ಉಡುಪಿ: ರವಿವಾರ ಸಂಜೆ ಹೊಸದಿಲ್ಲಿಯ ರೈಸಿನಾ ಹಿಲ್ಸ್ ನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಆಹ್ವಾನ ನೀಡಲಾಗಿದೆ.
ಪ್ರಧಾನಿ ಕಾರ್ಯಾಲಯದಿಂದ ತಡರಾತ್ರಿ ಮಾಹಿತಿ ತಲುಪಿದೆ. ಹೀಗಾಗಿ ಬೆಂಗಳೂರಿನಲ್ಲಿದ್ದ ಪೇಜಾವರ ಶ್ರೀ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಪ್ರಧಾನಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಮರಣೋತ್ತರ ಪದ್ಮವಿಭೂಷಣ ನೀಡಲಾಗಿತ್ತು.
ಮೋದಿ 3.0
2014, 2019ರಲ್ಲಿ ಬಿಜೆಪಿಯ ಭರ್ಜರಿ ಜಯದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದ ಮೋದಿ ಅವರು ಈ ಬಾರಿ ಎನ್‌ಡಿಎ ಮಿತ್ರ ಪಕ್ಷಗಳ ನೆರವಿನೊಂದಿಗೆ ಆಡ ಳಿತ ನಡೆಸಲಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸೀಟು ಗೆದ್ದು ಬಹುಮತದ ಕೊರತೆ ಅನುಭವಿಸಿದ್ದರಿಂದ ಮೋದಿಯವರು ಮೊದಲ ಬಾರಿಗೆ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸುತ್ತಿದ್ದಾರೆ. ಹಾಗಾಗಿ ಮೋದಿ 3.0 ಆಡಳಿತವು ವಿಶಿಷ್ಟವಾಗಿರಲಿದೆ. ಜೆಡಿಯು, ಟಿಡಿಪಿ ಸಹಿತ ವಿವಿಧ ಪಕ್ಷಗಳ ಬಲದೊಂದಿಗೆ ಎನ್‌ಡಿಎ ಕೂಟದ ಬಲ ಈಗ 300 ದಾಟಿದೆ.
ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ನೇಪಾಲ, ಮಾರಿಷಸ್, ಸೀಷೆಲ್ಸ್, ಮಾಲ್ದೀವ್ಸ್ ಸರಕಾರಗಳ ಮುಖ್ಯಸ್ಥರು ಹಾಜರಾಗಲಿದ್ದಾರೆ.