Advertisement

ಎಸ್‌ಬಿಆರ್‌ ಸುವರ್ಣ ಮಹೋತ್ಸವಕ್ಕೆ ಉಪರಾಷ್ಟ್ರಪತಿಗೆ ಆಹ್ವಾನ

01:22 PM Sep 07, 2018 | Team Udayavani |

ಕಲಬುರಗಿ: ದಕ್ಷಿಣ ಭಾರತದಲ್ಲಿ ಐದು ದಶಕಗಳ ಹಿಂದೆ ಪಬ್ಲಿಕ್‌ ಶಾಲೆಗೆ ಮುನ್ನುಡಿ ಹಾಡಿದ ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌)ಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಉಪರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಾಗಿದೆ.

Advertisement

ಸುವರ್ಣ ಮಹೋತ್ಸವ ಅರ್ಥ ಪೂರ್ಣವಾಗಿ ಆಚರಿಸಲು ಹಾಗೂ ಶಾಲೆಯಲ್ಲಿ ಶಿಕ್ಷಣ ಪಡೆದು ದೇಶ- ವಿದೇಶಗಳಲ್ಲಿ ಹಲವು ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಹಾಗೂ ಹಲವು ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳ ಪುನರ್‌ಮಿಲನ ಉತ್ಸವ ಹಮ್ಮಿಕೊಳ್ಳಲಾಗಿದೆ.
 
ನವೆಂಬರ್‌ 9ರಿಂದ 13ರ ವರೆಗೆ ಐತಿಹಾಸಿಕ ಎನ್ನುವಂತೆ ಎಸ್‌ಬಿಆರ್‌ ಸುವರ್ಣ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೇಶದ ಗಣ್ಯರು ಹಾಗೂ ಮುಖಂಡರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

ಸುವರ್ಣ ಮಹೋತ್ಸವ ಹಾಗೂ ಪುನರ್‌ ಮಿಲನ ಉತ್ಸವಕ್ಕೆ ಚಾಲನೆ ನೀಡಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಇತರ ಗಣ್ಯರನ್ನು ಆಹ್ವಾನಿಸಲು ಮಾಜಿ ಸಂಸದ ಡಾ| ಬಸವರಾಜ ಪಾಟೀಲ ಸೇಡಂ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ, ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್‌ ಹಾಗೂ ಸಂಸ್ಥೆಯ ಮತ್ತು ಶಾಲೆಯ ಮುಖಂಡರು ನವದೆಹಲಿಗೆ ತೆರಳಿ ಆಹ್ವಾನ ನೀಡಿದ್ದಾರೆ.
 
ಉಪರಾಷ್ಟ್ರಪತಿಗಳನ್ನು ಭೇಟಿಯಾಗಿ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಅಲ್ಲದೇ ಎಸ್‌ಬಿಆರ್‌ ಸುವರ್ಣ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಪುನರ್‌ ಮಿಲನ್‌ ಕುರಿತಾಗಿ ಸಮಗ್ರ ಮಾಹಿತಿ
ನೀಡಲಾಯಿತು. ಅದೇ ರೀತಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಆಹ್ವಾನಿಸಲಾಗಿದೆ. ಅದೇ ರೀತಿ ಇತರ ಗಣ್ಯರನ್ನು ಭೇಟಿ ಮಾಡಲಾಗಿದೆ. ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರು ಭೇಟಿಯಾಗಿರುವುದನ್ನು ಟ್ವಿಟರ್‌ನಲ್ಲಿ ಕಲಬುರಗಿ ಶಾಸಕ ದತ್ತಾತ್ರೇಯ ಪಾಟೀಲ ಹಾಗೂ ಅವರ ತಂಡದ ಹೆಸರನ್ನು ಪ್ರಸ್ತಾಪಿಸಿ ಪ್ರತಿಕ್ರಿಯಿಸಿದ್ದಾರೆ.

ಭೇಟಿ ವೇಳೆ ತಂಡದ ಜತೆಗೆ ಪ್ರಶಾಂತ ಮಾನಕರ್‌, ಅಪ್ಪು ಕಣಕಿ ಮುಂತಾದವರಿದ್ದರು. ಐದು ದಿನಗಳ ವಿವಿಧ ಹಂತದ ಗೋಷ್ಠಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ
ಸ್ವಾಮೀಜಿ, ಮೈಸೂರು ಸುತ್ತೂರು ಮಠದ ಡಾ| ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಕೊಪ್ಪಳ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹಾಗೂ ನಾಡಿನ ಮಹಾಸ್ವಾಮೀಗಳನ್ನು ಭೇಟಿಯಾಗಿ ಮಹೋತ್ಸವಕ್ಕೆ ಆವ್ಹಾನಿಸಲಾಗಿದೆ. ಖ್ಯಾತ ವಾಘಿಗಳಾದ ಸೂಲಿಬೆಲೆ ಚಕ್ರವರ್ತಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿದತಂತೆ ಹಲವರು ವಿಷಯ ಮಂಡಿಸುವರು.

ಒಟ್ಟಾರೆ ಎಸ್‌ಬಿಆರ್‌ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಪುನರ್‌ಮಿಲನ ಉತ್ಸವ ಐತಿಹಾಸಿಕ ನಡೆಸಲು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ
ವಿವಿ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಮಾರ್ಗದರ್ಶನದಲ್ಲಿ ಕುಲಪತಿಗಳಾದ ಡಾ| ನಿರಂಜನ್‌ ನಿಷ್ಠಿ, ಕುಲಸಚಿವರಾದ ಪ್ರೊ| ಅನೀಲಕುಮಾರ ಬಿಡವೆ, ಸಹ ಕುಲಪತಿ ಡಾ| ವಿ.ಡಿ. ಮೈತ್ರಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಎಸ್‌ಬಿಆರ್‌ ಶಾಲೆ ಪ್ರಾಚಾರ್ಯ ಎನ್‌. ಎಸ್‌. ದೇವರಕಲ್‌ ಹಾಗೂ ಇತರ ಪರಿಣಿತರ ನೇತೃತ್ವದಲ್ಲಿ ಕೆಲಸ ಕಾರ್ಯಗಳು ನಡೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next