Advertisement

ಚಿನ್ನದ ಸರ ಕಸಿದಿದ್ದ ಆರೋಪಿ ಸೆರೆ

12:05 PM Dec 26, 2018 | |

ಬೆಂಗಳೂರು: ಚಿನ್ನದ ಸರ ಕಸಿದುಕೊಳ್ಳಲು ಮಹಿಳೆಯ ಕತ್ತು ಕೊಯ್ದಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಯಶವಂತಪುರದ ಮುತ್ಯಾಲನಗರ ನಿವಾಸಿ ವಿನೋದ್‌ (30) ಬಂಧಿತ. ಆರೋಪಿ ಡಿ.24ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿನಾಯಕ ಲೇಔಟ್‌ ನಿವಾಸಿ ವನಜಾಕ್ಷಿ (49) ಎಂಬುವರ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸುವ ವೇಳೆ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವೆಂಕಟೇಶ್‌ ಅವರ ಪತ್ನಿ ವನಜಾಕ್ಷಿ ಮನೆಗೆ ಹೊಂದಿಕೊಂಡಂತೆ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಪಿ ವಿನೋದ್‌, ಸಿಗರೇಟ್‌ ಕೇಳುವ ನೆಪದಲ್ಲಿ ಅಂಗಡಿಗೆ ಬಂದಿದ್ದಾನೆ. ಸಿಗರೇಟ್‌ ಕೊಟ್ಟ ವನಜಾಕ್ಷಿ, ಮನೆಯೊಳಗೆ ಹೋಗಿದ್ದಾರೆ. ಕೂಡಲೇ ಹಿಂಬಾಲಿಸಿದ ಆರೋಪಿ, ಅವರ ಸರ ಕಸಿದುಕೊಳ್ಳಲು ಯತ್ನಿಸಿದ್ದು, ವನಜಾಕ್ಷಿ ವಿರೋಧ ವ್ಯಕ್ತಪಡಿಸಿ ರಕ್ಷಣೆಗಾಗಿ ಕೂಗಲಾರಂಭಿಸಿದ್ದಾರೆ.

ಈ ವೇಳೆ ಕೋಪಗೊಂಡ ವಿನೋದ್‌, ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಅವರ ಕುತ್ತಿಗೆ ಇರಿದ್ದಾನೆ. ಈ ವೇಳೆ ಚಿನ್ನದ ಸರ ಕಸಿದುಕೊಂಡು ಸ್ವಲ್ಪ ಭಾಗ ಅಲ್ಲೆ ಉಳಿದಿದೆ. ಮಿಕ್ಕ ಚಿನ್ನ ಕಸಿದು ಆರೋಪಿ ಪರಾರಿಯಾಗಿದ್ದಾನೆ. ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ವನಜಾಕ್ಷಿ ಪತಿ ವೆಂಕಟೇಶ್‌ ಮತ್ತು ಆರೋಪಿ ವಿನೋದ್‌ ದೊಡ್ಡಪ್ಪ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿಯ ದೊಡ್ಡಪ್ಪ ವನಜಾಕ್ಷಿ ಅವರ ದಿನಸಿ ಅಂಗಡಿಯಲ್ಲಿ ಪದಾರ್ಥಗಳನ್ನು ಕೊಂಡೊಯ್ಯುಲು ಬರುತ್ತಿದ್ದರು. ಈ ವೇಳೆ ದೊಡ್ಡಪ್ಪನ ಜತೆ ಆಗಾಗ್ಗೆ ಬರುತ್ತಿದ್ದ ಆರೋಪಿ ವಿನೋದ್‌, ವನಜಾಕ್ಷಿ ಒಂಟಿಯಾಗಿ ಇರುತ್ತಿದ್ದ ಬಗ್ಗೆ ತಿಳಿದುಕೊಂಡಿದ್ದ.

ಸೋಮವಾರ ಮಧ್ಯಾಹ್ನ ಅಂಗಡಿಗೆ ಬಂದ ಆರೋಪಿ ತನ್ನ ದೊಡ್ಡಪ್ಪನ ಹೆಸರು ಹೇಳಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ಸಿಗರೇಟ್‌ ಖರೀದಿಸಿ ಕೃತ್ಯವೆಸಗಿ ಪರಾರಿಯಾಗಿದ್ದ. ಈ ಮಾಹಿತಿ ಕುರಿತ ಪ್ರಕರಣ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

Advertisement

ಸಾಲ ತೀರಿಸಲು ಕೃತ್ಯ: ಅವಿವಾಹಿತನಾಗಿರುವ ಆರೋಪಿ ವಿನೋದ್‌ ಮುತ್ಯಾಲನಗರದ ಬೇಕರಿಯೊಂದರ ನೌಕರ. ಆದರೆ, ತನ್ನ ಸಂಬಳದಲ್ಲಿ ನಾಲ್ವರು ಸಹೋದರು, ಒಬ್ಬ ಸಹೋದರಿ ಹಾಗೂ ತಾಯಿಯನ್ನು ನೋಡಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಸ್ನೇಹಿತರು ಹಾಗೂ ಕೆಲ ಸಂಬಂಧಿಗಳ ಬಳಿ ಲಕ್ಷಾಂತರ ರೂ.ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲಾಗದೆ, ಸರಗಳ್ಳತನಕ್ಕೆ ಇಳಿದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next