Advertisement

ಜಾನಪದ ಶೈಲಿಯಲಿ ಒಡ್ಡೋಲಗದ ಆಮಂತ್ರಣ

02:30 PM Oct 24, 2021 | Shwetha M |

ಮುದ್ದೇಬಿಹಾಳ: ತಾಲೂಕಿನ ಹಾಲುಮತ ಮೂಲ ಗುರುಪೀಠ ಇರುವ ಸುಕ್ಷೇತ್ರ ಸರೂರ ಗ್ರಾಮದಲ್ಲಿ ಅ. 24ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಅಖೀಲ ಭಾರತೀಯ ಪಶುಪಾಲಕ ಕ್ಷತ್ರೀಯರ ಟ್ರಸ್ಟ್‌ ಮತ್ತು ಕುರುಬರ ಚಿಂತನ ಮಂಥನ ಚಾವಡಿ ಆಶ್ರಯದಲ್ಲಿ ನಡೆಯಲಿರುವ ಒಡ್ಡೋಲಗ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆ ಹಂಚುವ ವಿನೂತನ ಪ್ರಯತ್ನ ಗದಗ ಮತ್ತು ವಿಜಯಪುರ ಜಿಲ್ಲೆಗಳ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗತೊಡಗಿದೆ.

Advertisement

1996ರಲ್ಲಿ ಡಾ| ಶಿವರಾಜಕುಮಾರ ಅಭಿನಯದ ಜನುಮದ ಜೋಡಿ ಚಲನಚಿತ್ರ ಬಿಡುಗಡೆಗೊಂಡು ಭಾರೀ ಸದ್ದು ಮಾಡಿತ್ತು. ಅದರಲ್ಲಿ ಶಿವರಾಜಕುಮಾರ ಮತ್ತು ಸಂಗಡಿಗರು ನಟಿಸಿದ್ದ ಜಾನಪದ ಶೈಲಿಯ ಉಘೇ ಮಾತ್‌ ಮಲ್ಲಯ್ಯ…ಕೋಲು ಮಂಡೆ ಜಂಗಮ ದೇವ ಗುರುವೇ ಕ್ವಾರುಣ್ಯಕ್ಕೆ ದಯ ಮಾಡವ್ರೆ.. ಹಾಡು ಸಾಕಷ್ಟು ಜನಪ್ರೀಯಗೊಂಡು ಎಲ್ಲೆಡೆ ಪ್ರಚಾರದಲ್ಲಿತ್ತು.

ಅದೇ ಜಾನಪದ ಹಾಡಿನ ಶೈಲಿಯಲ್ಲಿ ಉಘೇ ಮಾತ್‌ ಮಲ್ಲಯ್ಯ…ಕೋಲು ಮಂಡೆ ಜಂಗಮ ದೇವ ಆಮಂತ್ರಣ ನೀಡಲು ಬಂದವ್ರೆ ಮಾದೇವಾ.. ಸಾಹಿತ್ಯಕ್ಕೆ ಬದಲಾಯಿಸಿ ಜಾನಪದ ವಾದ್ಯಗಳನ್ನು ಬಳಸಿಕೊಂಡು ಸುಶ್ರಾವ್ಯವಾಗಿ ಹಾಡುವ ಮೂಲಕ ಹಾಲುಮತ ಸಮಾಜದವರ ಮನೆಮನೆಗೆ ತೆರಳಿ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಬಿನ್ನವಿಸಿಕೊಳ್ಳುವ ಸನ್ನಿವೇಶದ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವುದು ವಿನೂತನ ಪ್ರಯೋಗವನ್ನು ಹೊರಜಗತ್ತಿಗೆ ತಿಳಿಸಿಕೊಟ್ಟಂತಾಗಿದೆ.

ಗದಗ ಕೆಎಸ್‌ಎಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಜಾನಪದ ತಜ್ಞ ಡಾ| ಸಿದ್ದಣ್ಣ ಜಕಬಾಳ ಅವರ ತಂಡ ಈ ವಿನೂತನ ಆಮಂತ್ರಣದ ರೂವಾರಿಗಳಾಗಿದ್ದು ತಮ್ಮ ಇಬ್ಬರು ಸಹಪಾಠಿಗಳೊಂದಿಗೆ ತಾವೇ ಧ್ವನಿ ಕೊಟ್ಟು ಹಾಡಿರುವ ಮತ್ತು ಕುಟುಂಬದ ಸದಸ್ಯರಿಗೆ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಬರಬೇಕು ಎಂದು ಜಾನಪದ ಹಾಡಿನ ಶೈಲಿಯಲ್ಲೇ ಆಮಂತ್ರಿಸುವ ವಿಭಿನ್ನ ಆಲೋಚನೆ ಹರಿಬಿಟ್ಟು ಭೇಷ್‌ ಎನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

Advertisement

1 ಗಂಟೆ 56 ನಿಮಿಷ ಅವಧಿಯ ವಿಡಿಯೋದಲ್ಲಿ ಉಘೇ ಮಾತ್‌ ಮಲ್ಲಯ್ಯ ಎನ್ನುವ ಜಯಘೋಷದೊಂದಿಗೆ ಪ್ರಾರಂಭಗೊಳ್ಳುವ ಗಾಯನವು ಕೋಲು ಮಂಡೆ ಜಂಗಮ ದೇವ ಆಮಂತ್ರಣ ನೀಡಲು ಬಂದವ್ರೆ ಮಾದೇವಾ.. ಅಖೀಲ ಭಾರತೀಯ ಪಶುಪಾಲಕ ಕ್ಷತ್ರೀಯರ ಹುಡುಗರು ಶಿವಾ…ಕುರುಬರ ಚಿಂತನ ಮಂಥನ ಚಾವಡಿಯ ವಿಧ್ವಾಂಸರು ಶಿವಾ.. ಒಡ್ಡೋಲಗ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಅಂದಾನೆ ಮಾದೇವಾ.. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಶಿವಾ.. ಸರುರು ರೇವಣ ಸಿದ್ದೇಶ್ವರ ಮಠದ ಆವರಣ ಶಿವಾ.. ಇದೇ ತಿಂಗಳು 24 ರವಿವಾರ 11 ಗಂಟೆಗೆ ಅಂದಾನೆ ಮಾದೇವಾ.. ಸಿದ್ದಯ್ಯ ಒಡೆಯರು ಮಹಾಸ್ವಾಮಿಗಳು ಶಿವಾ.. ಸಹದೇವಯ್ಯ ಒಡೆಯರು ಮಹಾಸ್ವಾಮಿಗಳು ಶಿವಾ.. ಕಾಡಯ್ಯ ಒಡೆಯರು ಮಹಾಸ್ವಾಮಿಗಳು ಶಿವಾ.. ಈ ಸ್ವಾಮಿಗಳ ಸಾನ್ನಿಧ್ಯ ಎಂದಾನೆ ಮಾದೇವಾ.. ಆಮಂತ್ರಣ ಸ್ವೀಕರಿಸಬೇಕಂದಾನೆ ಶಿವಾ.. ಇಬ್ಬರೂ ಕೂಡಿ ಸ್ವೀಕರಿಸಬೇಕಂದಾನೆ ಶಿವಾ.. ಈ ಹುಡುಗನ್ನೂ ಸಮಾರಂಭಕ್ಕೆ ಕರ್ಕೊಂಡು ಬಾ ಅಂದಾನೆ ಮಾದೇವಾ.. ಫಲವಾಗತೈತವ್ವೋ ಶುಭವಾಗತೈತವ್ವೋ… ಮಾತ್‌ ಮಲ್ಲಯ್ಯ, ಉಘೇ ಮಾತ್‌ ಮಲ್ಲಯ್ಯ? ಎಂದು ಪ್ರಾಸಬದ್ಧವಾಗಿರುವ ಹಾಡಿನ ಮಧ್ಯೆ ಮಧ್ಯೆ ಪಲ್ಲವಿಯನ್ನು ಎರಡೆರಡು ಬಾರಿ ಉತ್ಛರಿಸಿ ಮನ ಸೆಳೆಯುವಂತೆ, ಕಿವಿಗೆ ಇಂಪು ನೀಡುವಂತೆ ಮಾಡಲಾಗಿದೆ.

ಸುಶ್ರಾವ್ಯ ಕಂಠಸಿರಿ, ವಾದ್ಯಗಳ ಮೇಳ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ. ಜಾನಪದ ಶೈಲಿಯ ಈ ವಿನೂತನ ಆಮಂತ್ರಣ ನೀಡುವಿಕೆ ಜಾನಪದ ವಲಯದಲ್ಲಿ ಹೊಸದೊಂದು ಸಂದರ್ಭ, ಸಾಂಗತ್ಯಕ್ಕೆ ನಾಂದಿ ಹಾಡಿದಂತಾಗಿದ್ದು ಮುಂದಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಬೇಕು ಎನ್ನುವುದು ಜಾನಪದ ವಿಧ್ವಾಂಸರ ಅಪೇಕ್ಷೆಯಾಗಿದೆ.

-ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next