ಬೆಂಗಳೂರು: ನಾಯಕ ಧೋನಿ ಅಜೇಯ 70 ರನ್ ಸಿಡಿಸುವ ಮೂಲಕ ಗಮನ ಸೆಳೆದಿರಬಹುದು. ಆದರೆ ಚೆನ್ನೈ ಗೆಲುವಿಗೆ ಆರಂಭಿಕ ಅಂಬಾಟಿ ರಾಯುಡು ಅವರ 53 ಎಸೆತಗಳ 82 ರನ್ ಪ್ರಮು ಪಾತ್ರ ವಹಿಸಿದೆ ಎಂದು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಧೋನಿ ಹೆಚ್ಚಾಗಿ ಗಮನ ಸೆಳೆಯುವ ಆಟ ಆಡುತ್ತಾರೆ. ಆದರೆ ರಾಯುಡು ಅವರ ಇನ್ನಿಂಗ್ಸ್ ಮಹೋನ್ನತವಾದದ್ದು. ಯಾವುದೇ ಪರಿಸ್ಥಿತಿಯಲ್ಲಿ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಗಮನಾರ್ಹ ನಿರ್ವಹಣೆ ನೀಡಿದ್ದರು. ಎಂದು ಪಂದ್ಯದ ಬಳಿಕ ಫ್ಲೆಮಿಂಗ್ ತಿಳಿಸಿದರು.
ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ರಾಯುಡು ಚೆನ್ನೈ ಗೆಲುವಿನ ರೂವಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಲುವಿಗಾಗಿ ಅವರು ಪಡುತ್ತಿರುವ ಶ್ರಮ ಗಮಿನಿಸದೇ ಹೋಗಿರಬಹುದು. ಆದರೆ ಈ ವರ್ಷ ಅವರು ನೀಡಿದ ಕೊಡುಗೆಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ನನಗಂತೂ ಅವರ ನಿರ್ವಹಣೆ ಬಹಳಷ್ಟು ಖುಷಿ ತಂದಿದೆ ಎಂದು ಫ್ಲೆಮಿಂಗ್ ತಿಳಿಸಿದರು.
ರಾಯುಡು ಈ ತಂಡದ ಭಾಗವಾಗಿರುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅವರ ಆಕ್ರಮಣಕಾರಿ ಆಟದಿಂದಾಗಿ ತಂಡ ಸದೃಢವಾಗಿದೆ. ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ಅವರು ಆತ್ಮವಿಶ್ವಾಸದಿಂದಲೇ ಆಡಿದ್ದಾರೆ. ಉತ್ತಮ ಬ್ಯಾಟಿಂಗ್ ಫಾರ್ಮ್ ಅನ್ನು ಅನುಭವಿಸುತ್ತಿದ್ದಾರೆ ಎಂದು ಫ್ಲೆಮಿಂಗ್ ವಿವರಿಸಿದರು.
30 ಎಸೆತಗಳಲ್ಲಿ 68 ರನ್ ಸಿಡಿಸಿದ ಆರ್‌ಸಿಬಿಯ ಡಿ’ವಿಲಿಯರ್ ಅವರನ್ನು ಕೂಡ ಫ್ಲೆಮಿಂಗ್ ಹೊಗಳಿದರು. ಡಿ’ವಿಲಿಯರ್ ಬೆಂಗಳೂರಿಗೆ ಪಂದ್ಯ ಗೆಲ್ಲಿಸಿಕೊಡಬಹುದೆಂದು ಭಾವಿಸಿದ್ದೆವು. ಇದೊಂದು ಬ್ಯಾಟಿಂಗಿಗೆ ನಿಧಾನ ಮತ್ತು ಕಠಿನ ಪಿಚ್ ಎಂಬುದು ತಿಳಿದಿದ್ದೆವು. ಡಿ’ವಿಲಿಯರ್ ನಮ್ಮ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಡಿ’ವಿಲಿಯರ್ ಇನ್ನೂ ಕೆಲವು ಹೊತ್ತು ಕ್ರೀಸ್‌ನಲ್ಲಿದ್ದರೆ ನಮಗೆ ಅಪಾಯ ಇತ್ತು ಎಂದು ಫ್ಲೆಮಿಂಗ್ ಹೇಳಿದರು.
ವಿಕೆಟ್‌ಗೆ ಪ್ರಯತ್ನ: ಕಾಕ್
ಚೆನ್ನೈಯ ಬಹುತೇಕ ಎಲ್ಲರೂ ಬ್ಯಾಟಿಂಗ್ ಮಾಡುವ ಕಾರಣ ಸಾಧ್ಯವಾದಷ್ಟು ವಿಕೆಟ್ ಪಡೆಯುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ಉಮೇಶ್ ಯಾದವ್, ಯುಜುವೇಂದ್ರ ಚಹಲ್ ಅವರ ಓವರ್‌ಗಳು ಬೇಗನೇ ಮುಗಿಯಿತು. ಆರಂಭದಲ್ಲಿ ನಾವು ಕೆಲವು ವಿಕೆಟ್ ಪಡೆದು ಮೇಲುಗೈ ಸಾಧಿಸಿದ್ದೆವು. ಆರಂಭದ ನಾಲ್ಕು ವಿಕೆಟನ್ನು ಬೇಗನೇ ಪಡೆದಿದ್ದೆವು. ಆದರೆ ರಾಯುಡು ಮತ್ತು ಧೋನಿ ನಮ್ಮ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು ಎಂದು ಕ್ವಿಂಟನ್ ಡಿ ಕಾಕ್ ತಿಳಿಸಿದರು.