ಹೊಸದಿಲ್ಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸಿಬ್ಬಂದಿಗಳಿದ್ದ ಹೆಲಿಕಾಪ್ಟರ್ ಪತನಕ್ಕೆ ಪೈಲಟ್ ದೋಷವೇ ಕಾರಣ ಎಂದು ತನಿಖಾ ತಂಡದ ಪ್ರಾಥಮಿಕ ಸಂಶೋಧನೆಗಳು ತಿಳಿಸಿವೆ.
ಡಿ. 8ರಂದು ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿತ್ತು. ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಬದುಕುಳಿದಿದ್ದ ಪೈಲಟ್ ಕ್ಯಾ. ವರುಣ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ:ಕೋವಿಡ್ ಲಸಿಕೆಯಿಂದ ಪಾರ್ಶ್ವವಾಯು ಗುಣಮುಖ? ಜಾರ್ಖಂಡ್ ನಲ್ಲೊಂದು ಪವಾಡ!
ಮೋಡ ಕವಿದ ವಾತಾವರಣದ ಜತೆಗೆ ಪೈಲಟ್ ದೋಷವೇ ಹೆಲಿಕಾಪ್ಟರ್ ಪತನಕ್ಕೆ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮೋಡ ಕವಿದ ವಾತಾವರಣಕ್ಕೆ ಕಾಪ್ಟರ್ ಪ್ರವೇಶಿಸುತ್ತಿದ್ದಂತೆ ಕಣಿವೆಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಯಾಗಿತ್ತು, ಇದರಿಂದ ಪೈಲಟ್ ದಿಗ್ಭ್ರಾಂತಗೊಂಡಿದ್ದಾರೆ. ದಾರಿ ಸ್ಪಷ್ಟವಾಗಿ ಗೋಚರಿಸದೇ ಭಯಭೀತರಾದ ಹೆಲಿಕಾಪ್ಟರನ್ನು ಭೂಪ್ರದೇಶಕ್ಕೆ ನುಗ್ಗಿಸಿದಾಗ ಪತನ ಸಂಭವಿಸಿದೆ ಎಂದು ಸೇನಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗಿದೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 12 ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಹೊತ್ತೊಯ್ದ Mi-17V5 ಹೆಲಿಕಾಪ್ಟರ್ ತಮಿಳುನಾಡಿನ ಕೊಯಮತ್ತೂರಿನ ಸೂಲೂರ್ ಏರ್ ಫೋರ್ಸ್ ಬೇಸ್‌ನಿಂದ ವೆಲ್ಲಿಂಗ್ಟನ್ ನ ರಕ್ಷಣಾ ಸಿಬ್ಬಂದಿ ಸೇವಾ ಕಾಲೇಜಿಗೆ ತೆರಳಿದಾಗ ಈ ಅವಘಡ ಸಂಭವಿಸಿತ್ತು.