Advertisement

ಹೂಡಿಕೆ ಗದ್ದಲ; ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯವೇ ಉತ್ತಮ ಎಂದ ಸಿಎಂ

01:40 AM Apr 09, 2022 | Team Udayavani |

ಬೆಂಗಳೂರು: ರಾಜಧಾನಿಯ ಮೂಲಸೌಕರ್ಯದ ಬಗ್ಗೆ  ಮೋಹನ್‌ದಾಸ್‌ ಪೈ ಸಹಿತ ಕೆಲವು ಪ್ರಮುಖ ಉದ್ಯಮಿಗಳು ಮಾಡಿರುವ ಟ್ವೀಟ್‌ ಸಂಬಂಧ ರಾಜ್ಯದಲ್ಲಿ ರಾಜಕೀಯ ವಾಕ್ಸಮರ ಶುರುವಾಗಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಿಡಿಕಾರಿವೆ. ಆದರೆ ಬೆಂಗಳೂರಿನ ಮೂಲಸೌಕರ್ಯ ಚೆನ್ನಾಗಿದೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಗತಿ ಸಹಿಸದೆ ಬೇರೆ ರಾಜ್ಯಗಳು ಕರ್ನಾಟಕದ ವಿರುದ್ಧ ಹಗೆ ಸಾಧಿಸುತ್ತಿವೆ ಎಂದಿದ್ದಾರೆ.

Advertisement

ಇತ್ತೀಚೆಗಷ್ಟೇ ಖಾತಾಬುಕ್‌ನ ಸಿಇಒವೊಬ್ಬರು ಬೆಂಗಳೂರಿನ ಕಳಪೆ ಮೂಲಸೌಕರ್ಯದ ವಿರುದ್ಧ ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ತೆಲಂಗಾಣದ ಐಟಿ ಮತ್ತು ಕೈಗಾರಿಕೆ ಸಚಿವ ಕೆ.ಟಿ. ರಾಮರಾವ್‌ ಅವರು “ತೆಲಂಗಾಣಕ್ಕೆ ಬನ್ನಿ’ ಎಂದು ಉದ್ಯಮಿಗಳಿಗೆ ಆಹ್ವಾನ ನೀಡಿದ್ದರು. ಗುರುವಾರ ತಮಿಳುನಾಡಿನ ವಿತ್ತ ಸಚಿವ ಪಳನಿವೇಲು ತ್ಯಾಗರಾಜನ್‌ ಕೂಡ ಕರ್ನಾಟಕದ ಕೈಗಾರಿಕೆಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದರು. ಈ ಎಲ್ಲ ಬೆಳವಣಿಗೆಗಳು ರಾಜ್ಯದ ಮುಜುಗರಕ್ಕೆ ಕಾರಣವಾಗಿದ್ದವು.

ಮೋಹನ್‌ದಾಸ್‌ ಪೈ ಹೇಳಿದ್ದೇನು?
“1.69 ಲಕ್ಷ ಕೋಟಿ ರೂ. ತೆರಿಗೆ ವಸೂಲಿಯಾಗುತ್ತಿರುವ ಬೆಂಗಳೂರು ಮೂಲಸೌಕರ್ಯಗಳಿಲ್ಲದೆ ಕೊರಗುತ್ತಿದೆ’ ಎಂದು ಟ್ವೀಟ್‌ ಮಾಡಿದ್ದ ಮೋಹನದಾಸ್‌ ಪೈ ಅವರು ಅದನ್ನು ಮೋದಿಯವರಿಗೂ ಟ್ಯಾಗ್‌ ಮಾಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ, ಬೀದಿದೀಪ ಸಹಿತ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ. ಬಿಬಿಎಂಪಿ, ಬಿಡಿಎ ಸೇರಿ ಎಲ್ಲಿ ಏನೇ ಕೆಲಸ ಮಾಡಿಸಿಕೊಳ್ಳಬೇಕಾದರೂ ಲಂಚ ಕೊಡಬೇಕು. ಇದೆಂತಹ ಸರಕಾರ? ಹಿಂದೆ ಕಾಂಗ್ರೆಸ್‌  ಮಾಡಿದ್ದನ್ನೇ ಈಗ ಬಿಜೆಪಿಯೂ ಮಾಡುತ್ತಿದೆ. ಒಂದು ಚಿಕ್ಕ ರಸ್ತೆ ಬೇಕಾದರೂ ಮುಖ್ಯಮಂತ್ರಿಯನ್ನು ಕೇಳುವಂಥ ಪರಿಸ್ಥಿತಿ ಇದೆ. ತೆರಿಗೆ ಕಟ್ಟುವ ನಮಗೆ ಮೂಲಸೌಕರ್ಯ ಕೇಳುವ ಹಕ್ಕಿದೆ. ನಾವು ಭಿಕ್ಷೆ ಬೇಡಬೇಕಾಗಿಲ್ಲ. ಬೆಂಗಳೂರು ಅಭಿವೃದ್ಧಿ ನಿಂತು ಹೋದರೆ ದೇಶದ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ’ ಎಂದು  ಕಟು ಮಾತುಗಳಲ್ಲಿ ಹೇಳಿದ್ದರು.

ಇದನ್ನೂ ಓದಿ:ಫಾಸ್ಟ್ಯಾಗ್ ಮೂಲಕ 38,000 ಕೋಟಿ ರೂ. ಟೋಲ್‌ ಸಂಗ್ರಹ

ಎಚ್‌ಡಿಕೆ ಕಿಡಿ
ಮೋಹನ್‌ದಾಸ್‌ ಪೈಗಳ ಟ್ವೀಟ್‌ ಬೆನ್ನಲ್ಲೇ ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಸರಕಾರದ ಯೋಗ್ಯತೆಯನ್ನೇ ಪ್ರಶ್ನಿಸಿದ್ದಾರೆ. “ಬೆಂಗಳೂರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರಕ್ಕೆ ಸೂಚನೆ ನೀಡಿ ಎಂದು ಮೋಹನ್‌ದಾಸ್‌ ಪೈ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

Advertisement

ಬಿಜೆಪಿ ಹಣೆಬರಹ ಎಲ್ಲಿಗೆ ಬಂದಿದೆ ನೋಡಿ.  ಬೆಂಗಳೂರಿನಲ್ಲಿ ಸರಕಾರ ಕೆಲಸ ಮಾಡಲು ಪ್ರಧಾನಿಗೆ ಮನವಿ ಸಲ್ಲಿಸಬೇಕು ಇಲ್ಲವೇ ಹೈಕೋರ್ಟ್‌ ನಿರ್ದೇಶನ ನೀಡಬೇಕು. ಪೈಗಳ ಟ್ವೀಟ್‌ ಸರಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ  ಎಂದು  ಟೀಕಿಸಿದ್ದಾರೆ.

ಕಾನೂನು ಸುವ್ಯವಸ್ಥೆಯೂ ಸರಿ ಇಲ್ಲ
ಇನ್ನೊಂದೆಡೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ ಎಂದು ನೇರವಾಗಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ಬಂಡವಾಳ ಹೂಡುವವರು ಬರುವುದಿಲ್ಲ. ಬಂಡವಾಳ ಹೂಡುವವರು ಬರದಿದ್ದರೆ ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ. ಹೀಗಾಗಿಯೇ ಹತ್ತು ಸಾವಿರ ಮಂದಿಗೆ ಉದ್ಯೋಗ ನೀಡುತ್ತಿದ್ದ ಓಲಾ ಬೈಕ್‌ ತಮಿಳುನಾಡಿಗೆ ಹೋಯಿತು ಎಂದಿದ್ದಾರೆ.

ಮುಖ್ಯಮಂತ್ರಿ ಸಮರ್ಥನೆ
ಪೈಗಳ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಳೆಗಾಲದಲ್ಲಿ ಸ್ವಲ್ಪ ತೊಂದರೆ ಇತ್ತು. ಈಗ ರಸ್ತೆಗಳು ಸರಿಯಾಗುತ್ತಿದ್ದು, ಬಹಳಷ್ಟು ಸುಧಾರಣೆಯಾಗಿದೆ. ಮುಂದೆ ಇನ್ನಷ್ಟು ಸುಧಾರಣೆಯಾಗಲಿದೆ ಎಂದರು.  ಪೈಗಳ ಜತೆಗೆ  ನಾನು ವೈಯಕ್ತಿಕವಾಗಿ  ಮಾತನಾಡುತ್ತೇನೆ. ನಗರೋತ್ಥಾನ ಯೋಜನೆಯಡಿ ಬಿಬಿಎಂಪಿಗೆ ಹಣ ಬಿಡುಗಡೆಯಾಗಿದೆ.  ಬಿಬಿಎಂಪಿ ಬಜೆಟ್‌ ಕೂಡ ಆಗಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆಗಳ ಸುಧಾರಣೆಯಾಗುತ್ತದೆ ಎಂದರು.

ತೆಲಂಗಾಣ, ತಮಿಳುನಾಡು ವಿರುದ್ಧ ಸಿಎಂ ಆಕ್ರೋಶ
ಕರ್ನಾಟಕದ ಉದ್ದಿಮೆಗಳನ್ನು ತಮ್ಮ ರಾಜ್ಯಕ್ಕೆ ಕರೆಯುತ್ತಿರುವ ತೆಲಂಗಾಣ ಮತ್ತು ತಮಿಳುನಾಡು ಸರಕಾರಗಳ ವಿರುದ್ಧವೂ  ಬೊಮ್ಮಾಯಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಎಂದೂ ಕಿಡಿಕಾರಿದ್ದಾರೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕದ ಆಸುಪಾಸು ಕೂಡ ತೆಲಂಗಾಣವಾಗಲಿ, ತಮಿಳುನಾಡು ಆಗಲಿ ಇಲ್ಲ. ಇದರಿಂದ ಹತಾಶೆಗೊಳಗಾಗಿ ಅಲ್ಲಿನ ಕೆಲವರು ಇಲ್ಲಿನ ಉದ್ಯಮಿಗಳಿಗೆ ತಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ’ ಎಂದು ತೀಕ್ಷ್ಣವಾಗಿ ಹೇಳಿದರು.

ನೆರೆ ರಾಜ್ಯಗಳನ್ನು ತೆಗಳಿ ತಮ್ಮ ರಾಜ್ಯಕ್ಕೆ ಉದ್ಯಮಿಗಳನ್ನು ಆಹ್ವಾನಿಸುವುದು ಅತ್ಯಂತ ಕೆಟ್ಟ ಬೆಳವಣಿಗೆ. ತಮ್ಮಲ್ಲಿನ ಶಕ್ತಿ-ಸಾಮರ್ಥ್ಯ, ಸೌಲಭ್ಯಗಳ ಬಗ್ಗೆ ಹೇಳಿಕೊಂಡು, ಉದ್ಯಮಿಗಳ ಮನವೊಲಿಸ ಬೇಕು. ಅದು ಬಿಟ್ಟು, ಅಲ್ಲಿ ಚೆನ್ನಾಗಿಲ್ಲ; ಇಲ್ಲಿಬನ್ನಿ ಎನ್ನುವುದು ಎಷ್ಟು ಸರಿ? ನಾನು ಯಾವತ್ತೂ ತಮಿಳುನಾಡು ಅಥವಾ ತೆಲಂಗಾಣದಲ್ಲಿ ಸೌಲಭ್ಯಗಳು ಸರಿ ಇಲ್ಲ. ನಮ್ಮ ಲ್ಲಿಗೆ ಬನ್ನಿ ಎಂದು ಕರೆದಿಲ್ಲ. ಇದು ನಮ್ಮ ನಿಜವಾದ ಸಾಮರ್ಥ್ಯ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next