Advertisement
ಇದಕ್ಕೆ ಶುಕ್ರವಾರ ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಲಿಂಗಾಯತರ ಬಗ್ಗೆ ಚರ್ಚಿಸಲು ಪೇಜಾವರ ಶ್ರೀಗಳು ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀಗಳು, ಸಹೋದರ ಭಾವದಿಂದ ಚರ್ಚೆಗೆ ಆಹ್ವಾನಿಸಿದರೆ, ನನ್ನ ಬಗ್ಗೆ ಅವರಿಗೇಕೆ ಅಷ್ಟೊಂದು ಆಕ್ರೋಶ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಾಟೀಲ್ ಮತ್ತು ಶ್ರೀಗಳ ನಡುವಿನ ಮಾತಿನ ಚಕಮಕಿಯ ಝಲಕ್ ಇಲ್ಲಿದೆ.
* ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಎಲ್ಲಿಯೋ ಕುಳಿತು, ತಮ್ಮೊಂದಿಗೆ ಚರ್ಚಿಸಲು ಬರುವಂತೆ ನಮಗೆ ಪಂಥಾಹ್ವಾನ ನೀಡಲು ಪೇಜಾವರ ಶ್ರೀಗಳು ಯಾರು?. ಶ್ರೀಗಳದ್ದು ತಟಸ್ಥ ಪಕ್ಷವಲ್ಲ. ಅವರು ಪ್ರಧಾನಿಯೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ, ನಮ್ಮ ಹೈಕಮಾಂಡ್ ಕೂಡ ಅಲ್ಲ. * ಪೇಜಾವರರು ಕೂಡ ನಮ್ಮ ಹೋರಾಟದಲ್ಲಿ ನಮ್ಮ ವಿರೋಧಿ ಪಕ್ಷವಾಗಿದ್ದಾರೆ.
Related Articles
Advertisement
* ಅವರಿಗೆ ನಿಜಕ್ಕೂ ಬದ್ಧತೆ ಇದ್ದರೆ ಅವರ ಸವಾಲನ್ನು ಸ್ವೀಕರಿಸಲು ಸಿದ್ಧ. ಆದರೆ, ಅವರು ಕರೆಯುವ ಸ್ಥಳಕ್ಕೆ ನಾವು ಹೋಗಲು ಸಾಧ್ಯವಿಲ್ಲ. ಅವರೇ ನಾವು ಕರೆಯುವ ಸ್ಥಳಕ್ಕೆ ಬಂದು ಚರ್ಚಿಸಲಿ. ಲಿಂಗಾಯತ ಸಮುದಾಯದ ಸಾಣೆಹಳ್ಳಿ ಶ್ರೀಗಳು, ಡಾ|ಎಸ್.ಎಂ.ಜಾಮದಾರ, ಅರವಿಂದ ಜತ್ತಿ ಅವರಂತಹ ನಾಯಕರು ಕರೆಯುವ ಸ್ಥಳಕ್ಕೆ ಬಂದು ಚರ್ಚಿಸಲಿ.
* ನಮ್ಮ ಧರ್ಮಕ್ಕೆ ಕೈ ಹಾಕುವ ಮುನ್ನ ತಮ್ಮ ಧರ್ಮದಲ್ಲಿ, ಅದರಲ್ಲೂ ವಿಶೇಷವಾಗಿ, ತಮ್ಮದೇ ಆದ ಉಡುಪಿಯ ಅಷ್ಟ ಮಠಗಳಲ್ಲಿರುವ ಹೊಲಸನ್ನು, ಹುಳುಕುಗಳನ್ನು ಸರಿ ಮಾಡಿಕೊಳ್ಳಲಿ. ತಮ್ಮದೇ ಮಠಗಳ ಓರ್ವ ಮಠಾ ಧೀಶರು ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎಂಬುದನ್ನು ಹೇಳಲಿ. ಇತರ ಧರ್ಮದ ವಿಷಯದಲ್ಲಿ ಅನಗತ್ಯವಾಗಿ ತಲೆ ಹಾಕುವುದನ್ನು, ಕೆದಕುವುದನ್ನು, ಕೆಣಕುವುದನ್ನು ಹಿರಿಯರಾದ ಪೇಜಾವರ ಶ್ರೀಗಳು ಇನ್ನಾದರೂ ಕೈ ಬಿಡಲಿ.
ಸಹೋದರ ಭಾವದಿಂದ ಮಾತನಾಡಿದರೆ ಏಕೆ ಆಕ್ರೋಶ?ಲಿಂಗಾಯತರೂ ಹಿಂದೂಗಳೇ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಸಹೋದರ ಭಾವದಿಂದ, ನಾನು ಸೌಜನ್ಯದಿಂದ ಕೇಳಿದರೆ ಅವರು ಅಷ್ಟೊಂದು ಆಕ್ರೋಶಭರಿತವಾಗಿ ಮಾತನಾಡಲು ಕಾರಣವೇನು?. ಎಂ.ಬಿ.ಪಾಟೀಲ್ ಅವರು ನನ್ನ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಕಾರಣ ತಿಳಿಯುತ್ತಿಲ್ಲ. * ಉದ್ವೇಗ, ಆಕ್ರೋಶ ಸರಿಯಲ್ಲ. ನಾನು ಲಿಂಗಾಯತ ಮತವನ್ನು ಸರಿಪಡಿಸಲು ಹೋಗುತ್ತಿಲ್ಲ. ಸ್ನೇಹದಿಂದ ಹಿಂದೂ ಧರ್ಮದಲ್ಲಿಯೇ ಇರಿ ಎಂದು ಹೇಳುತ್ತಿದ್ದೇನೆ ಅಷ್ಟೇ. ನಾನು ಅವರಲ್ಲಿನ ಹುಳುಕು ಹೇಳಿದ್ದೇನಾ?. * ನಮಗೆ ಬಸವಣ್ಣನವರ ಬಗ್ಗೆ ಬಹಳ ಗೌರವವಿದೆ. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಜೊತೆಗೆ, ಲಿಂಗಾಯತ ಮತದ ಬಗ್ಗೆ ಯಾವುದೇ ದೋಷಾರೋಪ ಮಾಡಿಲ್ಲ. * ನಮ್ಮ ಹುಳುಕಿನ ಬಗ್ಗೆ ಅವರು ಹೇಳಿದ್ದಾರೆ. ಎಲ್ಲವನ್ನೂ ಒಟ್ಟಿಗೆ ಮಾತನಾಡುವುದು ಬೇಡ. ಮೊದಲು ರಾಜ್ಯವನ್ನು ಸರಿಪಡಿಸೋಣ. ನಂತರ, ರಾಷ್ಟ್ರವನ್ನು ಸರಿಪಡಿಸೋಣ. ನಮ್ಮ ಅಷ್ಟ ಮಠಗಳಲ್ಲಿಯೂ ಅನೇಕ ಲೋಪದೋಷಗಳು ಉಂಟು. ಮಾಧ್ವರಲ್ಲಿಯೂ ಇದೆ. ಎಲ್ಲಾ ಕಡೆ ಸರಿಪಡಿಸುವ ಕೆಲಸ ಮಾಡುತ್ತೇವೆ. * ನಮ್ಮ ಜೀವನ ಅಷ್ಟೊಂದು ದೊಡ್ಡದಿಲ್ಲ. ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದು, ಬ್ರಾಹ್ಮಣರು, ದಲಿತರು ಎಲ್ಲರ ಬಗ್ಗೆಯೂ ನಮಗೆ ಚಿಂತನೆ ಉಂಟು. ಅವರಿಗೆ ಅನುಕೂಲ ಮಾಡಿಕೊಡದೆ ಇರುತ್ತೇವೆಯೇ?. * ಹಿಂದೂ ಧರ್ಮ ಎಂದರೆ ಹಿಂದೂ ದೇಶದ ಧರ್ಮ. ಬಸವಣ್ಣ, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜರು, ಮಹಾವೀರ, ಬುದ್ಧ ಎಲ್ಲರೂ ಈ ದೇಶದಲ್ಲಿ ಅವತಾರ ಎತ್ತಿ, ಧರ್ಮ ಪ್ರಸಾರ ಮಾಡಿದ್ದಾರೆ. ಈ ದೇಶದ ಸಂತರು, ಪ್ರವರ್ತಕರು ಮಾಡಿದ ಧರ್ಮ ಹಿಂದೂ ಧರ್ಮ. ಇದರಲ್ಲಿ ವಿವಾದವೇ ಇಲ್ಲ. ನಿಮ್ಮ ಸಿದ್ಧಾಂತಗಳ ಬಗ್ಗೆ ನಾವು ಖಂಡನೆ ಮಾಡಿಲ್ಲ. ನೀವೂ ಹಿಂದೂಗಳು. ನೀವು ನಮ್ಮನ್ನು ಬಿಡಬೇಡಿ ಎಂದು ಸಲಹೆ ನೀಡಿದ್ದೇನೆ. * ವೀರಶೈವರು ಬೇರೆಯಲ್ಲ, ಲಿಂಗಾಯತರು ಬೇರೆಯಲ್ಲ. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ನಡೆಯುತ್ತದೆ. ನಾನು ಪಂಥಾಹ್ವಾನ ಅಥವಾ ಸವಾಲು ಅಂತ ಶಬ್ಧ ಪ್ರಯೋಗ ಮಾಡಿಯೇ ಇಲ್ಲ. ಎಲ್ಲರಿಗೂ ಆಹ್ವಾನ ನೀಡಿದ್ದೇನೆ ಅಷ್ಟೇ. ನಮ್ಮನ್ನು ವಿರೋಧ ಮಾಡುವವರನ್ನು ಸಂವಾದಕ್ಕೆ ಬನ್ನಿ ಎಂದು ಸ್ನೇಹದ ಆಹ್ವಾನ ನೀಡಿದ್ದೇನೆ ಅಷ್ಟೇ. * ಅವರು ದಲಿತರನ್ನು ತಮ್ಮ ಮತದಲ್ಲಿನ ಮಠದ ಮಠಾಧೀಶರನ್ನಾಗಿ ಮಾಡುತ್ತಾರಾ?. ಅವರವರ ಧರ್ಮದ ಬಗ್ಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಅವರಿಗುಂಟು. ಮೊನ್ನೆ ಬುದ್ಧಿಜೀವಿಯೊಬ್ಬರು ನಾನು ರಾಜಕೀಯ ಮಾಡುತ್ತಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆದ ಕೂಡಲೇ ಅವರನ್ನು ಭೇಟಿ ಮಾಡಿ ಕೈ ಕುಲುಕಿದ್ದಾರೆ ಅಂತ ಹೇಳಿದ್ದಾರೆ. ನಾನು ಅವರ ಬಳಿ ಹೋಗಿಲ್ಲ. ನಾನು ಕಾರಲ್ಲಿ ಹೋಗುತ್ತಿದ್ದೆ. ಯಡಿಯೂರಪ್ಪ ಅವರು ಅದೇ ಮಾರ್ಗದಲ್ಲಿ ಅಲ್ಲಿಗೆ ಬಂದರು. ಕಾರಿನಿಂದ ಇಳಿದು ನಮ್ಮ ಬಳಿ ಬಂದರು. ನಾನು ಸೌಜನ್ಯದಿಂದ ಅವರನ್ನು ಮಾತನಾಡಿಸಿದೆ. ಅದನ್ನು ರಾಜಕೀಯ ಎನ್ನುತ್ತಾರೆ. ನಾನಾಗಿಯೇ ಅವರ ಮನೆಗೆ ಹೋಗಿಲ್ಲ. ಆದರೂ ಬುದ್ಧಿ ಜೀವಿಗಳಿಗೆ ನನ್ನ ಮೇಲೆ ಏಕೆ ಆಕ್ರೋಶವೋ ಗೊತ್ತಿಲ್ಲ.
-ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ