ಟೋಕಿಯೊ: ಕೋವಿಡ್-19 ಕಾರಣದಿಂದ ಟೋಕಿಯೊ ಒಲಿಂಪಿಕ್ಸ್ ಬರೋಬ್ಬರಿ ಒಂದು ವರ್ಷ ಮುಂದೂ ಡಲ್ಪಟ್ಟಿದ್ದು, ಇದರಿಂದ ಸಂಘಟಕರಿಗೆ ಭಾರೀ ಆರ್ಥಿಕ ನಷ್ಟ ಸಂಭವಿಸಿದೆ. ಇದನ್ನು ತುಂಬಿಸಿಕೊಡಲು ಮುಂದಾಗಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ (ಐಒಸಿ) ತುರ್ತು ನೆರವಿಗಾಗಿ 800 ಮಿಲಿಯನ್ ಡಾಲರ್ ಮೊತ್ತವನ್ನು ಬಿಡುಗಡೆ ಮಾಡಿದೆ. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಇದನ್ನು ಪ್ರಕಟಿಸಿದ್ದಾರೆ.
“ಟೋಕಿಯೊ ಒಲಿಂಪಿಕ್ಸ್ ಮುಂದೂಡಲ್ಪಟ್ಟಿರುವುದರಿಂದ ಸಂಘಟಕರಿಗೆ ಭಾರೀ ನಷ್ಟ ಸಂಭವಿಸಿದೆ. ಇದನ್ನು ತುಂಬಲು ನಮ್ಮ ಕಡೆಯಿಂದ 800 ಮಿ. ಡಾಲರ್ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ’ ಎಂದು ಥಾಮಸ್ ಬಾಶ್ ಆನ್‌ಲೈನ್ ವೀಡಿಯೋ ಸಮಾವೇಶದಲ್ಲಿ ತಿಳಿಸಿದರು.
ಮೂಲ ವೇಳಾಪಟ್ಟಿ ಪ್ರಕಾರ ಟೋಕಿಯೊ ಒಲಿಂಪಿಕ್ಸ್ ಈ ವರ್ಷದ ಜು. 24ರಿಂದ ಆ. 9ರ ತನಕ ನಡೆಯಬೇಕಿತ್ತು. ಆದರೀಗ ಒಂದು ವರ್ಷ ಮುಂದೂಡಲ್ಪಟ್ಟಿದ್ದು, 2021ರ ಜು. 23ರಿಂದ ಆ. 8ರ ತನಕ ಸಾಗಲಿದೆ. ಇದರಿಂದ ಒಲಿಂಪಿಕ್ ಸಂಘ ಟನಾ ಸಮಿತಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಲಿದೆ.
ಐಒಸಿ ಬಿಡುಗಡೆ ಮಾಡಿದ ಮೊತ್ತದಲ್ಲಿ 650 ಮಿ. ಡಾಲರ್ ಸಂಘಟನಾ ಸಮಿತಿಯ ಪಾಲಾಗಲಿದೆ. ಉಳಿದ 150 ಮಿ. ಡಾಲರ್ ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೀಡಲಾ ಗುವುದು. ಅಪಾರ ಆರ್ಥಿಕ ನಷ್ಟದಿಂದ ಈ ಒಕ್ಕೂಟಗಳು ತನ್ನ ಸಿಬಂದಿಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಇದನ್ನು ತಪ್ಪಿಸುವುದು ಐಒಸಿಯ ಉದ್ದೇಶವಾಗಿದೆ.
ಇದೇ ವೇಳೆ ಒಲಿಂಪಿಕ್ ಕನಸು ಕಾಣುತ್ತಿರುವ ಬಡದೇಶಗಳ ಕ್ರೀಡಾಪಟುಗಳಿಗೆ 15 ಮಿ. ಡಾಲರ್ ನೆರವು ನೀಡುವ ಸ್ವಿಜರ್‌ಲ್ಯಾಂಡ್ ಸರಕಾರದ ಯೋಜನೆಯನ್ನು ಬಾಕ್ ಸ್ವಾಗತಿಸಿದರು.
2021ರ ಕೂಟದ ಭವಿಷ್ಯ?
ಮುಂದಿನ ವರ್ಷವೂ ಕೋವಿಡ್-19 ವೈರಸ್ ಇದೇ ರೀತಿ ತನ್ನ ಪ್ರಭಾವ ಬೀರುತ್ತ ಹೋದರೆ ಒಲಿಂಪಿಕ್ಸ್ ಆಯೋಜನೆ ಸಾಧ್ಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಕ್, “ನಮ್ಮ ಮುಂದೆ ಇನ್ನೂ ಒಂದು ವರ್ಷ, ಎರಡು ತಿಂಗಳ ಕಾಲಾವಕಾಶ ಇದೆ. ಈಗಲೇ ಚಿಂತಿಸುವ ಅಗತ್ಯ ಕಾಣದು’ ಎಂದರು.