Advertisement

ಡೆಲ್ಲಿಯ ನಾಯಕತ್ವದಿಂದ ಕೆಳಗಿಳಿದ ಗಂಭೀರ್‌: ಶ್ರೇಯಸ್‌ ನೂತನ ನಾಯಕ

06:00 AM Apr 26, 2018 | Team Udayavani |

ಹೊಸದಿಲ್ಲಿ: ಸತತ ಸೋಲಿನಿಂದ ಬಹಳಷ್ಟು ಒತ್ತಡಕ್ಕೆ ಒಳಗಾಗಿರುವ ಗೌತಮ್‌ ಗಂಭೀರ್‌ ಬುಧವಾರ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಹುದ್ದೆಗೆ ನಾನು ಪರಿಪೂರ್ಣ ಯೋಗ್ಯನಲ್ಲವೆಂಬ ಕಾರಣ ನೀಡಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. 36ರ ಹರೆಯದ ಗಂಭೀರ್‌ ಡೆಲ್ಲಿ ತಂಡದ ಇನ್ನುಳಿದ ಎಂಟು ಪಂದ್ಯಗಳಿಗೆ ತಂಡದ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಡೆಲ್ಲಿಯ ಈ ಋತುವಿನ ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ನೂತನ ನಾಯಕರಾಗಿರುತ್ತಾರೆ ಎಂದು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಫ್ರಾಂಚೈಸಿ ಹೇಳಿಕೊಂಡಿದೆ. ಕೋಚ್‌ ರಿಕಿ ಪಾಂಟಿಂಗ್‌ ಮತ್ತು ತಂಡದ ಸಿಇಒ ಹೇಮಂತ್‌ ದುವಾ ಉಪಸ್ಥಿತರಿದ್ದರು.

Advertisement

ಕೋಟ್ಲದಲ್ಲಿ ನಡೆದ ಈ ಹಿಂದಿನ ಪಂದ್ಯದ ಬಳಿಕ ನಾಯಕತ್ವ ತೊರೆ ಯುವ ಬಗ್ಗೆ ಅಲೋಚನೆ ನಡೆಸಿದ್ದೇನೆ ಮತ್ತು ಇದು ಸರಿಯಾದ ಸಮಯ ಕೂಡ. ಸ್ವತಃ ನನ್ನ ನಿರ್ವಹಣೆ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾಗಾಗಿ ನಾಯಕತ್ವದ ಒತ್ತಡದಿಂದ ಹಿಂದೆ ಸರಿದು ಆಟದತ್ತ ಗಮನ ಹರಿಸುವೆ ಎಂದು ಗಂಭೀರ್‌ ತಿಳಿಸಿದರು.

ಡಿಲ್ಲಿ ಕೊನೆಯ ಸ್ಥಾನ
ಈ ಬಾರಿಯಾದರೂ ಐಪಿಎಲ್‌ನಲ್ಲಿ ಯಶಸ್ಸು ಸಾಧಿಸಬೇಕೆಂಬ ನಿರೀಕ್ಷೆಯೊಂದಿಗೆ ಗಂಭೀರ್‌ ಮತ್ತು ಪಾಂಟಿಂಗ್‌ ಅವರನ್ನು ಸೇರಿಸಿ ಕೊಳ್ಳಲು ಫ್ರಾಂಚೈಸಿ ನಿರ್ಧರಿಸಿತ್ತು. ಆದರೆ ಅವರ ಈ ನಿರ್ಧಾರ ಫ‌ಲ ಕೊಡಲಿಲ್ಲ. ಡೆಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ.

ಒತ್ತಡವಿರಲಿಲ್ಲ
ಹುದ್ದೆಯಿಂದ ಕೆಳಗಿಳಿಯಲು ಯಾವುದೇ ಒತ್ತಡವಿರಲಿಲ್ಲ. ಇದು ನನ್ನದೇ ನಿರ್ಧಾರ. ಯಾಕೆಂದರೆ ನನ್ನ ಸಾಧನೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಹಾಗಾಗಿ ಒತ್ತಡ ವನ್ನು ನಿಭಾಯಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಕೆಳಗಿಳಿದೆ ಎಂದು ಗಂಭೀರ್‌ ತಿಳಿಸಿದರು. ಕೆಕೆಆರ್‌ಗೆ ಸೇರಿಕೊಂಡಾಗ ನನಗೆ 28 ವರ್ಷ. ಈಗ 36 ವರ್ಷ. ಒತ್ತಡವನ್ನು ಆವಾಗ ಚೆನ್ನಾಗಿ ನಿಭಾ ಯಿಸಲು ಸಾಧ್ಯವಾಗಿತ್ತು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2.8 ಕೋಟಿ ರೂ. ವೇತನ ಬೇಡ
ಕೋಲ್ಕತಾ:
ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ದುರಂತ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ಗೌತಮ್‌ ಗಂಭೀರ್‌ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ತನ್ನ ಈ ಋತುವಿನ 2.8 ಕೋಟಿ ರೂ.ಗಳ ಪೂರ್ತಿ ವೇತನವನ್ನು ಕೈಬಿಡಲು ನಿರ್ಧರಿಸಿದ್ದಾರೆ. ಗಂಭೀರ್‌ ಅವರು ನಿರ್ವಹಣೆ ನೀಡದ ಕಾರಣಕ್ಕಾಗಿ ವೇತನವನ್ನು ಕೈಬಿಡಲು ನಿರ್ಧರಿಸಿದ ಐಪಿಎಲ್‌ನ ಮೊದಲ ನಾಯಕ ಆಗಿರುವ ಸಾಧ್ಯತೆಯಿದೆ. ಗಂಭೀರ್‌ ಅವರು ಈ ಋತುವಿನಲ್ಲಿ ಫ್ರಾಂಚೈಸಿಯಿಂದ ವೇತನವನ್ನು ಪಡೆಯುವುದಿಲ್ಲ. ಆದರೆ ಡೆಲ್ಲಿ ಪರ ಇನ್ನುಳಿದ ಎಂಟು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ. 

Advertisement

ಆಟಗಾರರಾಗಿ ಅವರು ಈ ಋತುವಿನಲ್ಲಿ ಆಡಲಿದ್ದಾರೆ. ಐಪಿಎಲ್‌ ಮುಗಿದ ಬಳಿಕ ತನ್ನ ಭವಿಷ್ಯದ ಬಗ್ಗೆ ತಿಳಿಸಲಿದ್ದಾರೆ. 
ನನಗೇನೂ ಗೊತ್ತಿಲ್ಲ. ನಿವೃತ್ತಿಯನ್ನು ನಿರ್ಧರಿಸಲು ಇದು ಬೇಗ ಆಯಿತು. ಆರಾಮವಾಗಿ ಕೂತು ಆಲೋಚಿಸಿ ಈ ಬಗ್ಗೆ ನಿರ್ಧರಿಸುವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ನಾಯಕತ್ವದ ಒತ್ತಡ
ನಾಯಕತ್ವದ ಒತ್ತಡವನ್ನು ನಿಭಾಯಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಹಾಗಾಗಿ ನಾನೊಬ್ಬನೇ ಕುಳಿತು ತುಂಬಾ ಹೊತ್ತು ಆಲೋಚನೆ ಮಾಡಿದ ಬಳಿಕ ಈ ನಿರ್ಧಾರಕ್ಕೆ ಬಂದೆ ಎಂದು ಗಂಭೀರ್‌ ತಿಳಿಸಿದರು. ಗಂಭೀರ್‌ ಈ ಹಿಂದೆ ಕೋಲ್ಕತಾ ನೈಟ್‌ರೈಡರ್  ತಂಡದ ನೇತೃತ್ವ ವಹಿಸಿ ಎರಡು ಬಾರಿ ಐಪಿಎಲ್‌ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದೊಂದು ದಶಕದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next