ ಆರ್‌ಸಿಬಿ ಎದುರಿಸುತ್ತಿರುವುದು! ಅಭಿಮಾನಿಗಳ ಬೆಂಬಲ ಯಾರಿಗೆ ಎನ್ನುವುದು ಸದ್ಯದ ಪ್ರಶ್ನೆ.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಕೊಹ್ಲಿ ಪಡೆ ಬಲಿಷ್ಠವಾಗಿದೆ. ಬ್ಯಾಟಿಂಗ್‌ನಲ್ಲಿ ಕೊಹ್ಲಿ, ಎಬಿ ಡಿ ವಿಲಿಯರ್, ಬ್ರೆಂಡನ್‌ ಮೆಕಲಮ್‌, ಕ್ವಿಂಟನ್‌ ಡಿ ಕಾಕ್‌ ಇದ್ದಾರೆ. ಬೌಲಿಂಗ್‌ನಲ್ಲಿ ಕೋರಿ ಆ್ಯಂಡರ್ಸನ್‌, ಕ್ರಿಸ್‌ ವೋಕ್ಸ್‌, ಉಮೇಶ್‌ ಯಾದವ್‌, ಯಜುವೇಂದ್ರ ಚಾಹಲ್‌ ನೆರವಿದೆ. ಇವರೆಲ್ಲ ಸಂಘಟಿತವಾಗಿ ಯಶಸ್ವಿಯಾದರೆ ಗೆಲುವು ಕಷ್ಟವಲ್ಲ.ಎಷ್ಟೇ ದೊಡ್ಡ ಮೊತ್ತವನ್ನಾದರೂ ಚೇಸ್‌ ಮಾಡುವ ಸಾಮರ್ಥ್ಯ ಕೊಹ್ಲಿ ಪಡೆಗಿದೆ. ಕೋಲ್ಕತಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಎಬಿಡಿ, ಮೆಕಲಮ್‌, ಮನ್‌ದೀಪ್‌ ಸಿಂಗ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಆದರೆ ಕೊಹ್ಲಿ ಬಹಳ ನಿಧಾನವಾಗಿ ಆಡಿದರು. ಇದರಿಂದ ರನ್‌ ಗತಿ ಕುಂಟಿತಗೊಂಡು ಆರ್‌ಸಿಬಿ ಸೋಲುವಂತಾಯಿತು.

ಮೊದಲ ಪಂದ್ಯದಲ್ಲಿ ಡೆಲ್ಲಿ ನೀಡಿದ 167 ರನ್‌ ಸವಾಲನ್ನು 18.5 ಓವರ್‌ಗಳಲ್ಲಿ ಚೇಸ್‌ ಮಾಡಿದ ಪಂಜಾಬ್‌ ಭಾರೀ ಹುಮ್ಮಸ್ಸಿನಲ್ಲಿದೆ. ಕೆ.ಎಲ್‌.ರಾಹುಲ್‌ ಅವರ ಸ್ಫೋಟಕ ಆಟ ತಂಡಕ್ಕೆ ಶಕ್ತಿ ತುಂದಿದೆ. ರಾಹುಲ್‌ ಕೇವಲ 14 ಎಸೆತದಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್‌ ದಾಖಲೆ ನಿರ್ಮಿಸಿದ್ದರು. ಮತ್ತೂಬ್ಬ ಕನ್ನಡಿಗ ಕರುಣ್‌ ನಾಯರ್‌ ಕೂಡ 33 ಎಸೆತದಲ್ಲಿ 50 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮಾಯಾಂಕ್‌ ಅಗರ್ವಾಲ್‌, ಯುವರಾಜ್‌ ಸಿಂಗ್‌ ಸಿಡಿಯುವ ಅಗತ್ಯವಿದೆ. ಆರ್‌ಸಿಬಿ ಮಾಜಿ ಆಟಗಾರ ಕ್ರಿಸ್‌ ಗೇಲ್‌ ಈ ಬಾರಿ ಪಂಜಾಬ್‌ ಪಾಲಾಗಿದ್ದು, ಶುಕ್ರವಾರ ಕಣಕ್ಕಿಳಿಯಬಹುದೇ ಎಂಬುದೊಂದು ಕುತೂಹಲ.

Advertisement

Udayavani is now on Telegram. Click here to join our channel and stay updated with the latest news.

Next