ಹೊಸದಿಲ್ಲಿ: ಐಪಿಎಲ್ ಅಂದರೆ “ಕ್ರಿಕೆಟ್ ಮ್ಯಾರಥಾನ್’. ಕೇವಲ 15-20 ದಿನ ಗಳಲ್ಲಿ ಮುಗಿದು ಹೋಗುವ ಪಂದ್ಯಾವಳಿ ಇದಲ್ಲ. 8 ತಂಡಗಳ ನಡುವೆ ಇಲ್ಲಿ ಎರಡೆರಡು ಸುತ್ತುಗಳ ಸುದೀರ್ಘ ಸ್ಪರ್ಧೆ ಸಾಗುತ್ತದೆ. ತಂಡವೊಂದು ಕನಿಷ್ಠ 14, ಗರಿಷ್ಠ 17 ಪಂದ್ಯ ಗಳನ್ನು ಆಡಬೇಕಾಗುತ್ತದೆ. ದಿಲ್ಲಿಯ ಆ ತುದಿಯಿಂದ ಬೆಂಗಳೂರಿನ ಈ ತುದಿಯ ತನಕ, ಮುಂಬಯಿಯಿಂದ ಕೋಲ್ಕತಾ ತನಕ ಪ್ರಯಾಣಿಸಬೇಕಾದ್ದರಿಂದ ಆಟಗಾರರು ಕಾಲಿಗೆ ಚಕ್ರ ಕಟ್ಟಿಕೊಂಡೇ ಇರಬೇಕಾಗುತ್ತದೆ.
ಹಾಗಾದರೆ ಈ ಐಪಿಎಲ್ ಸಮರದ ವೇಳೆ ಆಟಗಾರರು ಒಟ್ಟು ಎಷ್ಟು ದೂರ ವಿಮಾನ ಹಾಗೂ ಇತರ ವಾಹನಗಳಲ್ಲಿ ಸಂಚಾರ ನಡೆಸಿರಬಹುದು? ಇಂಥದೊಂದು ಪ್ರಶ್ನೆ, ಕುತೂಹಲ ಈವರೆಗೆ ಅಷ್ಟಾಗಿ ಯಾರನ್ನೂ ಕಾಡಿರಲಿಕ್ಕಿಲ್ಲ. ಕಾಡಿದರೂ ಇದಕ್ಕೆ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಿರಲಿಕ್ಕಿಲ್ಲ. ಆದರೆ ಈ ಬಾರಿ ಕ್ರಿಕೆಟಿಗರ ಸಂಚಾರ ದೂರವನ್ನು ಲೆಕ್ಕ ಹಾಕಲಾಗಿದೆ. ಇಲ್ಲಿ ಕೆಲವು ಕೌತುಕದ ಅಂಕಿಅಂಶಗಳು ದಾಖಲಾಗಿವೆ.
ಕೆಕೆಆರ್ ಗರಿಷ್ಠ, ಮುಂಬೈ ಕನಿಷ್ಠ
10ನೇ ಐಪಿಎಲ್‌ನಲ್ಲಿ ಅತ್ಯಧಿಕ ದೂರ ಪ್ರಯಾಣ ಮಾಡಿದ ತಂಡ ಕೋಲ್ಕತಾ ನೈಟ್‌ರೈಡರ್. ದ್ವಿತೀಯ ಕ್ವಾಲಿಫಯರ್‌ನಲ್ಲಿ ಸೋತ ಕೆಕೆಆರ್ ಒಟ್ಟು 18,530 ಕಿ.ಮೀ. ದೂರ ಸಂಚಾರ ನಡೆಸಿದೆ. ಫೈನಲ್ ತನಕ ಪ್ರವೇಶಿಸಿದರೂ ಮುಂಬೈ ಇಂಡಿಯನ್ಸ್ ತಂಡದ ಪಯಣದ ದೂರ ಕೇವಲ 8,205 ಕಿ.ಮೀ. ಇದು ಉಳಿದೆಲ್ಲ ಫ್ರಾಂಚೈಸಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ.
ಮಾಜಿ ಆದ ಸನ್‌ರೈಸರ್ ಹೈದರಾಬಾದ್ 13,178 ಕಿ.ಮೀ., ಸತತ ಸೋಲುಂಡ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಫೈನಲಿಸ್ಟ್ ಪುಣೆಗಿಂತ ಹೆಚ್ಚಿನ ದೂರ ಪಯಣಿಸಿರುವುದು ವಿಶೇಷ. ಆರ್‌ಸಿಬಿ ಆಟಗಾರರ ಸಂಚಾರದ ಒಟ್ಟು ದೂರ 11,383 ಕಿ.ಮೀ. ಆರ್‌ಸಿಬಿ ಮುತ್ತ ಡೆಲ್ಲಿ ತಂಡಗಳ ಆಟಗಾರರು ಹೊಸದಿಲ್ಲಿ ಹೊಟೇಲಿನಿಂದ ಕೋಟ್ಲಾ ಅಂಗಳಕ್ಕೆ “ಡೆಲ್ಲಿ ಮೆಟ್ರೋ’ದಲ್ಲಿ ಸಂಚರಿಸಿರುವುದನ್ನು ಗಮನಿಸಬೇಕು. ಹಾಗೆಯೇ ಡೆಲ್ಲಿ ವಿರುದ್ಧದ ಬೆಂಗಳೂರು ಪಂದ್ಯದ ವೇಳೆ ಹಸಿರು ಸಮವಸ್ತ್ರ ಧರಿಸಿದ ಆರ್‌ಸಿಬಿ ಆಟಗಾರರು “ಚಿನ್ನಸ್ವಾಮಿ ಸ್ಟೇಡಿಯಂ’ಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆಗಮಿಸಿದ್ದರು.
ಈ ಐಪಿಎಲ್ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ 11,936 ಕಿ.ಮೀ., ಗುಜರಾತ್ ಲಯನ್ಸ್ 11,441 ಕಿ.ಮೀ. ದೂರ ಸಂಚಾರ ಮಾಡಿದೆ. ಪುಣೆ ಪಯಣಿಸಿದ ದೂರ 9,024 ಕಿ.ಮೀ. ಮಾತ್ರ. ಡೆಲ್ಲಿ ಡೇರ್‌ಡೆವಿಲ್ಸ್ ಪಯಣದ ದೂರ 9,655 ಕಿ.ಮೀ.