ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಭು ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
“ಇತ್ತೀಚೆಗೆ ನಡೆದ ಟ್ರಸ್ಟ್ ಸಮಿತಿ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಅಕ್ಟೋಬರ್ ವೇಳೆಗೆ ದೇಗುಲದ ಕೆಳ ಅಂತಸ್ತು ಸಿದ್ಧವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ದೇಗುಲದ ಸಂಪೂರ್ಣ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
“ಪ್ರಭು ರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ದಿನಾಂಕಗಳ ಬಗ್ಗೆ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಅವರು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಏಳು ಜ್ಯೋತಿಷಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ’ ಎಂದರು.
“ಇದೇ ವಾರ ನಡೆದ ಟ್ರಸ್ಟ್ ಸಮಿತಿ ಸಭೆಯಲ್ಲಿ 11 ಮಂದಿ ಪದಾಧಿಕಾರಿಗಳು ಹಾಜರಿದ್ದರು. ಟ್ರಸ್ಟ್ ಸಂಸ್ಥಾಪಕ ಸದಸ್ಯರಾದ ಕೆ.ಪರಾಶರನ್ ಅವರು ವರ್ಚುಯಲ್ ಮೂಲಕ ಹಾಜರಾದರು. ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರ ಸಹಿಯೊಂದಿಗೆ ಆಹ್ವಾನಪತ್ರವನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಲಾಗುವುದು. ಇದೇ ವರ್ಷದ ಡಿಸೆಂಬರ್ ಮತ್ತು 2024ರ ಜ.26ರ ನಡುವಿನ ದಿನಾಂಕಗಳ ಪೈಕಿ ಒಂದು ದಿನಾಂಕವನ್ನು ನಿಗದಿಪಡಿಸಲಾಗುವುದು’ ಎಂದು ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.