Advertisement

ಹೂಡಿಕೆ ಎಂಬ ಸೆರಗಿನ ಕೆಂಡ

06:00 AM Oct 08, 2018 | |

ಒಂದು ಕಂಪನಿ, ಆರಂಭದಲ್ಲಿ ಕೋಟ್ಯಂತರ ರುಪಾಯಿ ಮೊತ್ತದ ಬಂಡವಾಳ ಹೊಂದಿರುತ್ತದೆ. ಅದರ ಷೇರುಗಳನ್ನು ಖರೀದಿಸಿದರೆ, ಅದರಿಂದ ಲಾಭ ಮಾಡಬಹುದು ಎಂಬುದು ಹಲವರ ಲೆಕ್ಕಾಚಾರ ಆಗಿರುತ್ತದೆ.  ಆದರೆ, ಕೋಟ್ಯಂತರ ವ್ಯವಹಾರದ ಕೆಲವೊಂದು ಆರಂಭವಾದ ನಷ್ಟದ ಹಾದಿ ಹಿಡಿಯುತ್ತದೆ. ಇಂಥ ಸಂದರ್ಭಗಳಲ್ಲಿ, ಅದುವರೆಗೂ ಹಾಲು ಕೊಡುತ್ತಿದ್ದ ಹಸು ದಿಢೀರನೆ ಒದೆಯಲು ಆರಂಭಿಸಿದಂಥ ಅನುಭವ ಹೋಡಿಕೆದಾರರಿಗೆ ಆಗುತ್ತದೆ. 

Advertisement

ಹೂಡಿಕೆ ಮಾಡುವುದಕ್ಕೆ ಯಾವ ಕಂಪನಿಯನ್ನು ನಾವು ಆಯ್ಕೆ ಮಾಡುತ್ತೇವೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ. ಮೊನ್ನೆಯವರಿಗೆ ಯಥೇಚ್ಚವಾಗಿ ಹಾಲುಕೊಡುತ್ತಿದ್ದ ಹಸು, ಮರುದಿನವೇ ಒದೆಯಲು ಆರಂಭಿಸಬಹುದು. ಈ ರೀತಿ ಒದ್ದರೆ ಮುಂದಿನ ಗತಿ ಏನು? ಅನ್ನೋ ಯೋಚನೆ ಬಂದಾಗ, ಹೂಡಿಕೆಯೇ ಸೆರಗಿನ ಕೆಂಡವಾಗಿಬಿಡುತ್ತದೆ. ಒಂದು ಸಲ ಹೀಗೆ ಆದರೆ, ಆ ವ್ಯಕ್ತಿಯ ಕುಟುಂಬ, ಸ್ನೇಹಿತರ ಬಳಗ ಹೀಗೆ ಕಂಗಾಗಿ, ಹೂಡಿಕೆಯಿಂದ ದೂರ ನಿಂತು ಬಿಡುತ್ತದೆ. 

ಕಂಪೆನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದಾದರೆ ಅವುಗಳ ಹಿನ್ನೆಲೆ ತಿಳಿದಿರಬೇಕು, ಈಗ ಷೇರುಗಳ ಬೆಲೆ ಎಷ್ಟಿದೆ, ಹಿಂದೆ ಎಷ್ಟಿತ್ತು ಅನ್ನೋ ಇತಿಹಾಸ ಗೊತ್ತಿರಬೇಕು.  ಇಗನ್ನೆಲ್ಲ ಗೊತ್ತು ಮಾಡಿಕೊಳ್ಳುವ ತಾಳ್ಮೆಯೂ ಬೇಕು.  ಮಧ್ಯವರ್ತಿಗಳು,  ಏನೇ ಹೇಳಿದರೂ, ನಿಮ್ಮಲ್ಲಿರುವ ಹಣವನ್ನು ಹೂಡಿಕೆ ಮಾಡಿಸುವುದೇ ಅದರ ಹಿಂದಿರುವ ಮೂಲ ಉದ್ದೇಶ ಆಗಿರುತ್ತದೆ. ಅದಕ್ಕೆ ತಕ್ಕಂತೆ ಏನು ಬೇಕೋ, ಹೇಗೆ ಬೇಕೋ ಹಾಗೇ ಹೇಳುತ್ತಾರೆ.

ಹೀಗಾಗಿ, ಹೂಡಿಕೆ ಮಾಡುವ ಮೊದಲು ಎಚ್ಚರ ವಿರಬೇಕು. ಹಾಗೆಯೇ ಎಷ್ಟೇ ಲಾಭದಲ್ಲಿದ್ದ ಕಂಪನಿಯೇ ಆಗಿರಲಿ; ಅದು ಕೆಲವೇ ದಿನಗಳಲ್ಲಿ ನಷ್ಟಕ್ಕೆ ಮುಖ ಮಾಡಬಹುದು. ಈ ಮಾತಿಗೆ ಅತ್ಯಂತ ಸೂಕ್ತ ಉದಾಹರಣೆಯೆಂದರೆ ಐಎಲ್‌ ಆ್ಯಂಡ್‌  ಎಫ್ಎಸ್‌. 2014 ರ ನಂತರ ಮೂಲಸೌಕರ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಂಸ್ಥೆಗಳೂ ಗಗನಮುಖೀಯೇ ಆಗಿದ್ದವು.

ಅದರಲ್ಲೂ ಐಎಲ್‌ ಆ್ಯಂಡ್‌ ಎಫ್ಎಸ್‌ ಅಂತೂ ಷೇರುದಾರರ ಮೆಚ್ಚಿನ ಕಂಪನಿಗಳಲ್ಲಿ ಒಂದಾಗಿತ್ತು. 2000 ನೇ ಇಸ್ವಿಯ ಅಕ್ಟೋಬರ್‌ 24 ರಂದು ಗುಜರಾತ್‌ನ ಹಲೋಲ್‌ ಮತ್ತು ಬರೋಡಾದ ಮಧ್ಯೆ ಮೊದಲ ಟೋಲ್‌ ರೋಡ್‌ ಅನ್ನು ಈ ಕಂಪನಿ ಅನಾವರಣಗೊಳಿಸಿತ್ತು. ಇದು ಕಂಪನಿಯ ಮೊದಲ ಮಹತ್ವದ ಯಶಸ್ವಿ ಯೋಜನೆ. ಈ ಸಂದರ್ಭದಲ್ಲಿಯೇ, ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಪ್ರತಿಭಟನೆಯೂ ನಡೆಯಿತು.

Advertisement

ರಾಜಕಾರಣಿಗಳು ನಡೆಸಿದ ಈ ಹೋರಾಟವನ್ನು ರೈತರೂ ಬೆಂಬಲಿಸಿದರು. ಇದು ರಸ್ತೆ ಹಾಗೂ ಇತರ ಮೂಲಸೌಕರ್ಯ ಯೋಜನೆಗಳಲ್ಲಿ ರೈತರಿಗೆ ಉತ್ತಮ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಚರ್ಚೆಗೆ ನಾಂದಿಯಾಯಿತು. ಈಗ ಕಂಪನಿ, 12 ವರ್ಷಗಳ ತನ್ನ ಪಯಣದಲ್ಲಿ ರಕ್ತ ಸಿಕ್ತ ಅಧ್ಯಾಯಕ್ಕೆ ಕಾಲಿಟ್ಟಿದೆ. ಭೂಸ್ವಾಧೀನದಲ್ಲಿ ಉದ್ಭವಿಸುವ ರೈತರ ಪ್ರತಿಭಟನೆ ಹಾಗೂ ಆಕ್ರೋಶವನ್ನು ಕಡಿಮೆ ಮಾಡಿ, ರೈತರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಲು ಸರ್ಕಾರ ಕಡೆಗೂ ಕ್ರಮ ಕೈಗೊಂಡಿತು.

ಇದಕ್ಕೆ ಸಂಬಂಧಿಸಿದಂತೆ,  ಹೊಸ ಕಾನೂನೂ ರೂಪಿಸಿತು. ಇದು ಭೂಮಿ ಕಳೆದುಕೊಳ್ಳುವ ರೈತರಿಗೇನೋ ಉತ್ತಮ ಆದಾಯ ತಂದುಕೊಟ್ಟಿತು. ಆದರೆ ಅವರಿಗೆ ದುಡ್ಡುಕೊಟ್ಟವರ ಜೇಬು ನಿಧಾನವಾಗಿ ಖಾಲಿಯಾಗತೊಡಗಿತು. ಇದರಿಂದಾಗಿ, ರಸ್ತೆ ಯೋಜನೆಗಳೆಲ್ಲ ಸರ್ಕಾರ ಹಾಗೂ ಇದನ್ನು ನಿರ್ವಹಿಸುತ್ತಿರುವ ಕಂಪನಿಗಳಿಗೆ ಹೊರೆಯಾಗಲಾರಂಭಿಸಿತು. ಒಂದು ರಸ್ತೆ ಯೋಜನೆಯ ಹಿಂದೆ ಹಲವು ಕೈಗಳಿರುತ್ತವೆ.

ಸರ್ಕಾರದಿಂದ ಟೆಂಡರ್‌ನಲ್ಲಿ ಕಂಪನಿಯೊಂದು ಆರ್ಡರ್‌ ತೆಗೆದುಕೊಳ್ಳುತ್ತಿದ್ದಂತೆ, ಅದಕ್ಕೆ ಅಗತ್ಯವಿರುವ ಹಣ ಹೊಂದಿಸಲು ಸಾಲ ಪಡೆಯುತ್ತದೆ. ಕಾಮಗಾರಿ ಮುಗಿಯುತ್ತಿದ್ದಂತೆ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂಬ ವಿಶ್ವಾಸದಲ್ಲಿ ಬ್ಯಾಂಕ್‌ಗಳು, ಟೆಂಡರ್‌ ಪಡೆದ ಕಂಪನಿಗಳಿಗೆ ಸಾಲ ನೀಡುತ್ತವೆ. ಆದರೆ ಈ ಕಾಯ್ದೆಯಿಂದಾಗಿ ಯೋಜನೆಗಳ ವೆಚ್ಚದಲ್ಲಿ ಹೆಚ್ಚಳವಾಯಿತು.

ಆ ಸಮಸ್ಯೆಯೇ ಇದೀಗ ಐಎಲ್‌ ಆ್ಯಂಡ್‌ ಎಫ್ಎಸ್‌ ಕಂಪನಿಯನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ವೆಚ್ಚ ಹೆಚ್ಚಳ ಹಾಗೂ ಪೂರ್ಣಗೊಳ್ಳದೇ ಬಾಕಿ ಉಳಿದ ಯೋಜನೆಗಳಿಂದಾಗಿ 17 ಸಾವಿರ ಕೋಟಿ ರೂ. ಹೊರೆಯಾಯಿತು. ಇನ್ನೊಂದೆಡೆ 14 ಸಾವಿರ ಕಿ.ಮೀ ಉದ್ದದ 30 ಯೋಜನೆಗಳಲ್ಲಿ ಕಂಪನಿ ಹೂಡಿಕೆ ಮಾಡಿರುವುದರಿಂದ, 2015ರ ನಂತರ ಒಂದೇ ಒಂದು ಬಿಡ್‌ನ‌ಲ್ಲೂ ಕಂಪನಿ ಭಾಗವಹಿಸಲು ಸಾಧ್ಯವಾಗಿಲ್ಲ.

ಸಾಲ ಸೋಲ!: 1987ರಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಪಡೆದ ಸಾಲದಲ್ಲಿ ಉದ್ಯಮಿ ಎಂ.ಜೆ.ಫೆರ್ವಾನಿ ಈ ಕಂಪನಿ ಹುಟ್ಟುಹಾಕಿದ್ದರು. ಇದಕ್ಕೆ ಯುಟಿಐ ಹಾಗೂ ಎಚ್‌ಡಿಎಫ್ಸಿ ಕೂಡ ಹಣ ಹೂಡಿಕೆ ಮಾಡಿದ್ದವು. ಕಳೆದ ಎರಡು ದಶಕಗಳಲ್ಲಿ ಬಹುತೇಕ ಹಣಕಾಸು ಸಂಸ್ಥೆಗಳಿಗೆ ಮೂಲಸೌಕರ್ಯ ಯೋಜನೆಗಳ ಮೇಲೆ ಹೂಡಿಕೆ ಮಾಡುವುದು ಮೊದಲಿನ ಆದ್ಯತೆಯಾಗಿತ್ತು.

ಸದ್ಯ ಕಂಪನಿ 24 ಅಂಗಸಂಸ್ಥೆಗಳು, 135 ಪರೋಕ್ಷ ಅಂಗಸಂಸ್ಥೆಗಳು, ಆರು ಜಂಟಿ ಸಂಸ್ಥೆಗಳು ಹಾಗೂ ನಾಲ್ಕು ಅಸೋಸಿಯೇಟ್‌ ಕಂಪನಿಗಳನ್ನು ಹೊಂದಿದೆ. ಕಂಪನಿಯ ತಲೆಯ ಮೇಲಿರುವ ಹೊರೆ 91 ಸಾವಿರ ಕೋಟಿ ರೂ. ಈ ಪೈಕಿ 60 ಸಾವಿರ ಕೋಟಿ ರು. ಪ್ರಾಜೆಕ್ಟ್‌ನಲ್ಲೇ ಬಿದ್ದಿದೆ!

ಸಮಸ್ಯೆ ಶುರುವಾಗಿದ್ದೆಲ್ಲಿ?: ಐಎಲ್‌ ಆ್ಯಂಡ್‌ ಎಫ್ಎಸ್‌ ಕಂಪನಿಯ ಸಮಸ್ಯೆ ಶುರುವಾಗಿದ್ದೇ ಭೂಸ್ವಾಧೀನ ಕಾಯ್ದೆಯಿಂದಾಗಿ! ಕಾನೂನು ಬರುವುದಕ್ಕೂ ಪೂರ್ವದಲ್ಲೇ ಭೂಮಿ ಕಳೆದುಕೊಂಡವರೆಲ್ಲ ಕೋರ್ಟ್‌ಗೆ ಹೋಗಿ ಹೆಚ್ಚುವರಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಆಗ ಕೋರ್ಟ್‌ ರೈತರಿಗೆ, ಹೆಚ್ಚುವರಿ ಪರಿಹಾರ ನೀಡಬೇಕೆಂದು ಆದೇಶಿಸಿತು. ಪರಿಣಾಮ ಕೋರ್ಟ್‌ ಆದೇಶಕ್ಕೆ ತಲೆಬಾಗಿ ಹೆಚ್ಚುವರಿ ಹಣವನ್ನು ಕಂಪನಿ ರೈತರಿಗೆ ಕೊಡಬೇಕಾಯಿತು.

ಇದು ಕಂಪನಿಗೆ ಹೊರೆಯಾಯಿತು. ಇನ್ನೊಂದೆಡೆ, ಹಲವು ಯೋಜನೆಗಳು ತಡವಾದವು. ಇವುಗಳ ಹೊರೆಯೂ ಕಂಪನಿಯ ಮೇಲೆಯೇ ಬಿತ್ತು. ಅಚ್ಚರಿಯ ಸಂಗತಿಯೆಂದರೆ, ಐಎಲ್‌ ಆ್ಯಂಡ್‌ ಎಫ್ಎಸ್‌ ಸಮಸ್ಯೆಯ ಸುಳಿಗೆ ಸಿಲುಕುತ್ತಿದೆ ಎಂದು ಅರಿವಾಗುವುದಕ್ಕೂ ಮುನ್ನವೇ ಎಲ್‌ ಆ್ಯಂಡ್‌ ಟಿ ಎಚ್ಚೆತ್ತುಕೊಂಡಿತ್ತು. ಇಂಥದ್ದೇ ಕಾರಣಗಳಿಗೆ ಚೆನ್ನೈನ ಟೋಲ್‌ವೇ ಒಂದನ್ನು ಸರ್ಕಾರಕ್ಕೆ ವಾಪಸ್‌ ನೀಡಿ, ಈ ಯೋಜನೆಯಿಂದಲೇ ಎಲ್‌ ಅಂಡ್‌ ಟಿ ಹೊರಬಂತು. ಇದು ಕಂಪನಿಯ ಅತ್ಯಂತ ಚಾಣಾಕ್ಷ ನಿರ್ಧಾರ. 

ಮಿಸ್ಸಾಯ್ತು ಚಾನ್ಸ್‌!: ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಹೇಗೆ ಷೇರುದಾರರ ಹಣವನ್ನು ಒಂದು ಕಂಪನಿ ಕಳೆದುಬಿಡಬಹುದು ಎಂಬುದಕ್ಕೆ ಐಎಲ್‌ ಆ್ಯಂಡ್‌ ಎಫ್ಎಸ್‌ ಒಂದು ಉತ್ತಮ ಉದಾಹರಣೆ. ತನ್ನ ಔಷಧ ಕಂಪನಿ ಅಬ್ಬೊಟ್‌ ನಿಂದ 17 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದ ಅಜಯ್‌ ಪಿರಾಮಲ್‌, 2014ರಲ್ಲಿ ಐಎಲ್‌ ಆ್ಯಂಡ್‌ ಎಫ್ಎಸ್‌ನಲ್ಲಿ ಷೇರು ಖರೀದಿಗೆ ಮನಸು ಮಾಡಿದ್ದರು.

ಆಗ ಕಂಪನಿ 55 ಸಾವಿರ ಕೋಟಿ ರೂ. ಸಾಲದಲ್ಲಿತ್ತು. ಕಂಪನಿಯ ನಿವ್ವಳ ಸ್ವತ್ತು 9 ಸಾವಿರ ಕೋಟಿ ರೂ. ಆಗಿತ್ತು. ಪಿರಾಮಲ್‌ ಎಂಟರ್‌ಪ್ರೈಸಸ್‌ ಹೊಂದಿದ್ದ ಹಣಕಾಸು ಸಂಸ್ಥೆಯೊಂದಿಗೆ ಐಎಲ್‌ ಆ್ಯಂಡ್‌ ಎಫ್ಎಸ್‌ ವಿಲೀನಗೊಳಿಸುವ ಯೋಜನೆ ಅದಾಗಿತ್ತು. ಆದರೆ ಪ್ರತಿ ಷೇರಿಗೆ 1100 ರೂ. ಮೌಲ್ಯ ನೀಡಬೇಕು ಎಂದು, ಐಎಲ್‌ ಆ್ಯಂಡ್‌ ಎಫ್ಎಸ್‌ನಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಹೊಂದಿದ್ದ ಎಲ್‌ಐಸಿ ಆಡಳಿತ ಮಂಡಳಿ ಪಟ್ಟು ಹಿಡಿದು ಕೂತಿತ್ತು.

ಎಸ್‌ಬಿಐ ಕ್ಯಾಪಿಟಲ್‌ ಆಗ, ವಿಶ್ಲೇಷಣೆ ನಡೆಸಿ ಒಂದು ಷೇರಿಗೆ 750 ರೂ. ಬೆಲೆ ಕಟ್ಟಬಹುದು ಎಂದಿತ್ತಾದರೂ, ಎಲ್‌ಐಸಿ ತನ್ನ ಪಟ್ಟು ಬಿಡಲಿಲ್ಲ. ಹೀಗಾಗಿ ಪಿರಾಮಲ್‌ ಗ್ರೂಪ್‌ ದೂರವುಳಿಯಿತು. ಡೀಲ್‌ ಕುದುರಲಿಲ್ಲ. ಆಗ ಒಂದೊಮ್ಮೆ ವ್ಯವಹಾರ ಕುದುರಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಂಸ್ಥೆ ಸಂಕಷ್ಟದಲ್ಲಿದ್ದರೂ ಸಾರ್ವಜನಿಕ ವಲಯದ ಕಂಪನಿಯ ರೀತಿ ಜಡಸ್ಥಿತಿಯಲ್ಲೇ ಮುಂದುವರೆಯಿತು. ಕಂಪನಿಯ ಸಿಇಒ ರವಿ ಪಾರ್ಥಸಾರಥಿ, ಕಂಪನಿಯನ್ನು ನೂಕುತ್ತಲೇ ಹೋದರು.

ಮಾರಾಟವೇ ಪರಿಹಾರ: ಈಗ ಕಂಪನಿಯ ಬಳಿ ಇರುವುದೊಂದೇ ಪರಿಹಾರ. ಸಮಸ್ಯೆ ನಿವಾರಿಸಲು ಎಲ್‌ಐಸಿ ಬಳಿ ಓಡುವುದು ಹಾಗೂ ಇನ್ನಷ್ಟು ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೇಳುವುದು. ಇದೆಲ್ಲದರ ಹೊರತಾಗಿ ಸದ್ಯ ಇರುವ 25 ಪ್ರಾಜೆಕ್ಟ್ಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುವುದು. ಈ ಪೈಕಿ 14 ಪ್ರಾಜೆಕ್ಟ್ಗಳನ್ನು ಖರೀದಿಸಲು ಇತರ ಕಂಪನಿಗಳು ಮುಂದಾಗಿವೆ.

ಅಷ್ಟಾದರೂ, ಈ ಪ್ರಕ್ರಿಯೆ ನಾಲ್ಕಾರು ದಿನದಲ್ಲಿ ಮುಗಿಯುವುದಿಲ್ಲ. ಕನಿಷ್ಠ 18 ತಿಂಗಳು ಬೇಕಿರುತ್ತವೆ. 14 ಪ್ರಾಜೆಕ್ಟ್ಗಳನ್ನು ಮಾರಿದರೆ ಕಂಪನಿಯ ಸಾಲದ ಮೊತ್ತ 30 ಸಾವಿರ ಕೋಟಿ ರೂ. ಗೆ ಇಳಿಯಲಿದೆ. ಸದ್ಯ ಎಲ್‌ಐಸಿ, ಎಚ್‌ಡಿಎಫ್ಸಿ, ಜಪಾನ್‌ನ  ಒರಿಕ್ಸ್‌ ಕಾರ್ಪ್‌ ಮತ್ತು ಅಬುಧಾಬಿ ಇನ್ವೆಸ್ಟ್‌ಮೆಂಟ್‌ ಅಥಾರಿಟಿಯ ಕೈಯಲ್ಲಿ ಐಎಲ್‌ ಆ್ಯಂಡ್‌ ಎಫ್ಎಸ್‌ ಹಣೆಬರಹವಿದೆ.

ಸಮಯಕ್ಕೆ ಸರಿಯಾಗಿ ಸಮಸ್ಯೆ ಪರಿಹಾರ ಮಾಡುವ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿ ಈಗ ಕಂಪನಿ ದಿವಾಳಿಯಾಗಿದೆ ಎಂದು ಘೋಷಣೆ ಮಾಡುವ ಸನ್ನಿವೇಶಕ್ಕೆ ಆಡಳಿತ ಮಂಡಳಿ ತಂದಿಟ್ಟಿದೆ. ಇದರ ಪರಿಣಾಮ ಹಲವು ಬ್ಯಾಂಕ್‌ಗಳು ಹಾಗೂ ಮ್ಯೂಚುವಲ್‌ ಫ‌ಂಡ್‌ಗಳ ಮೇಲೂ ಬೀರಿದೆ. ಹಲವು ಮ್ಯೂಚುವಲ್‌ ಫ‌ಂಡ್‌ಗಳು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದವು. ಸದ್ಯದ ಮಟ್ಟಿಗೆ ಆಡಳಿತ ಮಂಡಳಿಯನ್ನು ಬದಲಿಸಲು ಸರ್ಕಾರ ನಿರ್ಧರಿಸಿದೆ. 

ಆರ್ಥಿಕ ಕುಸಿತದ ಭೀತಿ: 2008ರಲ್ಲಿ ವಿಶ್ವ ಆರ್ಥಿಕ ಕುಸಿತಕ್ಕೆ ಕಾರಣವಾಗಿದ್ದು ಲೇಹ್‌ಮನ್‌ ಬ್ರದರ್ಸ್‌ ಹಣಕಾಸು ಸಂಸ್ಥೆಯ ಕುಸಿತದಿಂದ. ಅದರ 10ನೇ ವರ್ಷಾಚರಣೆಯ ದಿನದಂದೇ ಐಎಲ್‌ ಆ್ಯಂಡ್‌ ಎಫ್ಎಸ್‌ ಸಮಸ್ಯೆಯೂ ಮುನ್ನೆಲೆಗೆ ಬಂತು. ಇದು ಇಡೀ ಮಾರುಕಟ್ಟೆಯನ್ನು ತಲ್ಲಣಗೊಳಿಸಿಬಿಟ್ಟಿತ್ತು. ಭಾರತದಲ್ಲೂ ಲೇಹ್‌ಮನ್‌ ಬ್ರದರ್ಸ್‌ ರೀತಿ ಐಎಲ್‌ ಆ್ಯಂಡ್‌ ಎಫ್ಎಸ್‌ ಕುಸಿಯಿತು.

ಇದರೊಂದಿಗೆ ಹಣಕಾಸು ಸಂಸ್ಥೆಗಳು ಹಾಗೂ ಮ್ಯೂಚುವಲ್‌ ಫ‌ಂಡ್‌ ಹೌಸ್‌ಗಳೂ ಕುಸಿಯುತ್ತವೆ ಎಂದು ಹೂಡಿಕೆದಾರರು ದಿಕ್ಕಾಪಾಲಾದರು. ಆದರೆ ಐಎಲ್‌ ಆ್ಯಂಡ್‌ ಎಫ್ಎಸ್‌ ಪ್ರಕರಣಕ್ಕೂ ಲೇಹ್‌ಮನ್‌ ಬ್ರದರ್ಸ್‌ ಪ್ರಕರಣಕ್ಕೂ ಬಾರಿ ವ್ಯತ್ಯಾಸವಿದೆ. ಅದೂ ಅಲ್ಲದೆ, ಐಎಲ್‌ ಆ್ಯಂಡ್‌ ಎಫ್ಎಸ್‌ ಸಮಸ್ಯೆ ಸರಿಪಡಿಸುವುದು ದೊಡ್ಡ ಸಂಗತಿಯಲ್ಲವೇ ಅಲ್ಲ.

* ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next