ಶಾರ್ಜಾ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಸ್ಫೋಟಕ ಆಟವಾಡುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದರು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅವರಿಗೆ ಹಿಂಬಡ್ತಿ ನೀಡುವ ಮೂಲಕ ಆರ್‌ಸಿಬಿ ತಂಡ ಎಡವಟ್ಟು ಮಾಡಿಕೊಂಡಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಕಾರಣ ವಿವರಿಸಿದ್ದಾರೆ.
ಪಂಜಾಬ್ ತಂಡದಲ್ಲಿ ಇಬ್ಬರು ಲೆಗ್ ಸಿನ್ನರ್‌ಗಳಿದ್ದರು ಹೀಗಾಗಿ ಎಡಗೈ-ಬಲಗೈ ಜೋಡಿ ಕ್ರೀಸ್‌ನಲ್ಲಿರಬೇಕೆಂಬ ಕಾರಣಕ್ಕಾಗಿ ಎಡಗೈ ಬ್ಯಾಟ್ಸ್‌ಮನ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರಿಗೆ ಬಡ್ತಿ ನೀಡಲಾಯಿತು. ಇದರಿಂದ ಎಬಿಡಿ ಎಂದಿನ 4ನೇ ಕ್ರಮಾಂಕಕ್ಕೆ ಬದಲಾಗಿ 6ನೇ ಕ್ರಮಾಂಕದಲ್ಲಿ ಆಡಬೇಕಾಯಿತು. ಆದರೆ ಕೆಲವೊಮ್ಮೆ ನಮ್ಮ ಕಾರ್ಯತಂತ್ರಗಳು ವಿಫಲವಾಗುತ್ತವೆ. ನಮ್ಮ ನಿರ್ಧಾರ ಸರಿಯಾಗಿಯೇ ಇತ್ತು. ಆದರೆ ಅದು ಫಲಿಸಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಆರ್‌ಸಿಬಿ ತಂಡದ 172 ರನ್ ಸವಾಲಿಗೆ ಪ್ರತಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್‌ಗ ಕನ್ನಡಿಗರಾದ ಮಯಾಂಕ್ ಅಗರ್ವಾಲ್ (45) ಮತ್ತು ನಾಯಕ ಕೆ.ಎಲ್. ರಾಹುಲ್ (61) ಜೋಡಿ ಉತ್ತಮ ಆರಂಭ ಒದಗಿಸಿತು. ಬಳಿಕ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಕ್ರಿಸ್ ಗೇಲ್ (53) ಕೂಡ ರಾಹುಲ್‌ಗೆ ಉತ್ತಮ ಸಾಥ್ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ ಚಾಹಲ್ ಎಸೆದ ಕೊನೇ ಓವರ್‌ನ 5ನೇ ಎಸೆತದಲ್ಲಿ ಗೇಲ್ ರನೌಟಾದರು. ಇದರಿಂದ ಕೊನೇ ಎಸೆತದಲ್ಲಿ 1 ರನ್ ಬೇಕಾಗಿದ್ದಾಗ ನಿಕೋಲಸ್ ಪೂರನ್ ಸಿಕ್ಸರ್ ಸಿಡಿಸಿ ಗೆಲುವು ತಂದರು.
171 ರನ್ ರಕ್ಷಿಸಿಕೊಳ್ಳುವ ವಿಶ್ವಾಸವಿತ್ತು. ಆದರೆ ಬೌಲಿಂಗ್‌ನಲ್ಲಿಯೂ ನಮ್ಮ ಕೆಲವು ತಂತ್ರಗಳು ಫಲಿಸಲಿಲ್ಲ ಎಂದು ಕೊಹ್ಲಿ ಹೇಳಿದರು. ಸದಾ ಪವರ್‌ಪ್ಲೇಯಲ್ಲಿ ನಿಯಂತ್ರಿತ ಬೌಲಿಂಗ್ ನಡೆಸುತ್ತಿದ್ದ ವಾಷಿಂಗ್ಟನ್ ಸುಂದರ್ ಈ ಬಾರಿ ತಡವಾಗಿ ದಾಳಿಗಿಳಿದರು. ವಾಷಿಂಗ್ಟನ್ ಅವರನ್ನು ಬಳಸಿ ವನ್‌ಡೌನ್‌ನಲ್ಲಿ ಕ್ರೀಸ್‌ಗಿಳಿಯುವ ಕ್ರಿಸ್ ಗೇಲ್ ಅವರನ್ನು ಕಟ್ಟಿಹಾಕುವುದಾಗಿತ್ತು ನಮ್ಮ ಯೋಜನೆಯಾಗಿತ್ತು. ಆದರೆ ಗೇಲ್ ಅವರು ವಾಷಿಂಗ್ಟನ್ ಎಸೆತದಲ್ಲಿ 4 ಸಿಕ್ಸರ್ ಸಿಡಿಸಿ ಈ ಯೋಜನೆಯನ್ನು ವಿಫಲವಾಗಿಸಿದರು ಎಂದು ಕೊಹ್ಲಿ ಹೇಳಿದ್ದಾರೆ.