ಬೆಂಗಳೂರು: ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರಿಗೆ ಕಿರುಕುಳ ನೀಡಿ ಅವರಿಂದ ಪ್ರತಿ ವಾರ ಹಣ ವಸೂಲಿ ಮಾಡಿ ಬಂದಂತಹ ಲಕ್ಷಾಂತರ ರೂ. ಹಣವನ್ನು ಬಿಟ್ ಕಾಯಿನ್ ದಂಧೆಯಲ್ಲಿ ಹೂಡಿಕೆ ಮಾಡಿದ್ದ 10 ನೌಕರರನ್ನು ಬಿಎಂಟಿಸಿ ಅಮಾನತು ಮಾಡಿದೆ.
ಬಿಎಂಟಿಸಿ ದಕ್ಷಿಣ ವಿಭಾಗದ ಬನಶಂಕರಿ ಡಿಪೋ-20ರ ಕಮರ್ಷಿಯಲ್ ವಿಭಾಗದಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಭದ್ರತಾ ಮತ್ತು ಜಾಗೃತ ದಳದ ತನಿಖೆಯಲ್ಲಿ 10 ನೌಕರರ ಅಕ್ರಮ ಬಯಲಾಗಿದ್ದು, ಎಲ್ಲರನ್ನೂ ಬಿಎಂಟಿಸಿ ಅಮಾನತು ಮಾಡಿದೆ. ಇದರಲ್ಲಿ ಒಂಬತ್ತು ಅಧಿಕಾರಿಗಳು ತಮ್ಮ ತಂದೆ, ತಾಯಿಯ ಅನುಕಂಪದ ಆಧಾರದ ಮೇಲೆ ಬಿಎಂಟಿಸಿ ಕೆಲಸಕ್ಕೆ ಸೇರಿದ್ದರು ಎಂದು ಮೂಲಗಳು ತಿಳಿಸಿವೆ.
ಕಂಡಕ್ಟರ್, ಡ್ರೈವರ್ ಹಾಗೂ ಮೆಕ್ಯಾನಿಕ್‌ಗಳಿಗೆ ಮಾನಸಿಕವಾಗಿ ಹಿಂಸೆ ನೀಡಿ, ಅವರಿಂದ ಪ್ರತಿ ವಾರ ಐನೂರು, ಸಾವಿರ ಕಲೆಕ್ಷನ್ ಮಾಡಿ, ಒಟ್ಟು 17 ಲಕ್ಷ ರೂ. ಅನ್ನು ಬಿಟ್ ಕಾಯಿನ್ ದಂಧೆಯಲ್ಲಿ ಹೂಡಿಕೆ ಮಾಡಿದ್ದರು ಎಂದು ಹೇಳಿವೆ. ಎಂಟಿಸಿ ಭದ್ರತಾ ಮತ್ತು ಜಾಗೃತ ದಳದ ತನಿಖೆಯಲ್ಲಿ ಇದು ಬಯಲಾಗಿತ್ತು ಎಂದಿವೆ.
ಮತ್ತೆ ಇಬ್ಬರ ಬಂಧನ: ರಾಜ್ಯ ಸರ್ಕಾರದ ಇ-ಪ್ರಕ್ಯೂರ್‌ವೆುಂಟ್ ವೆಬ್ ಸೈಟ್ ಹ್ಯಾಕ್ 11.5 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಸಿಐಡಿ ವಿಶೇಷ ತನಿಖಾ ತಂಡ ಮಹಾ ರಾಷ್ಟ್ರದ ನಾಗಪುರ ಮೂಲದ ನಿತಿನ್ ಮೆಶ್ರಾಮ್ ಹಾಗೂ ದರ್ಶಿತ್ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ.